ಕುಲಾಂತರಿಯ ಅವಾಂತರಗಳು...
[ಬದನೆ, ಆಲೂಗಡ್ಡೆ, ಬೆಂಡೆ, ಟೊಮೊಟೊ, ಹೂವುಕೋಸು, ಮೆಕ್ಕೆಜೋಳ, ಮಾವು, ಹತ್ತಿ, ಇಲಿ ಮತ್ತು ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡುತ್ತಿವೆ]
ಎಲ್ಲರೂ ಒಟ್ಟಾಗಿ:
ಓಂ ಬ್ರಹ್ಮದೇವಾ ನಮಃ, ಓಂ ಬ್ರಹ್ಮದೇವಾ ನಮಃ, ಓಂ ಬ್ರಹ್ಮದೇವಾ ನಮಃ....
ಓಂ ಬ್ರಹ್ಮದೇವಾ ನಮಃ, ಓಂ ಬ್ರಹ್ಮದೇವಾ ನಮಃ, ಓಂ ಬ್ರಹ್ಮದೇವಾ ನಮಃ....
[ಬ್ರಹ್ಮದೇವ ಪ್ರತ್ಯಕ್ಷನಾಗಿದ್ದಾನೆ....]
ಬ್ರಹ್ಮದೇವ: ಬದನೆ ! ಆಲೂಗಡ್ಡೆ ! ಬೆಂಡೆ ! ಮಾವು ! ಮೆಕ್ಕೆಜೋಳ ! ಜೊತೆಗೆ ಇಲಿರಾಯ ಕೂಡ ! ನಿವೇಲ್ಲಾ ನನ್ನನ್ನು ಕುರಿತು ತಪಸ್ಸು ಮಾಡಲು ಕಾರಣವೇನು?
ಎಲ್ಲರೂ ಒಟ್ಟಾಗಿ: ದೇವಾ ದೇವ, ನಮ್ಮನ್ನು ರಕ್ಷಿಸು, ನಮ್ಮನ್ನು ರಕ್ಷಿಸು...
ಭೂಲೋಕದಲ್ಲಿ ನಮಗಿನ್ನು ಉಳಿಗಾಲವಿಲ್ಲ. ರೈತರ ಕಲ್ಯಾಣದ ಸೋಗಿನಲ್ಲಿ ನಮ್ಮ ಕುಲವನ್ನೇ ಕುಲಗೆಡಿಸುವ ಹುನ್ನಾರವನ್ನು ಗೋಮುಖ ವ್ಯಾಘ್ರ ಬಹುರಾಷ್ಷ್ರೀಯ ಕಂಪನಿಗಳು ಅವರ ಜೊತೆಗೆ ಶ್ಯಾಮೀಲಾಗಿರುವ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ. ಸೃಷ್ಟಿಕರ್ತ ನೀನೋ ಇಲ್ಲ, ವಿಜ್ಞಾನಿಗಳೆಂದೆನಿಸಿಕೊಂಡ ಈ ಹುಲುಮಾನವರೋ? ದೇವ............
ಬ್ರಹ್ಮದೇವ: ವಿಜ್ಞಾನಿಗಳೂ ಮಾಡಿರುವ ಅಪರಾಧವಾದರೂ ಏನು?
