Search This Blog

Wednesday, December 24, 2014

ಮರ ಆಧರಿತ ಕೃಷಿ ಪ್ರಯೋಗ

ನದಿಯ ಒಡಲಿನ ರೈತರು ನೆರೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಭತ್ತದ ಕೃಷಿಯನ್ನು ಮಾಡುತ್ತಿದ್ದಾರೆ. ನೆರೆಯನ್ನು ಬಗ್ಗಿಸುವ ನೆರೆಗೂಳಿ, ಕರಿಜಿಡ್ಡು, ಬಿಳಿಜಿಡ್ಡು ಇತ್ಯಾದಿ ಭತ್ತದ ತಳಿಗಳು ಇಲ್ಲಿ ಕಾಣಸಿಗುತ್ತವೆ. ಆದರೆ ಬರದ ಪರಿಸ್ಥಿತಿ ಎದುರಾದಾಗ ಇವರಿಗೆ ಎದುರಾಗುವುದು ಸಂಕಟದ ಸರಮಾಲೆ.
ಆದರೆ ಬರವಿದ್ದರೂ ಭರಪೂರ ಬೆಳೆ ಬೆಳೆಯುತ್ತಿರುವವರು ವರದಾ ನದಿಯ ಸಮೀಪ ಜಮೀನು ಹೊಂದಿರುವ ಹುಬ್ಬಳ್ಳಿ ತಾಲ್ಲೂಕಿನ ಕಂಪ್ಲಿಕೊಪ್ಪ ಗ್ರಾಮದ ಮಲ್ಲೇಶಪ್ಪ ಯಲ್ಲಪ್ಪ ಹಕ್ಲದ. ಬರ ಮಣಿಸುವ ಕೃಷಿ ಪದ್ಧತಿಗಳನ್ನು ಇವರು ತಮ್ಮ ಮೂರುವರೆ ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಅಳವಡಿಸಿಕೊಂಡು ಉತ್ತಮ ಆದಾಯ ಪಡೆದುಕೊಳ್ಳುತ್ತಿದ್ದಾರೆ.
‘ಕಲ್ಲುಭೂಮ್ಯಾಗ ಸಾವಿ-ಜೋಳ ಬೆಳೆತಿದ್ವಿ, ಮುಂಗಾರನಾಗ ಬೆಳೆ ಹಾಕ್ಕೋಳೋದು, ಆಮೇಲೆ ಕೆಲ್ಸ ಹುಡಿಕೊಂಡು ಬೇರೆಕಡೆ ಹೋಗೂದು ನಮ್ಮ ಕೆಲ್ಸವಾಗಿತ್ತು. ಬಿದ್ದ ಮಳೆ ನೀರು ಹಳ್ಳಕ್ಕ ಸೇರ್‌ಬಿಡ್ತಿತ್ತು. ಆದ್ರ ಈಗ ನೀರು ನಿಲ್ಸಿ, ಹಣ್ಣಿನ ಗಿಡಗಳ ಜೊತೆ ಕಾಡ ಮರಗಳನ್ನ ಬೆಳೆಸೀವಿ. ಒಡ್ಡು ಮಾಡಿ ಅದರ ಮ್ಯಾಲೆ ಹುಲ್ಲು, ತಿಪ್ಪಿ ಗೊಬ್ಬರ ಮತ್ ಎರೆಹುಳುವಿನ ಗೊಬ್ಬರ ಹಾಕಿ ಬೇಸಾಯ ಮಾಡಿದಮ್ಯಾಲೆ ಒಳ್ಳೆ ಆದಾಯ ಬರಕತ್ತತಿ...’ ಎಂದು ತಮ್ಮ ಬರನಿರೋಧಕ ಕೃಷಿಯ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಇವರು.
ಕೃಷಿಯಲ್ಲಿ ಖುಷಿ ಕಾಣಲು ಬರ ಮಣಿಸುವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಬೆಳೆಗಳಿಗೆ ತೇವಾಂಶ ಸಿಗುವಂತೆ ಕೃಷಿಭೂಮಿಯನ್ನು ಸಿದ್ಧಗೊಳಿಸಬೇಕು. ಮಳೆ ನೀರಿನ ಲೆಕ್ಕಚಾರ, ಆಹಾರ ಬೆಳೆಗಳ ಜೊತೆ ವಾಣಿಜ್ಯ ಬೆಳೆಗಳು, ನೀರು ಇಂಗಿಸಲು ಕಾಡು ಮರಗಳ ತೋಪು, ಅನೇಕ ಉಪ ಬೆಳೆಗಳು ಮತ್ತು ಸಾವಯವ ಗೊಬ್ಬರಗಳ ಬಳಕೆ ಅತಿ ಮುಖ್ಯ ಎಂಬ ಧ್ಯೇಯದೊಂದಿಗೆ ಬರ ಹಿಮ್ಮೆಟ್ಟಿಸುವ ಕೃಷಿ ಪದ್ಧತಿಯನ್ನು ಕಳೆದ 12 ವರ್ಷಗಳಿಂದ ಅಳವಡಿಸಿಕೊಂಡಿದ್ದಾರೆ ಇವರು.
