Search This Blog

Monday, April 27, 2009

ರಾಸಾಯನಿಕ ಗೊಬ್ಬರಗಳ ರಾಕ್ಷಸತನ...!

ರಾಸಾಯನಿಕ ಗೊಬ್ಬರಕ್ಕಾಗಿ ನೂಕು-ನುಗ್ಗಲು... ಸಾಲಬಾಧೆಯಿಂದ ರೈತನ ಆತ್ಮಹತ್ಯೆ - ಅತಿಯಾದ ರಾಸಾಯನಿಕ ಹಾಗು ಸಂಕರಣ ಬೀಜಗಳ ಬಳಕೆ ಕೃಷಿ-ವೆಚ್ಚವನ್ನು ವೃದ್ಧಿಸಿದೆ. ರಾಸಾಯನಿಕ ಗೊಬ್ಬರಗಳ ಅವಾಂತರಗಳನ್ನು ರೈತ ಸಮುದಾಯ ತಿಳಿದುಕೊಳ್ಳಬೇಕಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಆರೋಗ್ಯ, ಆಹಾರ ಮತ್ತು ಆನಂದಕ್ಕಾದ ಹಾನಿ ಆಪಾರ. ರಾಸಾಯನಿಕ ಗೊಬ್ಬರ ಕೇವಲ ಭ್ರಮೆ. ಇದು ಪೆಟ್ರೋ-ಕೆಮಿಕಲ್ಸ್ ಒಂದು ಉದ್ಯಮ. ಹೆಚ್ಚೆಚ್ಚು ಹಾಕಿದಷ್ಟು ಉತ್ಪಾದನೆ ಹಿಗ್ಗುವುದಿಲ್ಲ. ರಾಸಾಯನಿಕ ಗೊಬ್ಬರಗಳ ಸತ್ಯ-ಮಿತ್ಯಗಳ ಬಗ್ಗೆ ವಿವಿರವಾಗಿ ತಿಳಿದುಕೊಳ್ಳುವುದು ನಮ್ಮ-ನಿಮ್ಮೆಲ್ಲರ ಆದ್ಯ ಕರ್ತವ್ಯ.

