Search This Blog

Thursday, December 22, 2011

ಕೀಟ ಹತೋಟಿಗೆ ಸುಲಭ ಉಪಾಯಗಳು


ಯಾವ ಔಷಧಕೂ ಕೀಡಿ ಸಾಯವಲ್ಲುವು'. ಇದು ಸಾಮಾನ್ಯವಾಗಿ ಎಲ್ಲ ರೈತರ ಬಾಯಿಂದ ಬರುವ ಹತಾಶೆಯ ಮಾತು. ರಾಸಾಯನಿಕ ಕೀಟನಾಶಕಗಳು ಕೊನೆಯ ಅಸ್ತ್ರ ಆಗಿದ್ದು ಇದನ್ನು ಗಮನಿಸದ ರೈತರು ಕೀಟನಾಶಕಗಳೇ ಕೀಟಗಳನ್ನು ನಾಶ ಮಾಡಬಲ್ಲವು ಎಂಬ ನಂಬಿಕೆಯಿಂದ ಸಿಕ್ಕ ಸಿಕ್ಕ ಔಷಧಿಗಳನ್ನು ಬಳಸಿ ಬಳಸಿ ನಿಸರ್ಗದಲ್ಲಿ, ಕೀಟ ಪ್ರಪಂಚದಲ್ಲಿ ಅಸಮತೋಲನವಾಗುವ ಹಂತಕ್ಕೆ ತಲುಪಿದೆ. ರಾಸಾಯನಿಕ ಕೀಟನಾಶಕಗಳು ಕೀಟಗಳ ನಿಯಂತ್ರಣ ಮಾಡಬಲ್ಲವೇ ಹೊರತು ಕೀಟಗಳನ್ನು ಸಂಪೂರ್ಣವಾಗಿ ನಾಶ ಮಾಡಲಾರವು. ನಿಸರ್ಗದಲ್ಲಿ ಕೀಟ ಪ್ರಪಂಚದಲ್ಲಿ ಆಗಿರುವ ಅಸಮತೋಲನ ನೀಗಿ ಸಮತೋಲನ ಸಾಧ್ಯವಾಗಲು ಕೀಟನಾಶಕಗಳ ಬದಲಾಗಿ ಜೈವಿಕ ಕೀಟನಾಶಕಗಳು ಮತ್ತು ಜೈವಿಕ ಕೀಟ ಹತೋಟಿ ವಿಧಾನಗಳನ್ನು ಅನುಸರಿಸುವುದು ಅಗತ್ಯ. ರೈತರೇ ಸ್ವತಃ ಕಂಡುಕೊಂಡಿರುವ ಹಲವಾರು ಕೀಟ ಹತೋಟಿ ವಿಧಾನಗಳು ಸಾಕಷ್ಟಿವೆ. ಅವುಗಳ ಪರಿಚಯ ಮಾಡಿಕೊಡುವುದೇ ಈ ಲೇಖನದ ಉದ್ದೇಶ. 
 
೧. ಮಾಗಿ ಉಳುಮೆ ಮಾಡುವುದು.
೨. ಹಂಗಾಮಿಗನುಸರಿಸಿ ಬೆಳೆ ಮಾಡುವುದು.
೩. ಹದ, ಬೆದೆ ನೋಡಿ ಗಳೆ ಹೊಡೆಯುವುದು ಮತ್ತು ಬಿತ್ತನೆ ಮಾಡುವುದು. 
೪. ಸಾವಯವ (ಸೆಗಣಿ) ಗೊಬ್ಬರದ ಬಳಕೆ.
೫. ಪರ್ಯಾಯ ಬೆಳೆ ಮಾಡುವುದು.
೬. ಮಿಶ್ರ ಬೆಳೆ ಮಾಡುವುದು.
೭. ಕೀಟಗಳನ್ನು ಕೈಯಿಂದ ಆರಿಸುವುದು.
೮. ಗಿಡಗಳನ್ನು ಜಾಡಿಸಿ ಕೀಟಗಳು ಜಲ್ಲಿಯಿಂದ ಬೀಳುವಂತೆ ಮಾಡುವುದು.
೯. ಪಕ್ಷಿಗಳನ್ನು ಕೀಟಗಳೆಡೆಗೆ ಆಕರ್ಷಿಸುವ `ಚರಗ' ಚೆಲ್ಲುವುದು.
೧೦. ಕೋಳಿಗಳನ್ನು ಬಿಡುವುದು.
೧೧. ಸಂಗಾತಿ ಬೆಳೆಗಳನ್ನು ಬೆಳೆಯುವುದು.
 
