Search This Blog

Monday, April 27, 2009

ಆಹಾರ ‘ಕಲಬೆರಕೆ’ ಮತ್ತು ‘ಪರಿಹಾರ’


“ಆಹಾರ ದೇಹದ ಬೆಳವಣಿಗೆಗೆ ಅವಶ್ಯಕ. ಲಾಭದ ದುರಾಸೆಯಿಂದ ಮಾರಾಟಗಾರರು ಆಹಾರವನ್ನು ಕಲಬೆರಕೆ ಮಾಡುತ್ತಿದ್ದಾರೆ. ಸರ್ಕಾರ ಕಾನೂನು ಹೊರಡಿಸಿದರು ಕಲಬೆರಕೆ ನಿಲ್ಲುತ್ತಿಲ್ಲ. ಕಲಬೆರಕೆ ವಿರುದ್ದ ಗ್ರಾಹಕರೆ ಹೋರಾಟ ಮಾಡಬೇಕಿದೆ. ಕಲಬೆರಕೆ ಆಹಾರವನ್ನು ಕಂಡುಹಿಡಿಯುವ ಸರಳ ವಿಧಾನಗಳನ್ನು ಕೊಟ್ಟಿದೆ”


“ಸಮದೋಷ, ಸಮಾಗ್ನಿಶ್ಚ, ಸಮದಾತು, ಮಲಕ್ರಿಯಃ, ಪ್ರಸನ್ನಾತ್ಮೇಂದ್ರಿಯ ಮನಃ ಸ್ವಸ್ಥ ಇತ್ಯಭಿಧೀಯತೇ”. ಚರಕಾಚಾರ್ಯರು “ಚರಕ ಸಂಹಿತೆ” ಪುಸ್ತಕದಲ್ಲಿ ಆರೋಗ್ಯದ ಒಳಗುಟ್ಟನ್ನ ತೆರೆದಿಟ್ಟಿದ್ದಾರೆ, ನಮ್ಮ ಆರೋಗ್ಯ ರಕ್ಷಣೆಯ ಮೂಲ ಅಂಶಗಳಲ್ಲಿ, ಯೋಗ್ಯವಾದ ಪೌಷ್ಟಿಕಾಂಶ ಆಹಾರ, ವ್ಯಯಕ್ತಿಕ ಸುಚಿತ್ವ, ಉತ್ತಮ ದಿನಚರ್ಯೆ ಮತ್ತು ಉತ್ತಮ ನೀರು - ಗಾಳಿ. ಶುಚಿಯಾದ, ಕಲಬೆರಕೆ ಇಲ್ಲದ ಆಹಾರ ಆರೋಗ್ಯ ವರ್ಧಕ. ಶುದ್ಧ ಮತ್ತು ಪೌಷ್ಠಿಕ ಆಹಾರವು ಎಲ್ಲರಿಗೂ ಸಮರ್ಪಕವಾಗಿ ಸಿಗುತ್ತಿಲ್ಲ, ಇದಕ್ಕೆ ಬಡತನವೊಂದೆ ಕಾರಣವಲ್ಲ, ಇದಕ್ಕೆ ಅನೇಕ ಸಾಮಾಜಿಕ ಕಾರಣಗಳು ಇವೆ. ಅಂದಾಜಿನ ಪ್ರಕಾರ ಒಂದು ಕುಟುಂಬ ಆಹಾರಕ್ಕಾಗಿ ವೆಚ್ಚ ಮಾಡುವ ಹಣವನ್ನು ಈ ರೀತಿ ಬೇರ್ಪಡಿಸಬಹುದು,
೧. ಐದನೇ ಒಂದು ಭಾಗ ಧಾನ್ಯಕ್ಕೆ
೨. ಐದನೇ ಒಂದು ಭಾಗ ಖಾದ್ಯ ತೈಲ
೩. ಐದನೇ ಒಂದು ಭಾಗ ತರಕಾರಿ ಮತ್ತು ಹಣ್ಣು
೪. ಐದನೇ ಒಂದು ಭಾಗ ಹಾಲು ಮತ್ತು ಅದರ ಉತ್ಪನ್ನ
೫. ಐದನೇ ಒಂದು ಭಾಗ ಮಾಂಸ ಮತ್ತು ಬೇಳೆ ಕಾಳುಗಳು