ರಾಸಾಯನಿಕ ಗೊಬ್ಬರಗಳು ಈಗಿನ ಬಿ.ಜೆ.ಪಿ/BJP ಸರ್ಕಾರ ಅಧಿಕಾರ ನೆಡೆಸಿದಯಾಗೆ. ಪಕ್ಷೇತರ ಸಹಾಯವಿಲ್ಲದೆ ಅಧಿಕಾರ ಅಸಾಧ್ಯ. ಮಣ್ಣಿನಲ್ಲಿರುವ ಅಣುಜೀವಿ ಸಹಾಯವಿಲ್ಲದೆ ರಾಸಾಯನಿಕ ಗೊಬ್ಬರಗಳು ಬೆಳೆಗಳಿಗೆ ಪೋಷಕಾಂಶ ಒದಗಿಸಲೂ ಅಸಾಧ್ಯ.. ಈ ಗೊಬ್ಬರಗಳು ಅಣುಜೀವಿಗಳನ್ನು ಬೆಳೆಯಲು ಬಿಡುವುದಿಲ್ಲ. ಅಣುಜೀವಿಗಳು ಮತ್ತು ರಾಸಾಯನಿಕ ಗೊಬ್ಬರಗಳು ಎಣ್ಣೆ-ಸೀಗೆ ಇದ್ದಹಾಗೆ. ಕಳೆದ ವರ್ಷ ಬೆಂಗಳೂರಲ್ಲಿ ನೆಡೆದ ಬಾಂಬ್ ಸ್ಪೋಟದಲ್ಲಿ ಅಮೋನಿಯ ಬಳಸಿದ್ದು ಎಲ್ಲರಿಗೂ ನೆನೆಪಿರುವ ವಿಚಾರ. ಅದೇ ಅಮೋನಿಯನ್ನು ಯೂರಿಯ ಉತ್ಪಾದನೆಯಲ್ಲಿ ಬಳಸುತ್ತಾರೆ. ಬಾಂಬ್‌ಗೆ ಬಳಸುವ ಅಮೋನಿಯವನ್ನು ಗೊಬ್ಬರವಾಗಿ ಪರಿವರ್ತಿಸಿ ಮಾರಾಟ ಮಾಡುತ್ತಾರೆ. ಇಂತಹ ಗೊಬ್ಬರಕ್ಕಾಗಿ ರೈತರ ಪ್ರತಿಭಟನೆ, ರಸ್ತೆ ಚಳುವಳಿ ಸಾಮಾನ್ಯ. ಗುಂಪುನ್ನು ಚದುರಿಸಲು ಸರ್ಕಾರ ಗೋಲಿಬಾರ್ ಮಾಡಿದರು. ರೈತರು ಗೋಲಿಬಾರ್‌ನಲ್ಲಿ ಸತ್ತದ್ದು ಈಗ ಇತಿಹಾಸ. ವಿಷಕಾರಿ ಗೊಬ್ಬರಕ್ಕಾಗಿ ರೈತ ಸಮುದಾಯ ಮುಗಿಲು ಬೀಳುತ್ತಿರುವುದು ದುರಂತ. ಪೂರಕವಾಗಿ ರಾಸಾಯನಿಕ ಗೊಬ್ಬರಕ್ಕಾಗಿ ಸರ್ಕಾರ ಸಬ್ಸಿಡಿ ಕೊಡುತ್ತಿದೆ. ಮುಖ್ಯವಾಗಿ ರಾಸಾಯನಿಕ ಗೊಬ್ಬರಗಳಲ್ಲಿ ಪ್ರಧಾನ ಪೊಷಕಾಂಶಗಳಾದ ಸಾರಜನಕ, ರಂಜಕ ಮತ್ತು ಪೋಟ್ಯಾಶ್ ಗೊಬ್ಬರಗಳ ಬಳಕೆ ಅಧಿಕ. ಈ ಮೂರು ಗೊಬ್ಬರಗಳ ಬಗ್ಗೆ ವಿವಿರವಾಗಿ ತಿಳಿದುಕೊಳ್ಳುವ.