೧. ಮಾಗಿ ಉಳುಮೆ ಮಾಡುವುದು:
ಹಿಂಗಾರಿ ಬೆಳೆ ಕಟಾವಾದ ಕೂಡಲೇ ಗಳೆ ಹೊಡೆಯಬೇಕು. ಬಹಳ ದಿನಗಳವರೆಗೆ ಹೊಲವನ್ನು ಹಾಗೇ ಬಿಡಬಾರದು. ಹೊಲದಲ್ಲಿರುವ ಹತ್ತಿಯ ಗಿಡಗಳನ್ನು ಹತ್ತಿ ಬಿಡಿಸಿದ ಕೂಡಲೇ ಕಿತ್ತು ರೆಂಟಿ ಅಥವಾ ನೇಗಿಲ ಹೊಡೆಯಬೇಕು. ಹಾಗೆ ಮಾಡುವುದರಿಂದ ಹತ್ತಿಯ ಬೆಳೆಯಲ್ಲಿದ್ದ ಕೀಟಗಳ ಕೋಶಗಳು, ತತ್ತಿಗಳು ನಾಶವಾಗಿ ಕೀಟಗಳ ವಂಶ ಚಕ್ರ ಬೆಳೆಯಲಾರದು. ಬಿಸಿಲಿಗೆ ಮಣ್ಣಿನಲ್ಲಿರುವ ಕೀಟಗಳ ಕೋಶಗಳು ನಾಶವಾಗುತ್ತವೆ.
 
೨. ಹಂಗಾಮಿಗನುಸರಿಸಿ ಬೆಳೆ ಮಾಡುವುದು:
ಹಂಗಾಮಿಗನುಸರಿಸಿ ಬೆಳೆ ಮಾಡುವುದರಿಂದ ಕೀಟಗಳ ಸಂತತಿ ಹೆಚ್ಚಾಗದಂತೆ ತಡೆಯಬಹುದಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಮುಂಗಾರಿ ಹಂಗಾಮಿನಲ್ಲಿ ತೊಗರಿ, ಹತ್ತಿ ಮತ್ತು ಬದನೆಯಂತಹ ಬೆಳೆಗಳಿಗೆ ಕೀಟಗಳ ಹಾವಳಿ ಹೆಚ್ಚಾಗುತ್ತದೆ. ಕೀಟಗಳು ಸಾಯುವುದಿಲ್ಲ. ಯಾವ ಕೀಟನಾಶಕಗಳೂ ಪರಿಣಾಮಕಾರಿಯಾಗಲಾರವು. ಏಕೆಂದರೆ, ಮುಂಗಾರಿ ಹಂಗಾಮಿನಲ್ಲಿ ಮೋಡ ಕವಿದ ವಾತಾವರಣವಿದ್ದು ಮಳೆಯೂ ಆಗಾಗ ಸಣ್ಣಗೇ ಆಗುತ್ತಿರುತ್ತದೆ. ಬಿಸಿಲು ಇರದು. ಇಂತಹ ವಾತಾವರಣವು ಕೀಟಗಳ ಬೆಳವಣಿಗೆಗೆ ಸಂತತಿಯ ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ಅದೇ ಬೆಳೆಗಳನ್ನು ಹಿಂಗಾರಿ ಹಂಗಾಮಿನಲ್ಲಿ ಬೆಳೆದರೆ ಆಕಾಶವು ಶುಭ್ರವಾಗಿರುತ್ತದೆ. ಚಳಿಗಾಲವಿರುವುದರಿಂದ ಕೀಟಗಳ ಅಭಿವೃದ್ಧಿಯಾಗಲು ಚಳಿ ಬಿಡುವುದಿಲ್ಲ. ಹೀಗಾಗಿ ಬೆಳೆಗಳು ಕೀಟಗಳ ಬಾಧೆ ಇಲ್ಲದೆ ಬೆಳೆದು ಲಾಭದಾಯಕವಾಗಬಲ್ಲವು. 
 
