Search This Blog

Wednesday, June 23, 2010

ಮಣ್ಣಿನ ಆರೋಗ್ಯಕ್ಕೆ ಸಾವಯವ ಗೊಬ್ಬರದ ಬಳಕೆ

“ಮಣ್ಣಿಂದ ಕಾಯ, ಮಣ್ಣಿಂದ ಜೀವ, ಮಣ್ಣ ಬಿಟ್ಟವನಿಗೆ ಆಧಾರವಿಲ್ಲ” ಎಂಬ ದಾಸವಾಣಿ ಮಣ್ಣಿನ ಮಹತ್ವವನ್ನು ತಿಳಿಸುತ್ತದೆ, ಅದೇ ತರಹ “ಇಳೆ ಎಂದರೆ ಬರೀ ಮಣ್ಣಲ್ಲ, ನಮಗೂ ಸರಿಯಾಗಿ ನೋಡುವ ಕಣ್ಣಿಲ್ಲ” ಎಂದು ಬೇಂದ್ರೆಯವರು ಸಹ ಹೇಳಿದ್ದಾರೆ. ಯಾವುದೇ ನಾಗರಿಕತೆಯ ಅಳಿವು-ಉಳಿವು ಈ ಭೂಮಿ ಮೇಲಿನ ಆರಿಂಚು ಮಣ್ಣಿನ ಮೇಲೇ ಆಧರಿಸಿದೆ. ಈ ಭೂಮಿ , ಈ ಮಣ್ಣು ಇಲ್ಲದಿದ್ದಲ್ಲಿ ನಾವ್ಯಾರು ಭೂಮಿಪುತ್ರರಾಗಲು ಸಾಧ್ಯವಾಗುತ್ತಿರಲಿಲ್ಲ, ಮಣ್ಣಿನಿಂದಲೇ ಹುಟ್ಟಿ ಮಣ್ಣಿನ ಮೇಲೆ ಅವಲಂಬಿಸಿ, ಬದುಕಿ ಮಣ್ಣಿಗೆ ಹೋಗುವ ಈ ದೇಹ. ಈ ಜೀವನ ಮಣ್ಣಿಗೆ ಅದೆಷ್ಟು ಋಣಿಯಾದರೂ ಸಾಲದೇನೋ !, ಪಂಚಭೂತಗಳಲ್ಲಿ ಒಂದಾದ ಈ ಮಣ್ಣಿಲ್ಲದೆ ಯಾವ ಜೀವಿಯೂ ಜೀವಿಸಲು ಸಾಧ್ಯವಿಲ್ಲ. ರೈತ ಮಕ್ಕಳಿಗೆ ಮಣ್ಣು ಸರ್ವಸ್ವ, ಜೀವನವಿಡೀ ಮಣ್ಣಿನೊಡನೆ ತಮ್ಮ ಬೆವರನ್ನ ಬೆರಸಿ ತಿನ್ನುವ ಅನ್ನವನ್ನು ಸೃಷ್ಟಿಸುವ ಇವರಿಗೆ ಭೂಮಿ ಹೆತ್ತ ತಾಯಿಗಿಂತಲೂ ಮಿಗಿಲು. ಮಣ್ಣೆಂದರೆ ಒಂದು ನಿರ್ಜೀವವಾದ ಜಡವಸ್ತುವಲ್ಲ, ಅದೊಂದು ಪೃಥ್ವಿಯ ಮೇಲೆ ಅವರಿಸಿರುವ ನಿರ್ಜೀವ ವೃತ್ತಿಕೆಯಲ್ಲ, ಬದಲಾಗಿ ಅದೊಂದು ಜೀವ ತುಂಬಿದ ಸಚೇತನ ವಸ್ತು, ಮಣ್ಣು ರಾತ್ರೋರಾತ್ರಿ ಉದ್ಬವವಾದ ವಸ್ತುವಲ್ಲ, ಕೋಟಿ ಕೋಟಿ ವರುಷಗಳ ಕಾಲ ವಾತಾವರಣದ ಹಲವು ಕ್ರಿಯೆಗಳಿಗೆ ಒಳಗಾಗಿ ಮಾರ್ಪಾಡಾಗಿ ಬಂದಿರುವ ಒಂದು ಸಂಕೀರ್ಣ ವಸ್ತು. ಮಣ್ಣಿನಲ್ಲಿರುವ ಜೀವ ಸತ್ವ ಚಟುವಟಿಕೆಗಳೇ ನಮಗೆ ಜೀವನಾಧಾರ. ಕೇವಲ ಅಂಗುಲ ಮಣ್ಣು ತಯಾರಾಗಬೇಕಾದರೆ ೩೦೦ - ೫೦೦ ವರ್ಷಗಳೇ ಬೇಕಾಗುತ್ತದೆ, ಆದರೆ ಇಂತಹ ಅಮೂಲ್ಯವಾದ ಮೇಲ್ಮಣ್ಣು ಒಂದರಿಂದ ಎರಡು ವರ್ಷಕ್ಕೆ ಕೊಚ್ಚಿ ನದಿಗಳಿಗೆ ಹೂಳಾಗುತ್ತದೆ.