ಸಾರಜನಕ(N) ಬೆಳೆಗಳಿಗೆ ಅತಿ ಅವಶ್ಯಕ. ಮಣ್ಣು ಪರೀಕ್ಷೆ ನಂತರ ಬೆಳೆಗಳಿಗೆ ಇಂತಿಷ್ಟೆ ಸಾರಜನಕ ಬೇಕು ಎಂದು ನಮ್ಮ ವಿಜ್ಙಾನಿಗಳು ಹೇಳುತ್ತಾರೆ. ವಾತಾವರಣದಲ್ಲಿ ಶೇ ೭೮.೬ರಷ್ಟು ಸಾರಜನಕ ಇದೆ. ವಾತಾವರಣದಲ್ಲಿರುವ ಸಾರಜನಕವನ್ನು ನೇರವಾಗಿ ಬೆಳೆಗಳು ಪಡೆಯಲು ಆಗುವುದಿಲ್ಲ. ಎಲೆಗಳ ಮುಖಾಂತರವು ಬರುವುದಿಲ್ಲ. ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಲು ರೈಜೊಬಿಯಂ ಜೀವಾಣು ಬೇಕೆ ಬೇಕು. ರೈಜೊಬಿಯಂ ಒಂದು ಅಣುಜೀವಿ. ದ್ವಿದಳ ಬೆಳೆಗಳಾದ ತೋಗರಿ, ನೆಲಗಡಲೆ, ಅಲಸಂದೆ, ಹೆಸರು, ಸೆಣಬು, ಡಯಾಂಚ ಇತ್ಯಾದಿ ಬೇರುಗಳ ಗಂಟುಗಳಲ್ಲಿ ರೈಜೊಬಿಯಂ ಜೀವಾಣು ಬದುಕುತ್ತೆವೆ. ಅವುಗಳ ಸಹಾಯದಿಂದ ವಾತಾವರಣದಲ್ಲಿರುವ ಸಾರಜನಕವನ್ನು ಸ್ಥಿರಿಕರಿಸಿ ಮಣ್ಣಿಗೆ ಒದಗಿಸಲು ಸಾಧ್ಯ. ಸಾರಜನಿಕ ಸ್ಥಿರಿಕರಿಸುವ ಮರಗಳನ್ನು ಬೆಳೆಯಬೇಕು. ಕಬ್ಬಿನ ಸಾಲುಗಳ ನಡುವೆ ದ್ವಿದಳ ಜಾತಿಯ ಬೆಳೆಗಳನ್ನು ಬೆಳೆಯಬೇಕು. ಬಯಲು ಭೂಮಿಯಲ್ಲಿ ಬೆಳೆ ಬದಲಾಯಿಸಿ ದ್ವಿದಳ ಜಾತಿಯ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಸಾರಜನಕ ಕೊರತೆ ಬರುವುದಿಲ್ಲ. ಯೂರಿಯ ಗೊಬ್ಬರಕ್ಕಾಗಿ ಕಾರ್ಖಾನೆಗಳೇ ಬೇಕಾಗಿಲ್ಲ. ಯೂರಿಯ ಗೊಬ್ಬರದಲ್ಲಿ ಕೇವಲ ಶೇ ೪೬ರಷ್ಟು ಮಾತ್ರ ಸಾರಜನಕ ಇದೆ. ಇನ್ನುಳಿದ ಶೇ ೫೪ರಷ್ಟು ಏನು ಎಂದು ಯಾರು ಕೇಳಿಲ್ಲ ಅಥವಾ ಹೇಳಿಲ್ಲ. ಉದಾಹರಣೆಗೆ ಎರಡು ಮೂಟೆ/ಚೀಲ ಯೂರಿಯ ಗೊಬ್ಬರ ಬಳಸಿದರೆ ಕೇವಲ ೪೬ ಕೆ.ಜಿ ಮಾತ್ರ ಬಳಸಿದಾಗೆ (ಬೆಳೆಗಳಿಗೆ ಸಿಗುವುದು ಇನ್ನು ಕಮ್ಮಿ). ಹಾಗಾದರೆ ಇನ್ನುಳಿದಿದ್ದು ಏನು?. ನೀವು ೫೦೦/- ರೂಪಾಯಿ ಕೊಟ್ಟು ಎರಡು ಮೂಟೆ ಯೂರಿಯ ಗೊಬ್ಬರ ಖರೀದಿಸಿದರೆ ನಿಮಗೆ ಸಿಗುವುದು ಕೇವಲ ೨೩೦/- ರೂಪಾಯಿ ಯೂರಿಯ ಗೊಬ್ಬರ ಮಾತ್ರ. . ಇನ್ನಿಳಿದ ೨೭೦/- ರೂಪಾಯಿ ಹರೋ ಹರ... ಯೂರಿಯ ಗೊಬ್ಬರ ವ್ಯವಸ್ಥಿತ ಸಂಚು. ಗೊಬ್ಬರದ ಹೆಸರಿನಲ್ಲಿ ಬೃಹತ್ ಕಂಪನಿಗಳು ರೈತರ ದುಡ್ಡನ್ನ ಕೊಳ್ಳೆ ಹೊಡೆದು ಮಜಾ ಮಾಡುತ್ತಿರುವುದು ಸತ್ಯ. ವಾತಾವರಣದಲ್ಲಿರುವ ಸಾರಜನಕವನ್ನು ಉಚಿತವಾಗಿ ಭೂಮಿಗೆ ಸೇರಿಸಬಹುದು. ಪರಿಸರಕ್ಕೂ ದಕ್ಕೆ ಇಲ್ಲ, ಜೀವ-ಜಂತುಗಳಿಗೂ ಹಾನಿ ಇಲ್ಲ. ಕೇವಲ ದ್ವಿದಳ ಜಾತಿಯ ಬೆಳೆ/ಗಿಡ-ಮರಗಳನ್ನು ಬೆಳೆಸಿದರೆ ಸಾಕು ನಮಗೆ ಸಾರಜನಕ ಸಿಗುವುದು ಖಚಿತ. ಅನಾವ್ಯಶಕವಾಗಿ ಯೂರಿಯಾಕ್ಕಾಗಿ ಹಣ ಪೋಲ್ ಮಾಡಬೇಡಿ. ನಮ್ಮ ಪರಿಸರದಲ್ಲೆ ಸಿಗುವ ಹಸಿರಲೆ ಗೊಬ್ಬರ, ನಾನಾ ತರಹದ ಕಾಂಪೋಷ್ಟ ಗೊಬ್ಬರವನ್ನು ಬಳಸಿ.