೩. ಹದ, ಬೆದೆ ನೋಡಿ ಗಳೆ ಹೊಡೆಯುವುದು ಮತ್ತು ಬಿತ್ತನೆ ಮಾಡುವುದು:
ಇದರಿಂದಲೂ ಕೀಟಗಳ ಹತೋಟಿಯಾಗುತ್ತದೆ. `ಹದ ನೋಡಿ ಹರಗಬೇಕು, ಬೆದೆ ನೋಡಿ ಬಿತ್ತಬೇಕು'. ಬೀಜಗಳು ಚೆನ್ನಾಗಿ ನಾಟುತ್ತವೆ. ಬೆಳೆಗಳು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಸದೃಢವಾಗಿ ಬೆಳೆಯುತ್ತವೆ.
 
೪. ಸಾವಯವ ಗೊಬ್ಬರಗಳ ಬಳಕೆ:
ರಾಸಾಯನಿಕ ಗೊಬ್ಬರಗಳ ಬದಲಾಗಿ ಸಾವಯವ ಗೊಬ್ಬರಗಳ ಬಳಕೆ ಮಾಡುವುದರಿಂದ ಕೀಟಗಳ ಕಾಟ ಕಡಿಮೆಯಾಗುತ್ತದೆ. ಸಾವಯವ ಗೊಬ್ಬರದಿಂದ ಬೆಳೆಗಳು ಸದೃಢವಾಗಿ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಸಾವಯವ ಗೊಬ್ಬರ ಹಾಕಿದ ಬೆಳೆಯುವ ನಿಧಾನವಾಗಿ ಬೆಳೆಯುತ್ತದೆ. ಆದ್ದರಿಂದ ಕೀಟ ಮತ್ತು ರೋಗಗಳ ಬಾಧೆ ತಪ್ಪುವುದು.
 
೫. ಪರ್ಯಾಯ ಬೆಳೆ ಮಾಡುವುದು:
ಹಿಂದಿನ ರೈತರು `ಕಾಲಗೈ' ಪದ್ಧತಿ ಅನುಸರಿಸುತ್ತಿದ್ದರು. ಒಂದೇ ಬೆಳೆಯನ್ನು ಪದೆ ಪದೆ ಅದೇ ಹೊಲದಲ್ಲಿ ಬೆಳೆಯಬಾರದು. ನಾಲ್ಕು ವರ್ಷಗಳಿಗೊಮ್ಮೆ ಬೆಳೆಗಳಿಗೆ ಪರ್ಯಾಯವಾದ ಬೆಳೆ ಬೆಳೆಯಬೇಕು. ಉದಾಹರಣೆಗೆ ಈ ವರ್ಷ ಹತ್ತಿ ಬಿತ್ತಿದ ಹೊಲಕ್ಕೆ ಬರುವ ವರ್ಷಗಳಲ್ಲಿ ಬೇರೆ ಬೇರೆ ಬೆಳೆಗಳನ್ನು ಮಾಡಬೇಕು. ಐದನೇ ವರ್ಷಕ್ಕೆ ಹತ್ತಿಯನ್ನು ಬಿತ್ತಬಹುದು. ಹೀಗೆ ಮಾಡುವುದರಿಂದ, ಬೆಳೆಗೆ ಕಾಟ ಕೊಡುವ ಕೀಟಗಳ ಸಂತತಿಯ ವಂಶಚಕ್ರದ ಪ್ರಕ್ರಿಯೆ ನಿಂತು ಕೂಟಗಳ ಹತೋಟಿ ಸಾಧ್ಯವಾಗುತ್ತದೆ. 
 