ಬದನೆ: ಚತುರ್ಮುಖ ಬ್ರಹ್ಮದೇವ, ಚರಾಚರ ವಸ್ತುಗಳ ಸೃಷ್ಟಿಕರ್ತನಾದ ನೀನು, ಆಯಾ ಪ್ರದೇಶಗಳ ವಾತಾವರಣ ತಕ್ಕಂತೆ ಮಾನವರನ್ನು ಎತ್ತರಕ್ಕೆ, ಕುಳ್ಳಗೆ, ಬೆಳ್ಳಗೆ, ಕಪ್ಪಗೆ ಸೃಷ್ಟಿಸಿದಂತೆ ನಮ್ಮನ್ನು ಸಹ ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಸೃಷ್ಟಿಸಿದೆ, ನಾವು ಅದರಂತೆ ವೈವಿಧ್ಯತೆಯನ್ನು ಬೆಳೆಸಿಕೊಂಡೆವು. ಜೊತೆಗೆ ಈ ಮಾನವರ ಹಸಿವೆ ತಣಿಸಲು ಹೂವು, ಹಣ್ಣು, ಕಾಯಿ, ಗಡ್ಡೆ ಗೆಣಸು ರೂಪದಲ್ಲಿ ಬೆಳೆದು ಅವನಿಗೆ ಆಹಾರವಾಗುತ್ತಿದ್ದೆವು. ಆದರೆ ಇವರು ನಮ್ಮ ಬುಡಕ್ಕೆ ಬೆಂಕಿ ಹಾಕಲು ಸಿದ್ಧರಾಗಿದ್ದಾರೆ.
ಟೊಮ್ಯಾಟೊ: ದೇವಾ ದೇವ, ಬದನೆ ಹೇಳಿದ್ದು ಸರಿಯಾಗಿದೆ. ಮಳೆ, ಗಾಳೀ, ಬಿಸಿಲಿನ ತಾಪವನ್ನು ಬೇಕಾದರೆ ಸಹಿಸಬಲ್ಲೆವು ಆದರೆ ಈ ಮಾನವರ ಮನಸಿನ ದುರಾಸೆಯ ಬಿಸಿಯನ್ನು ಸಹಿಸಲು ಅಸಾಧ್ಯ ತಂದೆ. ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬದುಕು.’
ಬ್ರಹ್ಮದೇವ: ಈಗ ಒದಗಿ ಬಂದಿರುವ ಆಪತ್ತಾದರೂ ಏನು?
ಬೆಂಡೆ: ದೇವ, ಬೇಸಾಯ ಪುಣ್ಯದ ಕೆಲಸ ಎಂಬ ಭಾವನೆ ಇದ್ದ ಸುಂದರ ದಿನಗಳಿದ್ದವು ನಿನ್ನ ನಂತರ ರೈತನೇ ಎರಡನೇ ದೇವರಂದು ಭಾವಿಸಿ ‘ಅನ್ನದಾತ’ ಎಂದೇ ಕರೆಯುತ್ತಿದ್ದರು. ಆದರೆ ಅತಿಯಾದ ಆಸೆಯಿಂದ ಕೇವಲ ಒಂದು ತಲೆಮಾರಿನವರು ಹಸಿರುಕ್ರಾಂತಿಯ ಹೆಸರಲ್ಲಿ ಕೈಗೊಂಡ ರಾಸಾಯಿನಿಕ ಬೇಸಾಯದಿಂದಾಗಿ ಪ್ರಪಂಚದಲ್ಲರುವ ಚರಾಚರ ಜೀವಿಗಳ ಅಸ್ತಿತ್ವಕ್ಕೆ ದುಃಸ್ಥಿತಿ ಒದಗಿದೆ. ಬೇಕಾದರೆ ಭೂತಾಯಿಯನ್ನೇ ಕೇಳಿನೋಡು.
ಬ್ರಹ್ಮದೇವ: ಭೂದೇವಿ, ಇವರು ಹೇಳುತ್ತಿರುವುದು ನಿಜವೇ?
ಭೂದೇವಿ: ದೇವ, ಮಾನವರು ತಮ್ಮ ಸ್ವಾರ್ಥಕ್ಕಾಗಿ ನನ್ನನ್ನು ನಾನಾ ವಿಧದಲ್ಲಿ ದುರ್ಬಳಕೆ ಮಾಡಿ ಬರಡಾಗಿಸಿದ್ದಾರೆ. ಆಧುನಿಕ ಕೃಷಿಯ ಹೆಸರಲ್ಲಿ ನನಗೆ, ಈ ಬೆಳೆಗಳೆಗೆ ವಿಷವನ್ನೇ ಉಣೆಸುತ್ತಾ ಬಂದಿದ್ದಾರೆ. ನನ್ನೊಳಗೆ ಅಡಗಿ ಜೀವಿಸುತ್ತಿರುವ ಅಪಾರ ಜೀವಿಗಳಿಗೆ ದುರ್ಗತಿ ಒದಗಿದೆ. ನಾನೂ, ವಾಯುದೇವ, ಗಂಗಮ್ಮ ಎಲ್ಲರೂ ಇವರಿಂದಾಗಿ ಮಲಿನವಾಗಿದ್ದೇವೆ.