ರಂಜಕ(P) ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ಕಾಳು ಗಟ್ಟಿತನಕ್ಕೆ ರಂಜಕ ಅತಿ ಅವಶ್ಯಕ. ರಂಜಕವು ಭೂಮಿಯಲ್ಲಿ ಗಿಡ-ಮರಗಳಿಗೆ ಸಿಗುವ ರೀತಿಯಲ್ಲಿಲ್ಲ. ತರಕಾರಿ ರೂಪದಲ್ಲಿ ಇದೆ, ಅಡಿಗೆ ರೂಪದಲ್ಲಿಲ್ಲ. ರಂಜಕವನ್ನು ಆಹಾರವಾಗಿ ಪರಿವರ್ತಿಸಿಸಲು ಸಂಬಂಧಿಸಿದ ಜೀವಾಣು ಅವಶ್ಯಕ. ಪರಿವರ್ತಿಸುವ ಅಣುಜೀವಿಗಳು ಭೂಮಿಯಲ್ಲಿ ಇದ್ದರೆ ಮಾತ್ರ ರಂಜಕವನ್ನು ಪೋಷಕಾಂಶವಾಗಿ ಬೆಳೆಗಳು ಹೀರಿಕೊಳ್ಳುತ್ತವೆ. ರಂಜಕವು ಏಕದಳ, ದ್ವಿದಳ ಹಾಗೂ ತ್ರಿದಳ ರೂಪದಲ್ಲಿ ಮಣ್ಣಿನಲ್ಲಿ ಸಿಗುತ್ತದೆ. ಏಕದಳ ರೂಪದಲ್ಲಿರುವ ರಂಜಕ ಮಾತ್ರ ಬೆಳೆಗಳಿಗೆ ಲಭ್ಯ. ಇನ್ನುಳಿದ ದ್ವಿದಳ ಮತ್ತು ತ್ರಿದಳ ರೂಪದಲ್ಲಿರುವ ರಂಜಕವನ್ನು ಬೆಳೆಗಳು ಬಳಸಲು ಅಸಾಧ್ಯ. ಏಕದಳವಾಗಿ ಪರಿವರ್ತಿಸಿದರೆ ಮಾತ್ರ ಬೆಳೆಗಳು ತೆಗೆದುಕೊಳ್ಳುತ್ತೆವೆ. ಏಕದಳವನ್ನಾಗಿ ಪರಿವರ್ತಿಸಲು ಪಿ.ಎಸ್.ಬಿ. (Phosphate Solubalising Bacteria) ಜೀವಾಣು ಅವಶ್ಯ. ಸಾಮಾನ್ಯವಾಗಿ ಎಲ್ಲಾ ತರಹದ ಕೃಷಿ ಭೂಮಿಯಲ್ಲಿ ಈ ಜೀವಾಣು ಲಭ್ಯ. ಈ ಜೀವಾಣು ದೇಶಿ ಹಸುಗಳ ಕರುಳಿನಲ್ಲಿ ವೃದ್ಧಿಯಾಗುತ್ತೇವೆ. ಸಗಣಿ ಮೂಲಕ ಕೃಷಿ ಭೂಮಿಯನ್ನು ಸೇರುತ್ತದೆ. ಯಾವದೇ ಪ್ರಮಾಣದ ರಂಜಕವನ್ನು ಭೂಮಿಗೆ ಸುರಿದರು ಪಿ.ಎಸ್.ಬಿ. ಜೀವಾಣು ಇಲ್ಲದೆ ರಂಜಕವನ್ನು ಬೆಳೆಗಳು ತೆಗೆದುಕೊಳ್ಳುವುದಿಲ್ಲ. ಈ ಜೀವಾಣು ತರಕಾರಿ ರೂಪದಲ್ಲಿರುವ ರಂಜಕವನ್ನು ಬೇರ್ಪಡಿಸಿ ಆಹಾರ ರೂಪದಲ್ಲಿ ಬೆಳೆಗಳಿಗೆ ಕೊಡುತ್ತದೆ. ಈ ರೂಪಾಂತರ ನಮ್ಮ ಕೃಷಿ ಭೂಮಿಯಲ್ಲಿರುವ ಜೀವಾಣು ಸಂಖ್ಯೆಯನ್ನು ಅವಲಂಬಿತವಾಗಿರುತ್ತದೆ. ಮಾರುಕಟ್ಟೆಯಲ್ಲಿ ಡಿ.ಎ.ಪಿ / DAPಮತ್ತು ಎಸ್.ಎಸ್.ಪಿ / S.S.P ಎಂಬ ಎರಡು ರೀತಿಯಲ್ಲಿ ರಂಜಕ ಗೊಬ್ಬರ ಲಭ್ಯವಿದೆ. ಯೂರಿಯ ಗೊಬ್ಬರದಂತೆ ಇದರಲ್ಲೂ ಕೇವಲ ಶೇ ೪೬ ರಷ್ಟು ರಂಜಕ ಸಿಗುತ್ತದೆ ಅದರ ಜೋತೆಗೆ ಶೇ ೧೮ರಷ್ಟು ಸಾರಜನಕ ಸಹ ಇರುತ್ತದೆ. ಇದರಲ್ಲೂ ಸಹ ಮೋಸ ಮಾಡುತ್ತಿರುವುದು ನೋಡಬಹುದು. ಮಣ್ಣಿನಲ್ಲಿ ಶೀಲಾ ರಂಜಕ ಸಾಕಷ್ಟುವಿದೆ. ಬೆಳೆಗಳು ಬಳಸಬೇಕಾದರೆ ಮಣ್ಣಿನಲ್ಲಿ ಪಿ.ಎಸ್.ಬಿ ಇರುವಯಾಗೆ ನೋಡಿಕೊಂಡರೆ ಸಾಕು. ಬೆಳೆಗಳಿಗೆ ಬೇಕಾದ ರಂಜಕ ಭೂಮಿಯಲ್ಲೇ ಸಿಗುತ್ತದೆ. ರಂಜಕ ಗೊಬ್ಬರದಲ್ಲೂ ಸಹ ರೈತರನ್ನ ಮೋಸ ಮಾಡುತ್ತಿರುದು ಸತ್ಯ. ರೈತರಾದ ನಾವು ಭೂಮಿಗೆ ಸಾಕಷ್ಟು ಪ್ರಮಾಣದ ಸಗಣಿಯನ್ನು ಕೊಟ್ಟರೆ ಸಾಕು. ಜೋತೆಗೆ ಮಣ್ಣಿನಲ್ಲಿ ಹ್ಯುಮಸ್ / humus (ಕಳೆತ ಹಸಿರಲೆ ಗೊಬ್ಬರ) ಇರುವಂತೆ ನೋಡಿಕೊಳ್ಳಬೇಕು.