೬. ಮಿಶ್ರ ಬೆಳೆ-ಅಕ್ಕಡಿ ಬೆಳೆ ಮಾಡುವುದು:
ಹಿಂದಿನ ರೈತರು ಅಕ್ಕಡಿ ಬೆಳೆ ಮಾಡುತ್ತಿದ್ದರು. ಅದೇ ಮಿಶ್ರ ಬೆಳೆ ಪದ್ಧತಿ. ಕೇವಲ ಹತ್ತಿ, ಕೇವಲ ಜೋಳ, ಕೇವಲ ತೊಗರಿ ಮತ್ತು ಕೇವಲ ಕುಸುಬೆಯನ್ನು ಇಡಿಯಾಗಿ ಬೆಳೆಯಬಾರದು. ಎರಡು ಸಾಲು ಶೇಂಗಾ ಒಂದು ಸಾಲು ಹತ್ತಿ ಹಾಕಬೇಕುಲ. ಐದು ಸಾಲು ಕಡಲೆ, ಒಂದು ಸಾಲು ಕುಸುಬೆ, ಆರು ಸಾಲು ಜೋಳ, ಒಂದು ಸಾಲು ತೊಗರಿ ಹೀಗೆ ಮಿಶ್ರ ಬೆಳೆ ಮಾಡಿದಾಗ ಕೀಟಗಳು ಬೆಳೆಗಳು ಆಯಾ ಹಂತದಲ್ಲಿ ಒಂದೊಂದು ಬೆಳೆಗೆ ಸಲ್ಪಸ್ವಲ್ಪ ಕಾಟ ಕೊಡುತ್ತವೆ. ಮುಖ್ಯ ಬೆಳೆ ಕೀಟದ ಕಾಟವಿಲ್ಲದೆ ಬೆಳೆಯುತ್ತದೆ. ಆದ್ದರಿಂದ ಮಿಶ್ರಬೆಳೆ ಅಥವಾ ಅಕ್ಕಡಿ ಬೆಳೆ ಮಾಡುವುದರಿಂದ ಕೀಟಗಳ ಕಾಟ ಕಡಿಮೆಯಾಗುತ್ತದೆ.
 
೭. ಕೀಟಗಳನ್ನು ಕೈಯಿಂದ (ತೆಗೆಯುವುದು) ಆರಿಸುವುದು:
ಕೀಟಗಳು ಗಾತ್ರದಲ್ಲಿ ದೊಡ್ಡವು ಆಗಿದ್ದರೆ ಯಾವ ಔಷಧಿಯನ್ನು ಸಿಂಪಡಿಸಿದರೂ ಸಾಯುವುದಿಲ್ಲ. ಅಂತಹ ಸಂದರ್ಭದಲ್ಲಿ ಕೀಟಗಳನ್ನು ಕೈಯಿಂದ ಆರಿಸಿ ತೆಗೆಯುವುದು ಸುಲಭವೂ ಮಿತವ್ಯಯವೂ ಆಗುತ್ತದೆ. ಸಣ್ಣ ಹುಡುಗರು, ದೊಡ್ಡವರು ಕೈಯಲ್ಲಿ ಪ್ಲಾಸ್ಟಿಕ್ ಡಬ್ಬಿ ಹಿಡಿದುಕೊಂಡು ಕೀಟಗಳನ್ನು ಕೈಯಿಂದ ಆರಿಸಿ ತೆಗೆಯಬಹುದಾಗಿದೆ. ಹಿಂದಿನ ವರ್ಷ ಕಡಲೆ ಬೆಳೆಯಲ್ಲಿ ಕೀಟಗಳ ಬಾಧೆ ಹೆಚ್ಚಾಗಿದ್ದು, ಹೀಲಿಯೋಥಿಸ್ ಕೀಟಗಳನ್ನು ಕೈಯಿಂದ ಆರಿಸಿ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹಿಸಿಕೊಂಡು ಹೋಗಿ ನೆಲದಲ್ಲಿ ಹುಗಿಯಲಾಯಿತು. ಇದೇ ಪ್ರಕಾರ ವಾರಕ್ಕೊಮ್ಮೆಯಂತೆ ಆರಿಸಿ ತೆಗೆಯಲಾಯಿತು. ಕೇವಲ ಆರು ಜನರು ಒಂದು ಎಕರೆ ಹೊಲದಲ್ಲಿರುವ ಕೀಟಗಳನ್ನು ಆರಿಸಿ ತೆಗೆದರು. ಕೀಟಗಳು ನಿಯಂತ್ರಣದಲ್ಲಿ ಬಂದು ಬೆಳೆ ಚೆನ್ನಾಗಿ ಬಂತು.
 