ಬದನೆ: ಇಷ್ಟು ಸಾಲದು ಎಂದು........ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಪ್ರಾಣೆ ಸಸ್ಯಗಳ ಸಕಲ ಗುಣಕ್ಕೆ ಕಾರಣವಾದ ವಂಶವಾಹಿಗಳನ್ನೇ ಬದಲು ಮಾಡಲು ಮುಂದಾಗಿದ್ದಾರೆ. ಬ್ಯಾಕ್ಟೀರಿಯಾ, ವೈರಸ್, ಹಾವು, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ತೆಗೆದು ನಾನೂ ಸೇರಿದಂತೆ - ಟೊಮ್ಯಾಟೊ, ಆಲೂಗಡ್ಡೆ, ಮೆಕ್ಕೆಜೋಳ ಮುಂತಾದವುಗಳಿಗೆ ವಂಶವಾಹಿಗಳನು ಬಲವಂತದಿಂದ ಸೇರಿಸಿದ್ದಾರೆ. ಇದೇ ನಮ್ಮ ಕುಲವನ್ನು ಕುಲಗೆಡುಸುವ ಕುಲಾಂತರಿ ವಿಜ್ಞಾನ.
ಇಲಿರಾಯ: ದೇವ ನನ್ನ ಮಾತನ್ನು ಸ್ವಲ್ಪ ಆಲಿಸು, ವಿಜ್ಞಾನಿಗಳು ಪ್ರಯೋಗಗಳಿಗೆ ನಾನು ಬಲಿಪಶುವಾಗಿದ್ದೇನೆ. ಅವರ ಪ್ರಯೋಗಗಳನ್ನೆಲ್ಲಾ ನನ್ನ ಮೇಲೆ ಮೊದಲು ಪ್ರಯೋಗಿಸಿ ಪರೀಕ್ಷೆ ಮಾಡುತ್ತಾರೆ. ವಂಶವಾಹಿ ಪರಿವರ್ತಿತ ಆಹಾರ ತಿಂದು ನನ್ನ ಆರೋಗ್ಯವೇ ಹಾಳಾಗಿದೆ. ಕೆಲ ಇಲಿಗಳಂತೂ ಸತ್ತೇ ಹೋಗಿವೆ. ನನ್ನನ್ನು ಈ ದುರುಳರಿಂದ ರಕ್ಷಿಸುದೇವ. ಬಿ.ಟಿ. ಹತ್ತಿಯಾಗಿ ಬದಲಾಗಿರುವ ಹತ್ತಿಯ ದುಸ್ಥಿತಿಯನ್ನು ಆಲಿಸಿದರೆ ಇದರ ಘೋರ ಪರಿಣಾಮ ತಿಳಿಯುತ್ತದೆ.
ಬ್ರಹ್ಮದೇವ: ಹತ್ತಿ ! ನಿನ್ನ ವ್ಯಥೆಯ ಕತೆಯನ್ನು ಮಂಡಿಸುವಂತವನಾಗು.