ಆರಂಭದ ಹೆಜ್ಜೆ...
ಮಲ್ಲೇಶಪ್ಪನವರದ್ದು ಒಟ್ಟು ಮೂರು ಎಕರೆ ಒಣಭೂಮಿ ಇದೆ. ನೀರಾವರಿ ವ್ಯವಸ್ಥೆ ಇಲ್ಲವೇ ಇಲ್ಲ. ಸರಾಸರಿ ವರ್ಷಕ್ಕೆ 700  ರಿಂದ 750 ಮಿಲಿ ಮೀಟರ್ ಮಳೆ ಬೀಳುವ ಪ್ರದೇಶ. ಮೊದಲು ಸಾವೆ, ಹೆಸರು, ಜೋಳ, ಉದ್ದು ಬೆಳೆಯುವ ಜಾಗ. ಮುಂಗಾರು ಹಂಗಾಮಿನಲ್ಲಿ ಮಾತ್ರ ಕೃಷಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಮುಂಗಾರು ಸಮಯದಲ್ಲಿ ಕೃಷಿ ಮಾಡುತ್ತಿದ್ದರು. ಆನಂತರ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ಏನಾದರೂ ಮಾಡಬೇಕೆಂಬ ಬಯಕೆ. ಅಲ್ಲಿಂದ ಅವರಿಗೆ ಮರ ಆಧಾರಿತ ಕೃಷಿ ಪದ್ಧತಿಯತ್ತ ಒಲವು ಮೂಡಿತು.
ಆರಂಭದಲ್ಲಿ ಜಮೀನಿನಲ್ಲಿ ಬೀಳುವ ಮಳೆ ನೀರನ್ನು ಇಂಗಿಸುವ ಪ್ರಯತ್ನ ಮಾಡಿದರು. ತಮ್ಮ ಜಮೀನಿನ ಸುತ್ತಲೂ ಟ್ರೆಂಚ್ ಕಮ್ ಬಡ್ ಮಾಡಿದರು. ಸುಮಾರು ಎರಡು ಅಡಿ ಅಗಲ, ಎರಡು ಅಡಿ ಆಳ ಮತ್ತು ಹತ್ತು ಅಡಿ ಉದ್ದ ಹಾಗೂ ಪ್ರತಿ ಹತ್ತು ಅಡಿಗೊಂದು ಒಂದು ಅಡಿ ಉದ್ದ ಮೆಟ್ಟಿಲು ಮಾಡಿದರು. ಇದರಿಂದ ಸಾಕಷ್ಟು ನೀರು ಇಂಗಿಸಲು ಅನುಕೂಲ ಆಯಿತು. ಅವರ ಹೊಲದ ಸುತ್ತಲೂ ಜೀವಂತ ಬೇಲಿಗೆ ಪ್ರಾಶಸ್ತ್ಯ ಕೊಟ್ಟರು. ಟ್ರೆಂಚ್ ಕಮ್ ಬಡ್‌ನಲ್ಲಿ ಸುಮಾರು 400 ಕಾಡು ಸಸಿಗಳನ್ನು ನೆಟ್ಟರು. ಹೊಲದ ನಡುವೆ 30/30/10 ಅಡಿ ಅಳತೆಯ ಕೃಷಿಹೊಂಡ ಮಾಡಿಕೊಂಡರು. ಹೆಚ್ಚಾದ ನೀರು ಕೃಷಿಹೊಂಡಕ್ಕೆ ಹರಿದು ಬಂತು. ಅದರಿಂದ ಹಣ್ಣಿನ ಗಿಡಗಳಿಗೆ ಬೇಸಿಗೆಯಲ್ಲಿ ನೀರು ಒದಗಿಸಿದ್ದಾರೆ. ಹೊಲದಲ್ಲಿ ಬಿಳುವ ಮಳೆನೀರನ್ನು ಪ್ರತಿ ಹಣ್ಣಿನ ಗಿಡಗಳಿಗೆ ಸುತ್ತ ನಿಲ್ಲುವಂತೆ ಮಾಡಿದ್ದಾರೆ. ಇದರ ಜೊತೆ ಪ್ರತಿ ಹಣ್ಣಿನ ಗಿಡದ ಸುತ್ತಲೂ 2 ಅಡಿ ಅಗಲ ಅಳತೆಯ ಟ್ರೆಂಚ್ ತೋಡಿ, ಅದರಲ್ಲಿ ಹಸಿ ಮತ್ತು ಒಣ ಕೃಷಿ ತ್ಯಾಜ್ಯ ವಸ್ತುಗಳನ್ನು ತುಂಬಿಸಿ, ಅದಕ್ಕೆ ಎರಡು ಮಕರಿ ಸೆಗಣಿ ಮತ್ತು 10 ಕೊಡ ನೀರನ್ನು ತುಂಬಿಸಿ ಅದರ ಮೇಲೆ ತೆಳುವಾದ ಮಣ್ಣನ್ನು ಹಾಕಿದ್ದಾರೆ. ಇದರಿಂದ ಬೇರು ಜಾಗದಲ್ಲಿ ತೇವಾಂಶ ಹಿಡಿದಿಡಲು ಸಹಾಯಕ ಎಂಬುದು ಅವರ ಬಲವಾದ ನಂಬಿಕೆ.