ಪೋಟ್ಯಾಶ್ ಸಹ ಪ್ರಧಾನ ಪೊಷಕಾಂಶಗಳಲ್ಲಿ ಒಂದು. ಪೋಟ್ಯಾಶ್ ಬೆಳೆಗಳಿಗೆ ಅತಿ ಅವಶ್ಯಕ. ಮರಳು ಮಿಶ್ರಿತ ಮಣ್ಣಿನಲ್ಲಿ ಪೋಟ್ಯಾಶ್ ಹೇರಳವಾಗಿ ಸಿಗುತ್ತದೆ. ಪೋಟ್ಯಾಶ್‌ನಲ್ಲಿರುವ ಸಿಲಿಕೋಟ್ಸ ಲವಣ ಅಂಶವನ್ನು ವಿಭಜಿಸಿದರೆ ಮಾತ್ರ ಬೆಳೆಗಳಿಗೆ ಲಭ್ಯವಾಗುತ್ತದೆ. ಇಲ್ಲೂ ಸಹ ವಿಭಜಿಸುವ ಕ್ರಿಯೆಯನ್ನು ಬ್ಯಾಸಿಲಸ್ ಸೈಲಿಕೆಸಿಸ್ / Bacillus sylicesis (ಬಿ.ಎಸ್) ಎಂಬ ಬ್ಯಾಕ್ಟಿರಿಯ (ಅಣುಜೀವಿ) ಕಾರ್ಯ ನಿರ್ವಹಿಸುತ್ತದೆ. ಬಿ.ಎಸ್ ಅಣುಜೀವಿಯೂ ಸಹ ದೇಶಿ ಹಸುವಿನ ಕರುಳಿನಲ್ಲಿ ಬೆಳೆಯುತ್ತದೆ. ಬಿ.ಎಸ್ ಜೀವಾಣು ಇಲ್ಲದಿದ್ದರೆ ಬೆಳೆಗಳಿಗೆ ಪೋಟ್ಯಾಶ್ ಪೋಷಕಾಂಶ ಸಿಗುವುದಿಲ್ಲ. ಪೋಟ್ಯಾಶ್ ಗೊಬ್ಬರವು ಮಾರುಕಟ್ಟೆಯಲ್ಲಿ ಮ್ಯುರಟ್ ಆಫ಼್ ಪೋಟ್ಯಾಶ್ (MoP) ರೂಪದಲ್ಲಿ ಸಿಗುತ್ತದೆ. ಇದರಲ್ಲೂ ಸಹ ಕೇವಲ ಶೇ ೬೦ರಷ್ಟು ಮಾತ್ರ ಪೋಟ್ಯಾಶ್ ಅಂಶ ಇರುತ್ತದೆ. ಉಳಿದಿದ್ದು ದೇವರೆ ಬಲ್ಲ... ಕೃಷಿಭೂಮಿಗೆ ಹೆಚ್ಚಿನ ಪ್ರಮಾಣದ ಸಗಣಿಯನ್ನು ಕೊಟ್ಟಿದ್ದೆಯಾದರೆ ಪೋಟ್ಯಾಶ್ ಖರೀದಿ ಮಾಡುವ ಅವಶ್ಯಕತೆವಿಲ್ಲ.