ಸಾವಯವ ಗೊಬ್ಬರದ - ಸ್ವರೂಪ ಮತ್ತು ಪ್ರಯೋಜನಗಳು:

ಸಾವಯವ ಗೊಬ್ಬರದ - ಸ್ವರೂಪ ಮತ್ತು ಪ್ರಯೋಜನಗಳು: ಸಾವಯವ ಗೊಬ್ಬರಗಳನ್ನು ಅವುಗಳ ದೊರೆಯುವ ಮೂಲದ ಆಧಾರದ ಮೇಲೆ ಈ ಕೆಳಗಿನಂತೆ ವಿಂಗಡಿಸಬಹುದು
ಕ್ರ.ಮ ದೊರೆಯುವ ಮೂಲ ಗೊಬ್ಬರ / ವಸ್ತುಗಳು
೧ ಪ್ರಾಣಿ ಮೂಲ ದನದ, ಕತ್ತೆ, ಕುದರೆ ಸಗಣಿ, ಆಡು, , ಕೋಳಿ ಮತ್ತು ಕುರಿ ಹಿಕ್ಕೆ, ಮಾಂಸ, ಚರ್ಮ, ಮೂಳೆ, ತುಪ್ಪಳ ಮತ್ತು ಮೀನು ಗೊಬ್ಬರ
೨ ಸಸ್ಯಮೂಲ ಕಾಡಿನ ತರಗು, ಹಸಿರಲೆ ಗಿಡ-ಮರಗಳು, ಹೊಲದಲ್ಲಿ ಬೆಳೆದ ಕಳೆ, ಮೇವಿನ ದಂಟು, ಮತ್ತು ಧಾನ್ಯ ಬೆಳೆಗಳ ಉಳಿಕೆ
೩ ಕೃಷಿ ಕೈಗಾರಿಕೆ ಬತ್ತದ, ಮರದ ಹೊಟ್ಟು, ಎಣ್ಣೆ ಬೀಜಗಳ ಹಿಂಡಿ, ನಾರಿನ ಹುಡಿ ಮತ್ತು ಕೆರೆಯ ಹೂಳು
೪ ಜೈವಿಕ ಗೊಬ್ಬರ ರೈಜೋಬಿಯಂ, ಅಜೆತೋಬ್ಯಾಕ್ಟರ್, ಅಕ್ಟಿನೋಮೈಸಿಟ್ಸ್ ಮತ್ತು ಮೈಕೋರಿಜಾ.

ಸಾವಯವ ಗೊಬ್ಬರದ ಪ್ರಯೋಜನಗಳು


  • ಎಲ್ಲಾ ವಸ್ತುಗಳು ಶೇ.೧೦೦ ರಷ್ಟು ಸಾವಯವ ರೂಪದಲ್ಲಿ ಸಿಗುವುದರಿಂದ ಬೆಳೆಗಳಿಗೆ ಎಲ್ಲಾ ತರಹದ ಪೋಷಕಾಂಶಗಲು ದೊರೆಯುತ್ತವೆ
  • ಭೂಮಿಯ ರಚನೆ ಉತ್ತಮಗೊಂಡು ಉತ್ಪಾದನ ಶಕ್ತಿ ಹೆಚ್ಚಿಸುತ್ತದೆ
  • ಮಣ್ಣಿನಲ್ಲಿ ಜೈವಿಕ ಕ್ರಿಯೆ ಉತ್ತಮಗೊಳ್ಳುತ್ತದೆ
  • ನಿಧಾನವಾಗಿ ಸ್ವಲ್ಪ - ಸ್ವಲ್ಪವಾಗಿ ಪೋಷಕಾಂಶಗಳು ಬೆಳೆಗಳಿಗೆ ಸಿಗುತ್ತವೆ
  • ಸಾವಯವ ಗೊಬ್ಬರ ಬಳಸುವುದರಿಂದ ಪರಿಸರ ಸ್ವಚ್ಛವಾಗುತ್ತದೆ
  • ಭೂಮಿಯು ಸಡಿಲಗೊಂಡು ಗಾಳಿ, ನೀರು ಮತ್ತು ಬೆಳಕು ಮಣ್ಣಿನಲ್ಲಿ ಸರಾಗವಾಗಿ ಸಂಚರಿಸಲು ಸಹಾಯವಾಗುತ್ತದೆ
  • ನೀರು ಚೆನ್ನಾಗಿ ಇಂಗಿ ಶೇಖರಣೆಯಾಗುತ್ತದೆ
  • ಮಣ್ಣಿನ ರಸಸಾರದಲ್ಲಿ ಬೇಗನೆ ವ್ಯತ್ಯಾಸ ಉಂಟಾಗುವುದಿಲ್ಲ ಮಣ್ಣಿನ ಕ್ಷಾರತೆಯನ್ನು ಕಡಿಮೆ ಮಾಡುವುದು