೮. ಕೈಯಿಂದ ತೊಗರಿ ಗಿಡಗಳಲ್ಲಿದ್ದ ಕೀಟಗಳನ್ನು ಜಾಡಿಸುವುದು:
ಹೀಲಿಯೋಥಿಸ್‌ ಕೀಟಗಳು ರಾಸಾಯನಿಕ ಕೀಟನಾಶಕಗಳಿಗೆ ಹೊಂದಿಕೊಂಡಿದ್ದರಿಂದ ಅವು ಸಾಯಲಾರದ ಹಂತಕ್ಕೆ ತಲುಪಿವೆ. ಹೀಗಾಗಿ, ರೈತರು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಿ ಬೇಸತ್ತರು. ತೊಗರಿ ಗಿಡಗಳ ಟೊಂಗೆಗಳನ್ನು ಬಾಗಿಸಿ ಜಲ್ಲಿ (ದೊಡ್ಡ ಬುಟ್ಟಿ)ಗಳಲ್ಲಿ ಜಾಡಿಸಿ ಸಂಗ್ರಹಿಸಲಾಯಿತು. ನಂತರ, ಜಲ್ಲಿಯಲ್ಲಿ ಸಂಗ್ರಹವಾದ ಕೀಟಗಳನ್ನು ಹೊಲದಿಂದ ದೂರ ಒಯ್ದು ನೆಲದಲ್ಲಿ ಹುಗಿಯಲಾಯಿತು. ಇದೇ ರೀತಿ ವಾರಕ್ಕೊಮ್ಮೆಯಂತೆ ನಾಲ್ಕು ಸಲ ಜಾಡಿಸಿದರೆ ಕೀಟಗಳು ನಿಯಂತ್ರಣದಲ್ಲಿ ಬರುತ್ತವೆ. ಹೀಗೆ ಮಾಡಲು ಅಕ್ಕಡಿ ಬೆಳೆಯಾದರೆ ಒಬ್ಬ ವ್ಯಕ್ತಿ ಒಂದು ದಿನಕ್ಕೆ ಒಂದು ಎಕರೆ ತೊಗರಿ ಬೆಳೆಯಲ್ಲಿರುವ ಕೀಟಗಳನ್ನು ಜಾಡಿಸಬಲ್ಲ. ಸ್ವತಃ ಲೇಖಕನೇ ತನ್ನ ಹೊಲದಲ್ಲಿ ಹೀಗೆ ಮಾಡಿದ್ದಾನೆ. ಇಡೀ ಬೆಳೆಯಾಗಿದ್ದರೆ ೪ ಜನ ಕೂಲಿಕಾರರು ಬೇಕು. ಎಷ್ಟು ಮಿತವ್ಯಯ ನೋಡಿ!
 