ಹತ್ತಿ: ಮೊದಲ ಕುಲಾಂತರಿ ತಳಿ ನಾನೇ, ‘ಬಿ.ಟಿ.ಹತ್ತಿ’ ಎಂದು ನಾಮಕರಣ ಮಾಡಿ ರೈತರಿಗೆ ಬೆಳೆಯಲು ಹೇಳಿದರು. ನಮ್ಮ ಸಂಬಧಿಕರಾದ ನಾಟಿ ತಳಿಗಳು ಹಾಳಾಗಿ ಹೋದರು. ಒಮ್ಮೆ ಈ ಕುಲಾಂತರಿ ತಳಿಯನ್ನು ಬೆಳೆಯಲು ಪ್ರಾರಂಭಿಸಿದರೆ ಎಲ್ಲಾ ತರಕಾರಿ, ಹಣ್ಣು, ಆಹಾರಧಾನ್ಯಗಳ ನಾಟಿ ತಳಿಗಳು ನಿರ್ನಾಮವಾಗುತ್ತಾರೆ. ನಮ್ಮ ಸಂಬಧಿಕರಾದ ನಾಟಿ ಬೀಜಗಳಿಗೆ ಮೊಳಕೆಯೊಡೆಯುವ ಸಾಮರ್ಥ್ಯವೇ ಇಲ್ಲದಂತಾಗಿ ಬಂಜೆತನ ಉಂಟಾಗುತ್ತದೆ. ನಿನ್ನ ಸೃಷ್ಟಿಗೆ ಸವಾಲೊಡ್ಡಿರುವ ಈ ಸ್ವಾರ್ಥ ಮನುಜರು ಇನ್ನು ಏನೇನು ದುಷ್ಕೃತ್ಯಗಳನ್ನು ಎಸಗುತ್ತಾರೋ ಅರಿಯದಾಗಿದೆ ತಂದೆ?
ಬ್ರಹ್ಮದೇವ: ನನ್ನ ಸೃಷ್ಟಿ ಕಾಯಕಕ್ಕೇ ಸವಾಲೇ? ಇದಕ್ಕೆ ಪರಿಹಾರ ಹುಡಕಲೇ ಬೇಕು (ಪೋನ್ ತೆಗೆದುಕೊಂಡು ನಾರದನಿಗೆ ಪೋನ್ ಮಾಡುವನು) ಹಲೋ ನಾರದರೇ......
ನಾರದ: ಬ್ರಹ್ಮದೇವನಿಗೆ ನಮಸ್ಕಾರಗಳು
ಬ್ರಹ್ಮದೇವ: ತ್ರಿಲೋಕ ಸಂಚಾರಿಯಾದ ನಾರದ ನೀನು ಎಲ್ಲಿದ್ದರೂ ತಕ್ಷಣ ಇಲ್ಲಿಗೆ ಬರಬೇಕು...
ನಾರದ: ಹಲೋ ಹಲೋ........... ನೆಟ್‌ವರ್ಕ ಸಮಸ್ಯೆಯಿಂದ ಮಾತನಾಡಲು ಆಗುತ್ತಿಲ್ಲ. ಬ್ರಹ್ಮದೇವ ನಾನೇ ನಿಮಗೇ ಪೋನ್ ಮಾಡುತ್ತೇನೆ. ಯಾಕೆಂದರೆ ನನಗೆ ಹೊರ ಹೊಗುವ ಕರೆ ಉಚಿತವಾಗಿದೆ. ನೀವು ಪೋನ್‌ನ್ನು ಕಟ್ ಮಾಡಿ.
ನಾರದ: (ಪೋನ್ ತೆಗೆದುಕೊಂಡು ನಾರದನಿಗೆ ಪೋನ್ ಮಾಡುವನು) ಬ್ರಹ್ಮದೇವನಿಗೆ ನಮಸ್ಕಾರಗಳು
ಬ್ರಹ್ಮದೇವ: ಗಹನವಾದ ವಿಚಾರ ನೆಡೆಯುತ್ತಿದೆ... ನೀನು ಎಲ್ಲಿದ್ದರೂ ತಕ್ಷಣ ನನ್ನ ಸಭಾಂಗಣಕ್ಕೆ ಬರಬೇಕು...
ನಾರದ ತಕ್ಷಣ ಪ್ರತ್ಯಕ್ಷನಾಗುವನು.
ನಾರದ: ಪ್ರಣಾಮಗಳು ತಂದೆ ನನ್ನನ್ನು ತುರ್ತಾಗಿ ಬರಹೇಳಿದ ಕಾರಣ?