ಆಹಾರ ತಜ್ಙರ ಪ್ರಕಾರ ನಮ್ಮ ಆಯವ್ಯಯದಲ್ಲಿ ಮೇಲಿನ ಹೇಳಿದಂತೆ ವ್ಯಯಮಾಡಿದಲ್ಲಿ ಸಾಕಷ್ಟು ಸಮತೋಲನದ ಆಹಾರ ದೊರೆಯುದೆಂದು ಹೇಳಿದ್ದಾರೆ. ವ್ಯಾಪಾರಿಗಳು ಲಾಭಕ್ಕಾಗಿ ತಿನ್ನುವ ಆಹಾರದಲ್ಲಿ ಕಲಬೆರಕೆ ಮಾಡುತ್ತಾರೆ, ಇದರಿಂದ ಬಳಕೆದಾರರ ಆರೋಗ್ಯಕ್ಕೆ ಹಾನಿ ಉಂಟುಮಾಡುವುದು. ಕಲಬೆರಕೆ ಆಹಾರದಿಂದ ವಿಷವಾಗಿ ಪರಿಣಮಿಸಿ ಜೀವಕ್ಕೆ ಅನಾಹುತವಾಗುವ ದಾರುಣ ಸಂಗತಿಗಳು ಆಗಾಗ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಇದಕ್ಕೆ ಸರ್ಕಾರ ಕೂಡ ಕಲಬೆರಕೆ ಮಾಡಿದವರಿಗೆ ಆಹಾರಕಲಬೆರಕೆ ತಡೆಗಟ್ಟುವ ಕಾನೂನು ೧೯೫೪ರ ಪ್ರಕಾರ ದಂಡ ಮತ್ತು ಕಠಿಣ ಶಿಕ್ಷೆಯನ್ನು ಈ ಕೆಳಗಿನಂತೆ ವಿಧಿಸಬಹುದಾಗಿದೆ.

೧. ಆರೋಗ್ಯಕ್ಕೆ ಹಾನಿಕರವಲ್ಲದ ಕಲಬೆರಕೆಗೆ ಕನಿಷ್ಟ ೬ ತಿಂಗಳ ಜೈಲುವಾಸ ಹಾಗು ೧೦೦೦=೦೦ ರೂ ದಂಡ ವಿಧಿಸಲಾಗುತ್ತದೆ
೨. ಹಾನಿಕಾರಕ ಕಲಬೆರಕೆಗೆ ಕನಿಷ್ಟ ೬ ವರ್ಷ ಜೈಲುವಾಸ ಮತ್ತು ಕನಿಷ್ಠ ೨೦೦೦=೦೦ ರೂ ದಂಡ ವಿಧಿಸಲಾಗುತ್ತದೆ
೩. ಪ್ರಾಣಪಾಯ ತರಬಲ್ಲ ಕಲಬೆರಕೆಗೆ ಜೀವಾವಧಿ ಶಿಕ್ಷೆ ಹಾಗು ಕನಿಷ್ಠ ೫೦೦೦=೦೦ ರೂ ದಂಡ ವಿಧಿಸಲಾಗುತ್ತದೆ

ಕಲಬೆರಕೆಯನ್ನು ತಡೆಗಟ್ಟಲು ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಹಾರ ತನಿಖಾಧಿಕಾರಿಗಳು ಕೆಲಸ ಮಾಡುತ್ತಿದ್ದು, ಸಂಶಯ ಆಹಾರವನ್ನು ಮಾರಾಟಗಾರರಿಂದ ಪಡೆದು ಪರೀಕ್ಷೆಗೆ ಆಹಾರ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಾನೂನು ಪ್ರಕಾರ ಕಳುಹಿಸಿ ಕಲಬೆರಕೆ ಕಂಡುಬಂದಲ್ಲಿ ಕಾನೂನಿನ ಕ್ರಮ ತೆಗೆದುಕೊಳ್ಳುವರು. ಅದರಂತೆ ಪಟ್ಟಣ ಪ್ರದೇಶದಲ್ಲಿ ನಗರಸಭೆ/ಮಹಾನಗರ ಪಾಲಿಕೆಯಿಂದ ಕೆಲಸ ನಿರ್ವಹಿಸುತ್ತಾರೆ. ಈ ಸಮಸ್ಯೆಯ ವಿರುದ್ದ ಗ್ರಾಹಕರು ಜಾಗೃತರಾಗಬೇಕಾಗುತ್ತದೆ.