೯. `ಚರಗ' ಚೆಲ್ಲುವುದು (ಪಕ್ಷಿಗಳನ್ನು ಕೀಟಗಳತ್ತ ಆಕರ್ಷಿಸುವ ಉಪಾಯ):
ಗುಬ್ಬಿ, ಬೆಳ್ಳಕ್ಕಿ ಮೊದಲಾದ ಪಕ್ಷಿಗಳು ಬೆಳೆಗಳನ್ನು ಬಾಧಿಸುವ ಕೀಟಗಳನ್ನು ತಿನ್ನುತ್ತವೆ. ಕೀಟಗಳತ್ತ ಪಕ್ಷಿಗಳನ್ನು ಆಕರ್ಷಿಸಲು ಕೀಟನಾಶಕ ಬಳಸಬಾರದು. ಚುರುಮುರಿ, ಅಕ್ಕಿ, ಜೋಳದ ಕಾಳುಗಳನ್ನು ಬೆಳೆಗಳಲ್ಲಿ ಚೆಲ್ಲಬೇಕು ಮತ್ತು ಚರಗ (ಆಹಾರ ಪದಾರ್ಥಗಳನ್ನು) ಚೆಲ್ಲಬೇಕು. ಆಗ ಪಕ್ಷಿಗಳು ಕಾಳು ಅಥವಾ ಆಹಾರ ಪದಾರ್ಥಗಳನ್ನು ತಿನ್ನಲು ಬರುತ್ತವೆ. ಅದೇ ಸಮಯದಲ್ಲಿ ಕೀಟಗಳ ವಾಸನೆ ಪಕ್ಷಿಗಳಿಗೆ ಬರುವುದರಿಂದ ಕೀಟಗಳನ್ನು ತಿನ್ನುತ್ತವೆ. ಕೀಟಗಳ ನಿಯಂತ್ರಣಕ್ಕೆ ಇದೊಂದು ಜೈವಿಕ ವಿಧಾನ. ಉತ್ತರ ಕರ್ನಾಟಕದಲ್ಲಿ ಕೆಲವು ಕಡೆ ಶೀಗಿ ಹುಣ್ಣಿಮೆಗೆ, ಕೆಲವು ಕಡೆ ಎಳ್ಳಮವಾಸ್ಯೆಗೆ ಚರಗ ಚೆಲ್ಲುವ ಧಾರ್ಮಿಕ ಆಚರಣೆ ಇದೆ. ಇದು ಕೇವಲ ಧಾರ್ಮಿಕ ಆಚರಣೆ ಅಲ್ಲ. ಹಬ್ಬ ಹುಣ್ಣಿಮೆಯ ಆಚರಣೆ ಅಲ್ಲ. ಜೈವಿಕ ಕೀಟ ಹತೋಟಿ ವಿಧಾನವೂ ಆಗಿದೆ. `ಅಳ್ಳಾಂಬಲಿ' ಮತ್ತು `ಕೆರ್ಯಾಂಬಲಿ' ಎಂಬ ಆಚರಣೆಗಳು ಬೆಳೆಗಳ ಆಯಾ ಹಂತದಲ್ಲಿ ಕೀಟಗಳನ್ನು ಪಕ್ಷಿಗಳಿಂದ ಆಕರ್ಷಿಸಿ ತಿನ್ನುವಂತೆ ಮಾಡುವ ವಿಧಾನವಾಗಿದೆ.
 
೧೦. ಕೋಳಿಗಳನ್ನು ಬಿಡುವುದು:
ಕಡಲೆ ಬೆಳೆಗಳಲ್ಲಿರುವ ಸಣ್ಣ ಸಣ್ಣ ಕೀಟಗಳಿಗೆ ಕೋಳಿಗಳನ್ನು ಕಡಲೆ ಹೊಲದಲ್ಲಿ ಬಿಡುವುದರಿಂದ ಕೀಟಗಳನ್ನು ಕೋಳಿಗಳು ಆರಿಸಿ ತಿನ್ನುತ್ತವೆ. ಕಡಲೆ ಬೆಳೆಯು ಕೋಳಿಗಳ ಬಾಯಿಗೆ ನಿಲುಕುವಷ್ಟೇ ಎತ್ತರ ಬೆಳೆದಿರುವುದರಿಂದ ಕೀಟಗಳನ್ನು ಆರಿಸಿ ತಿನ್ನುತ್ತವೆ. ಕೋಳಿಗಳನ್ನು ಹೊಲಕ್ಕೆ ಒಯ್ದ ನಂತರ ಕೋಳಿಗಳ ಮಾಲಕರಿಗೆ ಅವುಗಳನ್ನು ಮುಟ್ಟಿಸಿದರಾಯಿತು. ೧೯೯೦ರಿಂದಲೂ ಹಲವಾರು ರೈತರು ಈ ವಿಧಾನ ಅನುಸರಿಸುತ್ತಿದ್ದಾರೆ.
 