ಬ್ರಹ್ಮದೇವ: ಕೆಲ ಸ್ವಾರ್ಥ ಕಂಪನಿಗಳು ಮತ್ತು ವಿಜ್ಞಾನಿಗಳು ನನ್ನ ಸೃಷ್ಟಿಕಾರ್ಯಕ್ಕೆ ಸವಾಲೆಸಗಿದ್ದಾರೆ. ಭೂಮಿಯಲ್ಲಿರುವ ಜೀವವೈವಿಧ್ಯತೆಯನ್ನು ಹಾಳು ಮಾಡಿ, ಬೀಜ ಉತ್ಪಾದನೆಯಲ್ಲಿ ಏಕಸ್ವಾಮ್ಯವನ್ನು ಹೊಂದಲು ಅದೆಂತಹದೋ ‘ಕುಲಾಂತರಿ ತಳಿ’ ಯನ್ನು ಕಂಡುಹಿಡಿದಿದ್ದಾರಂತೆ. ತ್ರಿಲೋಕ ಸಂಚಾರಿಯಾದ ನೀನು ಭೂಲೋಕವನ್ನೆಲ್ಲಾ ಸಂಚರಿಸಿ ಇದರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಇದಕ್ಕೆ ಕಾರಣ ಕರ್ತರಾದವರನ್ನು ವಾರದೊಳಗೆ ನನ್ನ ಮುಂದೆ ಹಾಜರು ಪಡಿಸತಕ್ಕದ್ದು.
ನಾರದ: ಅಯ್ಯೋ, ಮತ್ತೆ ಭೂಲೋಕಕ್ಕೆ ಹೊಗುವುದೇ.. ಅಲ್ಲಿ ನರಹಂತಕ ವೀರಪ್ಪನ್ ಕೈಯಲ್ಲಿ ಸಿಕ್ಕರೆ ಅಪಹರಣ ಮಾಡಿಬೀಡುವನಲ್ಲ... ನನ್ನ ಗತಿ ಅದೋ ಗತಿ...
[ಒಂದು ವಾರದ ನಂತರ ನಾರದ ಬಹುರಾಷ್ಟ್ರೀಯ ಕಂಪನಿಯ ವಿಜ್ಞಾನಿಗಳು, ಪುಕುವೋಕಾ, ಸಾಯಿನಾಥ್ ಅವರೊಂದಿಗೆ ಹಾಜರಾಗಿತ್ತಾನೆ]
ನಾರದ: ತಂದೆ, ಬ್ರಹ್ಮದೇವ. ನೋಡಿಲ್ಲಿ ಮಾನವ ಕುಲಕ್ಕೆ ಕಂಟಕಪ್ರಾಯ ಹಾಗೂ ರಕ್ತಬೀಜಾಸುರರಾದ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೈ ಜೋಡಿಸಿರುವ ವಿಜ್ಞಾನಿಗಳು ಇವರು (ಕೈ ತೋರಿಸುತ್ತ). ಇಗೋ ಇತ್ತನೋಡಿ ಪರಿಸರ ಪ್ರಿಯ, ನಾಡಿನ ಸಾವಯವ ಸಂತ, ಮೊನ್ನೆ ಮೊನ್ನೆ ಭೂಲೋಕ ತ್ಯಜಿಸಿದ ಪುಕುವೋಕಾ ಅಜ್ಜ ಹಾಗು ರೈತರ ಏಳಿಗೆಗಾಗಿ ಕೆಲಸ ಮಾಡಿತ್ತಿರುವ ಕೃಷಿ ಪತ್ರಕರ್ತ ಪಿ.ಸಾಯಿನಾಥ್.
ಬ್ರಹ್ಮದೇವ: ಎಲ್ಲರಿಗೂ ಸ್ವಾಗತ.
ವಿಜ್ಞಾನಿಗಳು: ನಮ್ಮನ್ನು ಕರೆಸಿದ ಉದ್ದೇಶವೇನು ಬ್ರಹ್ಮದೇವ, ಈ ನಾರದನಿಂದಾಗಿ ನಮ್ಮ ಸಂಶೋಧನಾ ಸಮಯವೆಲ್ಲಾ ಹಾಳಾಯಿತು.