ಮಣ್ಣಿನ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಮ್ಮ ಹೊಲದಲ್ಲೇ ಅನೇಕ ವಿವಿಧ ತರಹದ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು, ಅವುಗಳಲ್ಲಿ ಕೆಲವುಗಳನ್ನು ಈ ಕೆಳಗೆ ವಿವರಿಸಲಾಗಿದೆ.

೧. ನಡಾಪ್ ಪದ್ಧತಿ (NADEPP System)

ಈ ವಿಧಾನ ತು೦ಬಾ ಸರಳ, ಪ್ರಥಮದಲ್ಲಿ ನೀರು ನಿಲ್ಲದ, ಸದಾ ನೆರಳಿರುವ ಸೂಕ್ತವಾದ ಜಾಗವನ್ನು ಆಯ್ದುಕೊಳ್ಳಬೇಕು, ನಿಮ್ಮ ಮನೆಯ ಹತ್ತಿರದಲ್ಲೇ ಇದ್ದರೆ ಗಮನಿಸುವುದಕ್ಕೆ ಅನುಕೂಲ ವಾಗುತ್ತದೆ. ೯ ಅಡಿ ಉದ್ದ, ೯ ಅಡಿ ಅಗಲ ಮತ್ತು ೫ ಅಡಿ ಎತ್ತರ ಇರುವ ತೊಟ್ಟಿಯನ್ನು ನಿರ್ಮಿಸಿ, ಅಳತೆಯನ್ನು ತ್ಯಾಜ್ಯ ವಸ್ತು ಮತ್ತು ಜಾಗದ ಅನುಕೂಲ ನೋಡಿಕೊ೦ಡು ಬದಲಾಯಿಸಬಹುದು. ತೊಟ್ಟಿಯನ್ನು ಕಲ್ಲು ಚಪ್ಪಡಿಯಿ೦ದ, ತೆ೦ಗಿನ ಮರದ ಗರಿಗಳಿ೦ದ ಅಥವಾ ಜೋಳದ ದಟ್ಟುನಿ೦ದ ನೆಡಬಹುದು. ನಮ್ಮ ಪರಿಸರದಲ್ಲಿ ಯಾವುದು ಸಿಗತ್ತೊ ಅದನ್ನು ಉಪಯೋಗಿಸಬಹುದು. ತೊಟ್ಟಿಯ ತಳಬಾಗಕ್ಕೆ ಸಾವಯವ ವಸ್ತುಗಳಾದ ಜೋಳದ ಕಡ್ಡಿ, ಸುಬಾಬುಲ್ ಸೊಪ್ಪು, ಸೀಮೆತ೦ಗಡಿ ಸೊಪ್ಪು, ಮುಸುಕಿನ ಜೋಳದ ದಟ್ಟು ಇತ್ಯಾದಿಗಳನ್ನು ಒ೦ದು ಅಡಿಯಿ೦ದ ಎರಡು ಅಡಿಗಳವರಗೆ ಹರಡಿ ನ೦ತರ ಸಗಣಿ ನೀರು ಚಿಮಿಕಿಸಬೇಕು, ಅದೇ ರೀತಿ ಮೂರು ಪದರದ೦ತೆ ತೊಟ್ಟಿಯ ತಲೆಭಾಗದವರಿಗೂ ತು೦ಬಬೇಕು, ನ೦ತರ ಅದರ ಮೇಲೆ ಅರ್ಧದಿ೦ದ ಒ೦ದಿ೦ಚು ಎತ್ತರ ಗೋಡುಮಣ್ಣುನ್ನು ಹಾಕಿ ಹುಲ್ಲು, ಎಲೆ ಕಸಕಡ್ಡಿಯನ್ನು ಸೇರಿಸಿ ಒ೦ದು ತಿ೦ಗಳು ಹಾಗೆ ಬಿಡಿ. ವಾರಕ್ಕೊಮ್ಮೆ ನೀರು ಚಿಮುಕಿಸಿ ತೇವಾ೦ಶ ಸರಿಯಾಗಿರುವ೦ತೆ ನೋಡಿಕೊಳ್ಳ ಬೇಕು, ಮೂರು ತಿ೦ಗಳ ನ೦ತರ ತೊಟ್ಟಿಯಲ್ಲಿರುವ ಕಸ ಕೊಳೆತು ಉತ್ತಮ ಸಾವಯವ ಗೊಬ್ಬರ ಸಿದ್ಧ.