ಬದುಕು ಬದಲಾಯಿಸಿದ ಬಹುಬೆಳೆ
ಆರಂಭದಲ್ಲಿ ಏಕಬೆಳೆ ಪದ್ಧತಿಯಿಂದ ಬದುಕು ಬರಡಾಗಿತ್ತು. ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡ ಮೇಲೆ ಬದುಕು ಹಸನಾಯಿತು. ಇದರ ಮೂಲ ಮರ ಆಧಾರಿತ ಬಹುಬೆಳೆ ಪದ್ಧತಿ.
80 ಸಪೋಟ, 40 ಮಾವು, 10 ನುಗ್ಗೆ, 10 ಕರಿಬೇವು, ಎರಡು ಸಾವಿರಕ್ಕೂ ಅಧಿಕ ಕಾಡು ಮರಗಳು, ಮೇವು ಬೆಳೆಗಳಾದ ಸ್ಟೈಲೋ ಹೇಮಾಟ, ಸ್ಟೈಲೋ ಸಿಯಾಬ್ರಾನ, ಗಿನಿಹುಲ್ಲು, ತ್ರಿಸಂಕರಣ ಹುಲ್ಲು, ನೇಪಿಯರ್, ಬೇಲಿ ಕುದುರೆ ಮೆಂತ್ಯ. ಉಪ ಕೃಷಿ ಬೆಳೆಗಳಾದ ಜೋಳ, ಹೆಸರು, ಉದ್ದು, ಸೋಯಾ, ಹತ್ತಿ, ಅರಿಶಿಣ, ಸೌತೆಕಾಯಿ ಬೆಳೆಗಳನ್ನು ಇವರ ಹೊಲದಲ್ಲಿ ಕಾಣಬಹುದು.
ಮೇವಿಗಾಗಿ ಸುಬಾಬುಲ್, ಚೊಗಚೆ, ಹಾಲವಾಣ. ಉರುವಲುಗಾಗಿ ಅಕೇಶಿಯಾ, ನೀಲಗಿರಿ, ಗೊಬ್ಬರಕ್ಕಾಗಿ ಗ್ಲೀರಿಸಿಡಿಯಾ, ಸೀಮೆತಂಗಡಿ. ಮುಟ್ಟುಗಾಗಿ ತೇಗ, ಬೀಟೆ, ಹೊನ್ನೆ ಜಾತಿಯ ಕಾಡು ಮರಗಳನ್ನು ಬೆಳೆದಿದ್ದಾರೆ. ಸುಬಾಬುಲ್ ಅತಿಯಾದಾಗ ಕೊಂಬೆಗಳನ್ನು ಸವರಿ ಕಣದಲ್ಲಿ ಹಾಕುತ್ತಾರೆ. ಸುಬಾಬುಲ್ ಎಲೆ ಉದುರಿದ ಮೇಲೆ ಅದನ್ನು ಗೋಣಿ ಚೀಲದಲ್ಲಿ ಸಂಗ್ರಹಿಸುತ್ತಾರೆ. ಮುಂದೆ ಬೇಸಿಗೆಯಲ್ಲಿ ರಾಸುಗಳಿಗೆ ಮೇವಾಗಿ ಬಳಸುತ್ತಾರೆ. ಮನೆಗಳಿಗೆ ಬೇಕಾದ ಎಲ್ಲಾ ತರಕಾರಿಗಳು, ಬೇಳೆ-ಕಾಳುಗಳು, ಜೋಳದ ಬೆಳೆಗಳನ್ನು ಸಾವಯವ ರೀತಿಯಲ್ಲಿ ಬೆಳೆಯುತ್ತಾರೆ.