ಬ್ರಹ್ಮದೇವ: ಸಾಕು ಸುಮ್ಮನಿರಯ್ಯಾ, ನೀನೇ ಏನು ಸೃಷ್ಟಿಗೆ ಸವಾಲೊಡ್ಡುತ್ತಿರುವವರು. ನನ್ನ ಜೋತೆ ಸ್ಪರ್ಧೆ ಮಾಡುತ್ತೀಯ.
ವಿಜ್ಞಾನಿ: ಬ್ರಹ್ಮದೇವ, ನೀನಿನ್ನು ಸೃಷ್ಟಿ ಕೆಲಸಕ್ಕೆ ರಾಜೀನಾಮೆ ನೀಡಿಬಿಡು. ಆ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ.
ಬ್ರಹ್ಮದೇವ: ನಾನು ಸೃಷ್ಟಿಸಿದ ಮಕ್ಕಳಿಂದಲೇ ನನಗೆ ಸವಾಲೇ. ಗುರುವಿಗೆ ತಿರುಮಂತ್ರ... ನಿಮ್ಮ ಪ್ರಕಾರ ನನ್ನ ಸೃಷ್ಟಿ ಕಾರ್ಯವನ್ನು ನಿಲ್ಲಿಸಿಬಿಡುತ್ತೇನೆ, ಆದರೆ ನಾನು ಹೇಳಿದ್ದನ್ನು ನೀವು ಸೃಷ್ಟಿಸಿಕೊಟ್ಟರೆ ಮಾತ್ರ.
ವಿಜ್ಞಾನಿ: ಏನು ಹೇಳು ದೇವ, ಈ ಕ್ಷಣದಲ್ಲಯೇ ಮಾಡಿ ಮುಗಿಸುತ್ತೇನೆ.
ಬ್ರಹ್ಮದೇವ: ಸಕಲ ಚರಾಚರ ಜೀವಿಗಳಿಗೆಲ್ಲಾ ಆಧಾರವಾಗಿರುವ ನೀರು, ಮಣ್ಣು, ಗಾಳಿಯನ್ನು ನೀವು ಕೃತಕವಾಗಿ ಈಗಲೇ ಇಲ್ಲೇ ಸೃಷ್ಟಿಸಬೇಕು.
ವಿಜ್ಞಾನಿಗಳು: [ಪರಸ್ಪರ ಮುಖ ನೋಡಿಕೊಳ್ಳವರು, ತಲೆ ಕೆರೆದುಕೊಳ್ಳವರು] ಇದು ಸಾಧ್ಯವಾಗದ ಕೆಲಸ ದೇವ.
ಬ್ರಹ್ಮದೇವ: ನನಗೆ ಸವಾಲು ಹಾಕಿ ಇನ್ನೇನನ್ನು ನೀವು ಸೃಷ್ಟಿಸಲು ಹೊಟಿರುವಿರಿ?
ಪುಕುವೋಕಾ: ದೇವಾ ದೇವ, ಈ ವಿಜ್ಞಾನಿಗಳು ಬೇಸಿಗೆಯಲ್ಲಿ ತಮ್ಮ ಮನೆಯ ಹಂಚುಗಳನ್ನು ಒಡೆದು ಹಾಕಿ, ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿದಾಗ ಎದ್ದೆನೋ ಬದ್ದೆನೋ ಎನ್ನುತ್ತಾ ಹಂಚುಗಳನ್ನು ಸರಿಪಡಿಸಿ ಮನೆ ಸೋರುವುದು ನಿಂತಾಗ ದೊಡ್ಡ ಸಾಧನೆ ಮಾಡಿದೆನೆಂದು ಬೆನ್ನು ತಟ್ಟಿಕೊಂಡಂತೆ ಮೂರ್ಖತನದ ಸಾಧನೆ ಇವರದು. ಬೇರೆ ಅರ್ಥದಲ್ಲಿ ಹೇಳಬೇಕಾದರೆ ‘ಗುಡ್ಡಕ್ಕೆ ಕಲ್ಲು ಹೋರುವ ಕೆಲಸ ಮಾಡುತ್ತಿದ್ದಾರೆ’.