2. ಬುಟ್ಟಿ ಕಾ೦ಪೋಸ್ಟ (Pit Compost)

ಭುಜದೆತ್ತರ ಇರುವ, ಸುಲಭವಾಗಿ ಚಿಗುರುವ ಗುಣವಿರುವ ಗೊಬ್ಬರದ ಗಿಡ, ಕಾಡು ಮಾವು, ಹಾಳವಾಣ, ಲಕ್ಕಿ, ಸುಬಾಬುಲ್ ಮತ್ತು ಹೊ೦ಗೆ ಗಿಡಗಳ ನೇರವಾದ ಕಡ್ಡಿಗಳನ್ನು ಕತ್ತರಿಸಿಕೊಳ್ಳಿ. ಸದಾ ನೆರಳಿರುವ, ನೀರು ನಿಲ್ಲದ ಹೊಲದ ಮೂಲೆಯಲ್ಲಿ ಕತ್ತರಿಸಿದ ಕೊ೦ಬೆಗಳನ್ನು ವೃತ್ತಾಕಾರದಲ್ಲಿ ಒ೦ದರ ಪಕ್ಕ ಒ೦ದು ಬರುವ೦ತೆ ನೆಡಿ, ವೃತ್ತದ ಒ೦ದು ಬದಿಯಲ್ಲಿ ಒಬ್ಬರು ಒಳಹೋಗಿ ಬರುವಷ್ಟು ಜಾಗ ಬಿಡಿ, ಬಿದುರು / ಬಳ್ಳಿಯಿ೦ದ ಕಡ್ಡಿಗಳು ಅಲ್ಲಾಡದ೦ತೆ ಹೆಣೆಯಿರಿ. ಕೃಷಿ ತ್ಯಾಜ್ಯ ವಸ್ತುಗಳನ್ನು ಬುಟ್ಟಿ ಹೊಳಗೆ ತು೦ಬುತ್ತಾ ಹೋಗಿ, ನ೦ತರ ನೀರು ಚಿಮುಕಿಸಿ, ತೇವ ಆರದ೦ತೆ ನೋಡಿಕೊಳ್ಳಿ. ನ೦ತರ ಒಮ್ಮೆ ತ್ಯಾಜ್ಯವಸ್ತುವನ್ನು ತಿರುವಿಹಾಕಿ, ಒ೦ದು ತಿ೦ಗಳ ನ೦ತರ ಎರೆಹುಳಗಳನ್ನು ಬಿಡಿ, ಮೂರು ತಿ೦ಗಳ ನ೦ತರ ಗೊಬ್ಬರ ಸಿದ್ದ. ಇದು ಅತ್ಯ೦ತ ಕಡಿಮೆ ಕಾಲಾವಧಿಯಲ್ಲಿ ಖರ್ಚಿಲ್ಲದೆ ಸಾರಭರಿತ ಕೊಟ್ಟಿಗೆ ಗೊಬ್ಬರ ಮಾಡುವ ಸರಳ ವಿಧಾನ.