ಒಟ್ಟಿನಲ್ಲಿ ಗೊಬ್ಬರ ಕಂಪನಿಗಳು ಹಗಲು ದರೋಡೆ ಮಾಡುತ್ತಿತುವುದು ಸತ್ಯ. ಈ ಗೊಬ್ಬರಗಳು ಚಕ್ರವ್ಯೂಹ ಇದ್ದಹಾಗೆ. ಹೊರಬರುವುದು ಸ್ವಲ್ಪ ಕಷ್ಟ. ಇದು ನಮಗೆ ಯಾಕೆ ಅರ್ಥವಾಗುತ್ತಿಲ್ಲ ಅಥವಾ ಅರ್ಥವಾದರೂ ಕುರಿಯಂತೆ ನಾವು ಬೇರೊಬ್ಬರ ಮಾದರಿಯಂತೆ ಬಳಸುತ್ತಿದ್ದೇವಾ?. ರಾಸಾಯನಿಕ ಗೊಬ್ಬರಗಳ ರಾಕ್ಷಸತನದಿಂದ ಹೊರಬರಲು ನಮಗೆ ಉಳಿದಿರುವುದು ಒಂದೆ ಮಾರ್ಗ ಅದುವೇ ಸಾವಯವ ಕೃಷಿ. ಮಾನವ ಮತ್ತು ಮಣ್ಣಿನ ಆರೋಗ್ಯವನ್ನು ಸಾವಯವ ಗೊಬ್ಬರಗಳು ಕಾಪಾಡುತ್ತೇವೆ. ಪರಿಸರ ಮಾಲಿನ್ಯವಿಲ್ಲದೇ ಬೆಳೆಗಳನ್ನು ಬೆಳೆಯಬಹುದು. ರಾಸಾಯನಿಕ ಗೊಬ್ಬರಗಳಿಗೆ ಬೈ ಬೈ ಹೇಳೋಣ... ಸಾವಯವ ಗೊಬ್ಬರಗಳಿಗೆ ಬಾ ಬಾ ಅನ್ನೋಣ...

ಮಂಜುನಾಥ ಹೊಳಲು

No comments:

Post a Comment