೧೧. ಸಂಗಾತಿ ಬೆಳೆಗಳನ್ನು ಬೆಳೆಯುವುದರಿಂದಲೂ ಕೀಟ ಹತೋಟಿ ಸಾಧ್ಯ: 
ಹತ್ತಿ ಬೆಳೆಯ ಸುತ್ತಲೂ ಗುರೆಳ್ಳು ಬಿತ್ತಬೇಕು. ಗುರೆಳ್ಳಿನ ಅರಿಷಿಣ ಬಣ್ಣದ ಹೂವಿಗೆ ಕೀಟಗಳು ಆಕರ್ಷಿತವಾಗಿ ಹತ್ತಿಗೆ ಕಾಟ ಕಡಿಮೆಯಾಗುತ್ತದೆ. ಅದೂ ಅಲ್ಲದೆ ಹತ್ತಿಯ ಸಾಲಿನಲ್ಲಿ ಅಲ್ಲಲ್ಲಿ ಬೆಂಡೆ ಹಾಕಿದರೆ ಬೆಂಡೆ ಗಿಡಕ್ಕೆ ಕೀಟಗಳು ಆಕರ್ಷಿತವಾಗಿ ಬೆಂಡೆ ಕಾಯಿ ತಿಂದು ಹತ್ತಿಯ ಕಾಯಿಗೆ ಕೀಟಗಳ ಬಾಧೆ ಕಡಿಮೆ ಆಗುತ್ತದೆ.
ದನಗಳ ಸೆಗಣಿ, ಮೂತ್ರ, ಬೇವು, ಹುಲುಗಲ, ಸೀತಾಫಲ ಮತ್ತು ಬೆಳ್ಳುಳ್ಳಿಯಂತಹ ಪ್ರಾಣಿಜನ್ಯ ಮತ್ತು ಸಸ್ಯಜನ್ಯ ವಸ್ತುಗಳು ಕೀಟನಾಶಕಗಳಾಗಿ ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ. 
 
ಮೇಲೆ ವಿವರಿಸಲಾದ ಎಲ್ಲ ವಿಧಾನಗಳು ಪರಿಸರ ಸ್ನೇಹಿ ಆಗಿವೆ. ಸ್ವಾವಲಂಬಿ ಕೃಷಿಗೆ ಪೂರಕ ಆಗಿವೆ. ಖರ್ಚಿಲ್ಲದೆ ರೈತರ ಕೈಯಳತೆಯಲ್ಲಿ ದೊರಕುವ ವಿಧಾನಗಳಾಗಿವೆ. ಜನದ ಮತ್ತು ಜಾನುವಾರುಗಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರಲಾರವು. ಕೀಟ ಪ್ರಪಂಚದಲ್ಲಾಗಿರುವ  ಅಸಮತೋಲನವನ್ನು ನಿವಾರಿಸಬಲ್ಲ ವಿಧಾನಗಳಾಗಿವೆ. ಈ ವಿಧಾನಗಳು ಜೈವಿಕ ಕೀಟ ಹತೋಟಿ ವಿಧಾನಗಳೆನಿಸಿವೆ. ಅಷ್ಟೇ ಅಲ್ಲ ಬೆಳೆಯ ಇಳುವರಿ ಹೆಚ್ಚಿಸುವ ಲಾಭದಾಯಕ ವಿಧಾನಗಳಾಗಿವೆ. ಬೆಳೆಗಳು ಹೂ ಬಿಡುವ ಹಂತದಲ್ಲಿ ಜೇನು, ದುಂಬಿ ಮತ್ತು ಪಾತರಗಿತ್ತಿಯಂತಹ ಉಪಕಾರಿ ಕೀಟಗಳಿಂದ ಹೂವುಗಳ ಪರಾಗಸ್ಪರ್ಶ ಕ್ರಿಯೆಗೆ   ದೊಡ್ಡ ಉಪಕಾರ. ರಾಸಾಯನಿಕ ಕೀಟನಾಶಕ ಬಳಸಿದಾಗ ಇಂತಹ ಉಪಕಾರಿ ಕೀಟಗಳು ಸಾಯುತ್ತವೆ. ಅದರ ಬದಲು ಈ ವಿಧಾನಗಳನ್ನು ಅನುಸರಿಸಿದರೆ ಉಪಕಾರಿ ಕೀಟಗಳ ಸಂತತಿ ಸಾಯದೆ ವೃದ್ಧಿಯಾಗುತ್ತದೆ. ಇಂದಿನ ವಾತಾವರಣದಲ್ಲಿ ರಾಸಾಯನಿಕಕ್ಕೆ ಪರ್ಯಾಯವಾಗಿ ಜೈವಿಕ, ಸಸ್ಯಜನ್ಯ ಮತ್ತು ಪ್ರಾಣಿಜನ್ಯ ಕೀಟನಾಶಕಗಳಲ್ಲದೆ ಮೇಲೆ ವಿವರಿಸಿದ ಹಲವಾರು ವಿಧಾನಗಳು ಅನಿವಾರ್ಯ ಹಾಗೂ ಮಹತ್ವದವು.
 