ಕಲಬೆರಕೆ ಆಹಾರವನ್ನು ಈ ಕೆಳಗಿನ ಸರಳ ವಿಧಾನದಿಂದ ಕಂಡುಹಿಡಯಬಹುದು

ಬೆಣ್ಣೆ ಹಾಗು ತುಪ್ಪ ವನಸ್ಪತಿ ಅಥವಾ ಡಾಲ್ಡ ಇರುವ ಸಾಧ್ಯತೆ - ಸುಮಾರು ಹತ್ತು ಮಿಲಿ ಲೀಟರ್ ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಸ್ವಲ್ಪ ಸಕ್ಕರೆಯನ್ನು ಬೆರಸಿ ಕರಗಿಸಬೇಕು, ನಂತರ ಕರಗಿಸಿದ ದ್ರಾವಣವನ್ನು ತುಪ್ಪ ಅಥವಾ ಬೆಣ್ಣೆಯ ಮೇಲೆ ಹಾಕಿ, ಕಲಬೆರಕೆಯಾಗಿದ್ದರೆ ಬೆಣ್ಣೆ ಅಥವಾ ತುಪ್ಪದ ಮೇಲೆ ಕೆಂಪು ನೀರಿನ ಪದರ ರೂಪಗೊಳ್ಳುತ್ತದೆ.
ಬೆಣ್ಣೆ ಬೇಯಿಸಿದ ಆಲೂಗಡ್ಡೆ ಮತ್ತು ಹಿಟ್ಟು ಇರುವ ಸಾಧ್ಯತೆ - ಬೆಣ್ಣೆಯ ಮೇಲೆ ಟಿಂಕ್ಚರ್ ಅಯೋಡಿನ್‌ನನ್ನು (ಗಾಯವಾದಾಗ ಹಾಕುವ ದ್ರಾವಣ) ಕೆಲವು ಹನಿಹಾಕಬೇಕು ಕಲಬೆರಕೆ ಯಾಗಿದ್ದಲ್ಲಿ ಕೆಲವು ನಿಮಿಷದ ನಂತರ ನಸುಗೆಂಪಿನ ಅಯೋಡಿನ್ ನೀಲಿ ಬಣ್ಣಕ್ಕೆ ತಿರುಗುತ್ತದೆ.
ಚಹಾಪುಡಿ ಚಹಾ ಮಾಡಿದ ಗಷ್ಠವನ್ನು ಒಣಗಿಸಿ ಬಣ್ಣ ಹಾಕಿದಾಗ ಇರುವ ಸಾಧ್ಯತೆ - ತೇವದ ಒತ್ತು ಕಾಗದದ ಮೇಲೆ (ಬ್ಲಾಟಿಂಗ್) ಕಲಬೆರೆಕೆ ಚಹಾಪುಡಿಯನ್ನು ಉದುರಿಸಿದರೆ, ತೇವ ಕಾಗದದ ಮೇಲೆ ಹಳದಿ ಮಿಶ್ರಿತ ಕೆಂಪು ಚುಕ್ಕೆಗಳು ಮೂಡಿದರೆ ಚಹಾಪುಡಿ ಕಲಬೆರೆಕೆ ಎಂದು ತಿಳಿದುಕೊಳ್ಳಬೇಕು.
ಮೆಣಸಿನ ಪುಡಿ ಮರದ ಹೊಟ್ಟು ಮತ್ತು ಬಣ್ಣ ಇರುವ ಸಾಧ್ಯತೆ - ನೀರಿನ ಮೇಲೆ ಮೆಣಸಿನಪುಡಿಯನ್ನು ಹಾಕಿದಾಗ ಮರದಹೊಟ್ಟು ನೀರಿನ ಮೇಲೆ ತೇಲುತ್ತದೆ ಮತ್ತು ಬಣ್ಣವಿದ್ದಲ್ಲಿ ಕರಗುತ್ತದೆ