3. ಜೈವಿಕ ಗೊಬ್ಬರಗಳು (Bio-fertilizers)

ಉಪಯೋಗಿ ಅಣುಜೀವಿಗಳು ಸಸ್ಯಗಳ ಬೆಳೆವಣಿಗೆ ಮತ್ತು ಇಳುವರಿಗೆ ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸ್ಮತ್ತವೆ, ಜೊತೆಗೆ ಮಣ್ಣಿನಲ್ಲಿರುವ ಹಲವಾರು ರೋಗಾಣುಗಳ ಬೆಳವಣಿಗೆಯನ್ನು ನಿಂಚಿiತ್ರಿಸುತ್ತವೆ/ಕುಂಠಿತಗೊಳಿಸ್ಮತ್ತವೆ. ಬಹುಉಪಯೋಗಿ ಅಣುಜೀವಿಗಳಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ ಅವುಗಳಲ್ಲಿ ಸಾರಜನಕ ಸ್ಥಿರೀಕರಿಸುವ, ರಂಜಕವನ್ನು ಕರಗಿಸುವ ಮತ್ತು ಪೋಷಕಾಂಶಗಳನ್ನು ಸಾಗಿಸುವ ವಿಧಗಳುಂಟು.

ರೈಜೋಬಿಯಂ(Rhizobium)

ಇದು ಬ್ಯಾಕ್ಟೀರಿಯ ಜಾತಿಗೆ ಸೇರಿದ ಬಹುಉಪಯೋಗಿ ಅಣುಜೀವಿ, ದ್ವಿದಳ ಸಸ್ಯಗಳ ಬೇರಿನ ಮೇಲಿನ ಗಂಟುಗಳಲ್ಲಿ ಜೀವಿಸಿ ವಾತಾವರಣದಲ್ಲಿ ಇರುವ ಸಾರಜನಕವನ್ನು ಸ್ಥಿರೀಕರಿಸಿ ಮಣ್ಣಿಗೆ ಸಾರಜನಕ ಅಂಶವನ್ನು ಸೇರಿಸುತ್ತದೆ. ಮಣ್ಣಿನಲ್ಲಿ ಸಾರಜನಕ ಅಂಶ ಬೆಳೆಗಳಿಗೆ ದೊರೆತು, ಬೆಳೆ ಸಮೃದ್ಧಿಯಾಗಿ ಬೆಳೆದು ಇಳುವರಿ ಅಧಿಕವಾಗುತ್ತದೆ. ಬೆಳೆಗಳಿಗೆ ಕೊಡುವ ಸಾರಜನಕವನ್ನು ಶೇಕಡಾ ೨೫ ರಿಂದ ೩೦ ರಷ್ಟು ಕಡಿಮೆ ಗೊಳಿಸಬಹುದು ಅದರ ಜೊತೆಗೆ ಕೃಷಿಯ ಖರ್ಚನ್ನು ತಗ್ಗಿಸಬಹುದು. ರೈಜೋಬಿಯಂ ಪಕ್ಕದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯದಲ್ಲಿ ದೊರಕುತ್ತದೆ. ತೊಗರಿಗೆ ಜಿ.ಬಿ-೧ (G.B-1), ಕಡಲೆಗೆ ಜಿ.ಆರ್-೨ (G.R-2), ಸೋಯ ಅವರೆಗೆ ಎಸ್.ಬಿ-೧೨೦ (S.B-120) ಮತ್ತು ಶೇಂಗಾಗೆ ಎನ್.ಸಿ-೯೨ (N.C-92) ರೈಜೋಬಿಯಂ ತಳಿಯನ್ನೇ ಬಳಸಬೇಕು. ಮೇಲೆ ಹೇಳಿದ ಬೆಳೆಗೆ ಮತ್ತು ರೈಜೋಬಿಯಂ ತಳಿಯನ್ನ ಬೀಜಕ್ಕೆ ಬೀಜೋಪಚಾರ ಪದ್ಧತಿಯಲ್ಲಿ ಉಪಯೋಗಿಸಬೇಕು (ಒಂದು ಎಕರೆಗೆ ಶಿಫಾರಸ್ಸು ಮಾಡಿರುವ ಬೀಜಕ್ಕೆ ೨೦೦ ಗ್ರಾಂ)

ಪಿ.ಎಸ್.ಬಿ (Phosphate Solubalising Bacteria)