ಸೃಷ್ಟಿಯಲ್ಲಿ ಒಂದಕ್ಕೊಂದು ಕೊಂದು ತಿಂದು ಬದುಕುವ ಸೂತ್ರವಿದೆ. ಬೇಕಾದದ್ದು ಅಲ್ಪಾಯುಷಿ, ಬೇಡಾದದ್ದು ದೀರ್ಘಾಯುಷಿ. ಬೇಕಾದದ್ದು ಎಷ್ಟು ಆರೈಕೆ ಮಾಡಿದರೂ ಬೇಗ ಬೆಳೆಯದು. ಬೇಡಾದದ್ದು ಆರೈಕೆ ಮಾಡದೆ ಬೆಳೆಯಬಲ್ಲದು. ಕೀಟಗಳ ಪ್ರಪಂಚದಲ್ಲೂ ಭಕ್ಷಕ ರಕ್ಷಕ ಕೀಟಗಳಿವೆ. ಉಪಕಾರಿ ಮತ್ತು ಅಪಕಾರಿ ಕೀಟಗಳೂ ಇವೆ. ಈ ಸೂತ್ರದಂತೆ ರಾಸಾಯನಿಕ ಕೀಟನಾಶಕಗಳನ್ನು ಬಳಸಿದ್ದರಿಂದ ನಮಗೆ ಬೇಕಾದ ಕೀಟಗಳೆಲ್ಲ ಸತ್ತು ಅವುಗಳ ಸಂತತಿ ನಿರ್ನಾಮ ಆಗಿವೆ. ಹೀಗಾಗಿ ನಮಗೆ ಬೇಡವಾದ ಕೀಟಗಳ ಚೆಲ್ಲಾಟ ಹೆಚ್ಚಾಗಿದ್ದು, ಪ್ರಕೃತಿಯಲ್ಲಾದ ಅಸಮತೋಲನವು ಅತಿಯಾಗಿದೆ. ಇಂತಹ ಸಂದರ್ಭದಲ್ಲಿ ಹಲವಾರು ದೃಷ್ಟಿಯಿಂದ ಮೇಲೆ ತಿಳಿಸಿದ ವಿಧಾನಗಳನ್ನು ನಮ್ಮ ರೈತರು ಅಳವಡಿಸಿಕೊಳ್ಳಬೇಕಿದೆ. ಹಾಗೆ ಅಳವಡಿಸಿಕೊಳ್ಳಲು ರೈತರು ಮನಸ್ಸು ಮಾಡಬೇಕು. 

written by Irayya Killedhar

No comments:

Post a Comment