ಕಾಫೀಪುಡಿ ಚಕೋರಿ ಮತ್ತು ಕಾಫೀ ಮಾಡಿದ ಗಷ್ಠ ಇರುವ ಸಾಧ್ಯತೆ - ಕಾಫೀಪುಡಿಯನ್ನು ನೀರಿಗೆ ಬೆರಸಿ ಚೆನ್ನಾಗಿ ಕಲಕಿದರೆ ಕಾಫೀಪುಡಿ ತೇಲುತ್ತದೆ, ಚಕೋರಿ ತಳ ಸೇರುತ್ತದೆ, ಬಣ್ಣ ಹಾಕಿದ್ದಲ್ಲಿ ನೀರು ಕಡುಗೆಂಪಿನ ಬಣ್ಣಕ್ಕೆ ತಿರುಗಿಸುತ್ತದೆ
ರವೆ ಕಬ್ಬಿಣದ ಪುಡಿ ತೂಕ ಬರುವುದಕ್ಕೆ ಕಬ್ಬಿಣದ ಪುಡಿಯನ್ನು ಬೆರಸುವ ಸಾಧ್ಯತೆ - , ಆಯಸ್ಕಾಂತವನ್ನು ರವೆಯೊಳಗೆ ಆಡಿಸಿದರೆ ಕಬ್ಬಿಣದ ಧೂಳು ಅಂಟಿಕೊಳ್ಳುತ್ತದೆ
ಜೇನು ತುಪ್ಪ ಸಕ್ಕರೆ ಅಥವಾ ಬೆಲ್ಲದ ಪಾಕ ಇರುವ ಸಾಧ್ಯತೆ - ಸ್ವಲ್ಪ ಹತ್ತಿಯನ್ನು ಜೇನುತುಪ್ಪದಲ್ಲಿ ಅದ್ದಿ ತೆಗೆದು ಬೆಳ್ಕಿಗೆ ಹಿಡಿದಾಗ ಉರಿಯುತ್ತದೆ, ಕಲಬೆರಕೆ ಆಗಿದ್ದಲ್ಲಿ ಉರಿಯುದಿಲ್ಲ ಬದಲು ಚೆಟಪಟಗುಟ್ಟುತ್ತದೆ
ಇಂಗು ವಾಸನೆ, ಬಣ್ಣ ಸೇರಿಸಿದ ರಾಳ ಅಥವಾ ಅಂಟು ಇರುವ ಸಾಧ್ಯತೆ - ಶುದ್ಧ ಇಂಗು ನೀರಿನಲ್ಲಿ ಕರಗಿ ಬಿಳಿ ದ್ರಾವಣವಾಗುತ್ತದೆ. ಶುದ್ಧ ಇಂಗು ಬೆಂಕಿಯಿಂದ ಹತ್ತಿಕೊಂಡು ಉಜ್ವಲ ಜ್ವಾಲೆಯಾಗಿ ಬೆಳೆಗುತ್ತದೆ, ಮಣ್ಣು-ಕಲ್ಲಿನ ಅಂಶಗಳು ತಳಭಾಗದಲ್ಲಿ ನಿಲ್ಲುತ್ತದೆ
ಲವಂಗ ಎಣ್ಣೆ ತೆಗೆದಿರುವ ಸಾಧ್ಯತೆ - ಲವಂಗದ ಗಾತ್ರವು ಚಿಕ್ಕದಾಗಿದ್ದು ಮುರುಟಿಕೊಂqರುತ್ತದೆ.

(ಎಚ್ಚರಿಕೆ ದೃಷ್ಠಿಯಿಂದ ಪ್ರಬಲ ಹೈಡ್ರೋಕ್ಲೋರಿಕ್ ಆಮ್ಲ ಬಳಸುವಾಗ ಸ್ವಲ್ಪ ಗಮನಹರಿಸಿ ಬಳಸಬೇಕು, ಇಲ್ಲದಿದ್ದರೆ ಅನಾಹುತಯಾಗುವ ಸಂಭವ ಹೆಚ್ಚು.)


ಮಂಜುನಾಥ ಹೊಳಲು

No comments:

Post a Comment