ಮೂರೂವರೆ ಎಕರೆ ಮಳೆಯಾಶ್ರಿತ ಜಮೀನಿನಲ್ಲಿ ಪ್ರತಿವರ್ಷ 2 ರಿಂದ 3 ಲಕ್ಷ ಆದಾಯ ಬರುತ್ತಿದೆ. ಹಾಲು ಮಾರಾಟದಿಂದ ವರ್ಷಕ್ಕೆ ಒಂದು ಲಕ್ಷ ಆದಾಯ ಗ್ಯಾರೆಂಟಿ. ಎರೆಗೊಬ್ಬರ ಉತ್ಪಾದನೆಯಿಂದ ವರ್ಷಕ್ಕೆ ಸರಾಸರಿ ಒಂದು ಲಕ್ಷ ಆದಾಯ ಬರುತ್ತಿದೆ. ಮನೆಯಲ್ಲಿ ಆಡು ಮತ್ತು ಕುರಿ ಸಾಕುತ್ತಿದ್ದಾರೆ. ಇದರಿಂದ ಸರಾಸರಿ 25 ಸಾವಿರ ರೂಪಾಯಿ ಆದಾಯ ಬರುತ್ತಿದೆ. ಒಟ್ಟಾರೆ ಆದಾಯ ಮತ್ತು ಪರಿಸರದ ದೃಷ್ಟಿಯಿಂದ ಇವರ ಕೃಷಿ ವ್ಯವಸ್ಥೆ ಬಲಗೊಂಡಿದೆ.
ಲಾಭದಾಯಕ ಹೈನುಗಾರಿಕೆ
ಕೃಷಿಗೆ ಪೂರಕವಾಗಿ ಹೈನುಗಾರಿಕೆ ಆರಂಭಿಸಿದ್ದಾರೆ. ಪ್ರತಿ ತಿಂಗಳು ಸರಾಸರಿ 10 ರಿಂದ 12 ಸಾವಿರ ಆದಾಯ ಹಾಲು ಮಾರಾಟದಿಂದ ಬರುತ್ತಿದೆ. ಬದುಗಳ ಮೇಲೆ ನಾನಾ ಬಗೆಯ ಮೇವು ಬೆಳೆಗಳನ್ನು ಬೆಳೆದಿದ್ದಾರೆ. ಮಣ್ಣು ಮತ್ತು ನೀರು ಸಂರಕ್ಷಣೆ ಜೊತೆ ಮೇವಿನ ಇಳುವರಿಯನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿರುವ ಎಲ್ಲಾ ರಾಸುಗಳಿಗೆ ಇವರ ಜಮೀನಲ್ಲಿ ಮೇವು ಬೆಳೆ ಬೆಳೆಯುತ್ತಿದ್ದಾರೆ.
ಹೊಲದ ಸುತ್ತಲೂ ಮೇವಿನ ಮರಗಳನ್ನು ಬೆಳೆದಿದ್ದಾರೆ. ರಾಸುಗಳಿಂದ ಬರುವ ಸೆಗಣಿಯನ್ನು ಎರೆಗೊಬ್ಬರ ತಯಾರಿಕೆಯಲ್ಲಿ ಬಳಸುತ್ತಾರೆ. ಇವರ ಮನೆಯ ಹಿತ್ತಲಲ್ಲಿ ದೊಡ್ಡ ಪ್ರಮಾಣದ ಎರೆಗೊಬ್ಬರ ಘಟಕವನ್ನು ಮಾಡಿಕೊಂಡಿದ್ದಾರೆ.  ಇವರ ಸಾಧನೆ ನೋಡಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಜಿಲ್ಲಾ ಮಟ್ಟದ ಅತ್ತುತ್ಯಮ ಕೃಷಿಕ ಪ್ರಶಸ್ತಿ ನೀಡಿದೆ. ಇದರ ಜೊತೆ ನೂರಾರು ರೈತರು ಇವರನ್ನು ಅನುಸರಿಸುವತ್ತ ಮನಸ್ಸು ಮಾಡಿದ್ದಾರೆ. ಇವರ ಸಂಪರ್ಕಕ್ಕೆ - 9902156165.­

No comments:

Post a Comment