ಬ್ರಹ್ಮದೇವ: ಭಲೆ ಭಲೇ ಪುಕುವೋಕಾ ! ನೀವು ನಿಜವನ್ನು ಹೇಳಿದಿರಿ, ಎಲೈ ವಿಜ್ಞಾನಿಗಳೇ ನಾವೇ ಸೃಷ್ಟಿಸಿದ ಮಳೆ, ಗಾಳಿ, ಮಣ್ಣನ್ನು ಉಪಯೋಗಿಸಿಕೊಂಡು ಮಹಾನ್ ಸಾಧನೆ ಮಾಡಿದೆನೆಂದು ಬೀಗುತ್ತಿರಾ, ಧಿಕ್ಕಾರವಿರಲಿ ನಿಮ್ಮ ಜನ್ಮಕ್ಕೆ. ಸೃಷ್ಟಿಗೆ ಸಂಚುಕಾರ ತರುವ ಕೆಲಸ ಮಾಡಿತ್ತಿದ್ದಿರಾ.
ಸಾಯಿನಾಥ್: ದೇವ, ಇನ್ನು ಮುಂದೆ ಮಾನವರು ಮದುವೆ ಆಗುವಂತೆಯೇ ಇಲ್ಲಾ...!
ಬ್ರಹ್ಮದೇವ: [ಆಶ್ಚರ್ಯ ಚಕಿತನಾಗಿ] ಏಕೆ ಸಾಯಿನಾಥರೇ, ಕಾರಣವೇನು?
ಸಾಯಿನಾಥ್: ಕುಲಾಂತರಿ ತಳಿಗಳ ಆಹಾರವನ್ನು ಸೇವಿಸಿದರೆ ಮಾನವರಿಗೆ ಮಕ್ಕಳೇ ಆಗುವುದಿಲ್ಲ. ಬಂಜೆತನ ಅಥವಾ ಗಂಡಸುತನ ಬರುತ್ತದೆ ಎಂದು ಸಂಶೋಧಾನ ವರದಿ ಹೇಳುತ್ತದೆ. (ವರದಿಯನ್ನು ಸಲ್ಲುಸುತ್ತಾನೆ)
ಬ್ರಹ್ಮದೇವ: (ವರದಿಯನ್ನು ನೋಡುತ್ತ) ನನ್ನ ಸೃಷ್ಟಿಗೆ ಅಂತ್ಯವೆ? ಇದನ್ನು ನಾನು ಆಗಗೊಡುವುದಿಲ್ಲ.
ಸಾಯಿನಾಥ್: ದೇವ, ಇದು ಇಷ್ಟಕ್ಕೆ ನಿಂತಿಲ್ಲ, ಈ ಕುಲಾಂತರಿ ತಂತ್ರಜ್ಞಾನದಿಂದಾಗಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ ಪ್ರತಿ ೩೦ ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ಬಿ.ಟಿ.ಹತ್ತಿಯನ್ನು ತಿಂದ ಸಾವಿರಕ್ಕೂ ಹೆಚ್ಚು ಮೇಕೆಗಳು ಸತ್ತು ಹೋಗಿವೆ. ಬೇಕಾದರೆ ಯಮ ಧರ್ಮರಾಯನಿಗೆ ಪೋನ್ ಮಾಡಿ ವಿಚಾರಿಸಿ.
ಬ್ರಹ್ಮದೇವ: (ಪೋನ್ ತೆಗೆದುಕೊಂಡು ಯಮನಿಗೆ ಪೋನ್ ಮಾಡುವನು) ಹಲೋ! ಹಲೋ! ಯಮಧರ್ಮರಾಯ, ನಾನು ಬ್ರಹ್ಮದೇವ, ಇತ್ತೀಚೆಗೆ ರೈತರ ಆತ್ಮಹತ್ಯೆ ಹೆಚ್ಚಾಗಿದೆಯ?