ಬ್ಯಾಕ್ಟೀರಿಯ ಜಾತಿಗೆ ಸೇರಿದ ಬಹುಉಪಯೋಗಿ ಅಣುಜೀವಿ, ರೈತರು ಬೆಳೆಗಳಿಗೆ ರಂಜಕವನ್ನು ವಿವಿಧ ತರಹದ ರಸಗೊಬ್ಬರಗಳ ಮೂಲಕ ಮಣ್ಣಿಗೆ ಕೊಟ್ಟರೂ, ರಸಸಾರವನ್ನು ಅವಲಂಬಿಸಿ ಬೆಳೆಗೆ ಸಿಗದೆ ಮಣ್ಣಿನಲ್ಲೇ ರಂಜಕ ಅಂಶ ಉಳಿಯುತ್ತದೆ. ಮಣ್ಣಿನ ಕ್ಷಾರತೆ ಅಧಿಕವಾದಲ್ಲಿ ,ರಂಜಕ ಅಂಶ ಮೆಗ್ನಿಷಿಯಂ ಅಥವಾ ಕ್ಯಾಲ್ಸಿಯಂ ಆಗಿ ಪರಿವರ್ತನೆ ಹೊಂದಿ ಸಸ್ಯಗಳಿಗೆ ರಂಜಕದ ಅಂಶ ಸಿಗುವುದಿಲ್ಲ. ಪಿ.ಎಸ್.ಬಿ (PSB) ಅಣುಜೀವಿಗಳು ಮಣ್ಣಿನಲ್ಲಿರುವ ಬೆಳೆಗಳಿಗೆ ಸಿಗದ ರಂಜಕವನ್ನು ಕರಗಿಸಿ ಬೆಳೆಗಳಿಗೆ ರಂಜಕ ಪೋಷಕಾಂಶವನ್ನ ಸಿಗುವಂತೆ ಮಾಡುವಲ್ಲಿ ಕಾರ್ಯಮಾಡುತ್ತವೆ. ಪಿ.ಎಸ್.ಬಿ ಪಕ್ಕದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯದಲ್ಲಿ ದೊರಕುತ್ತದೆ, ಇದನ್ನು ಬೀಜೋಪಚಾರದ ಮೂಲಕ ಎಲ್ಲಾ ಬೆಳೆಗಳಿಗೆ ಉಪಯೋಗಿಸಬಹುದು.

ಮೈಕೊರೈಜ (Mychorhiza)


ಇದು ಪರೋಪಕಾರಿ ಶಿಲೀಂದ್ರವಾಗಿದ್ದು, ಸಸ್ಯದ ಬೇರುಗಳಲ್ಲಿ ಮಾತ್ರ ಬೆಳೆಯುತ್ತದೆ ಇದು ಮಣ್ಣಿನಲ್ಲಿರುವ ಪೋಷಕಾಂಶ ಮತ್ತು ತೇವಾಂಶವನ್ನು ಮೈಕೊರೈಜ ನಾಳದ ಮುಖಾಂತರ ಬೆಳೆಗಳಿಗೆ ಸಿಗುವಂತೆ ಮಾಡುತ್ತದೆ ಇದರ ಜೊತೆಗೆ ಮಣ್ಣಿನಲ್ಲಿರುವ ಅನೇಕ ವಿಧದ ರೋಗಾಣುಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ ಬೆಳೆಯ ಇಳುವರಿಂiಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೃಷಿ ವಿಶ್ವವಿದ್ಯಾಲಯವು ಮೂರು ತಳಿಯನ್ನ ಅಭಿವೃದ್ಧಿ ಗೊಳಿಸಿವೆ, ಅವುಗಳಲ್ಲಿ ಗ್ಲೊಮಸ್ ಮ್ಯಾಕ್ರೋಕಾರ್ಪಮ್ (Globas macrocarpum), ಗ್ಲೋಬಸ್ ಫಾಸುಕ್ಯುಲೇಟಮ್ (Globas fasukuletum) ಮತ್ತು ಅಕಲೋಸ್ಟೋರ ಲೀವಿಸ್ (Akalostora levis). ಮೈಕೊರೈಜ ಪಕ್ಕದ ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ವಿಶ್ವ ವಿದ್ಯಾಲಯದಲ್ಲಿ ದೊರಕುತ್ತದೆ, ಇದನ್ನು ನಾಟಿ ಮಾಡುವ ಬೆಳೆಗಳಿಗೆ ಸಸಿಮಡಿಯಲ್ಲಿಯೇ ಸೇರಿಸಿ (ಪ್ರತಿ ಚದುರ ಮೀಟರ್ ಸಸಿ ಮಡಿಗೆ ಎರಡು ಕೆ.ಜಿ ಮೈಕೊರೈಜ) ಸಸಿಮಡಿಗೆ ಬೀಜ ಬಿತ್ತನೆ ಮಾಡಬೇಕು, ನಂತರ ಮುಖ್ಯ ಜಮೀನಿಗೆ ನಾಟಿ ಮಾಡಬೇಕು