ಯಮ: ದೇವ ಒಂದು ನಿಮಷ ಅವಧಿ ಕೊಡಿ, ಈಗಿರುವ ಫೈಲ್‌ಗೆ ವೈರಸ್ ತಗುಲಿದೆ, ಚಿತ್ರಗುಪ್ತ ಬೇರೆ ಹನಿಮೂನ್‌ಗೆ ಹೋಗಿದ್ದಾನೆ. (ಫೈಲ್‌ನ್ನು ನೋಡುತ್ತ) ಏನು ಹೇಳಲಿ ತಂದೆ, ಈ ರೈತರಲ್ಲಿ ಮುಕ್ಕಾಲು ಪಾಲು ಆಯಸ್ಸು ಮುಗಿಯುವ ಮುನ್ನವೇ ಆತ್ಮಹತ್ಯೆ ಮಾಡಿಕೊಂಡು ನಮ್ಮ ಲೋಕ ಸೇರುತ್ತಿದ್ದಾರೆ.
ಬ್ರಹ್ಮದೇವ: ನಿನ್ನ ಮಾಹಿತಿಗೆ ಧನ್ಯವಾದಗಳು ಯಮಧರ್ಮರಾಯ.
ಬ್ರಹ್ಮದೇವ: [ಕೋಪದಿಂದ ಕೆಂಡಾಮಂಡಲವಾಗಿದ್ದಾನೆ] ಭೂಮಿ, ವಾಯು, ಗಂಗೆ, ಇನ್ನು ಮುಂದೆ ಈ ಸ್ವಾರ್ಥ ವಿಜ್ಞಾನಿಗಳ ಕೆಟ್ಟ ಸಾಧನೆಗಳಿಗೆ ಸಹಕರಿಸದಿರಿ. ನಾರದರೇ ಈ ನಿಜ್ಞಾನಿಗಳು ಹೇಗೆ ಇಲಿರಾಯನನ್ನು ಪ್ರಯೋಗ ಪಶುವಾಗಿ ಮಾಡಿದ್ದರೋ, ಹಾಗೆಯೇ ಇವರು ಪ್ರಯೋಗಗಳಿಗೆ ಬಲಿಪಶುವಾಗಬೇಕು. ಇವರು ಸೃಷ್ಟಿಸಿದ ಕುಲಾಂತರಿ ಆಹಾರಗಳನ್ನು ಇವರೇ ತಿಂದು ಅಂತ್ಯ ಕಾಣಬೇಕು. ಕರೆದುಕೊಂಡು ಹೋಗಿ ಸೆರೆಮನೆಯಲ್ಲಿ ದೂಡಿ. ಇದೇ ಇವರಿಗೆ ನಾನು ನೀಡಿರುವ ಶಿಕ್ಷೆ. ಜಂಕ್ ಪುಡ್ ಮತ್ತು ಕುಲಾಂತರಿ ಆಹಾರ ಮಾತ್ರ ಕೊಡಿ ಜೋತೆ ಕುಡಿವುದಕ್ಕೆ ಕೋಕಾ ಕೋಲಾ ಕೊಡಿ.
ಬದನೆ: ದೇವ ನನ್ನನ್ನು ಬಿ.ಟಿ.ಬದನೆ ಎಂದು ಮರುನಾಮಕರಣ ಮಾಡಿ ಬರುವ ಏಪ್ರಿಲ್ ತಿಂಗಳಿನಲ್ಲಿ ಬಿಡುಗಡೆ ಮಾಡುವ ಹುನ್ನಾರದಲ್ಲಿದ್ದಾರೆ. ನನ್ನನ್ನು ರಕ್ಷಿಸು ದೇವ.
ಬ್ರಹ್ಮದೇವ: ಒಂದು ಕೆಲಸ ಮಾಡು ಬದನೆಣ್ಣ, ಭೂಲೋಕದಲ್ಲಿ ಗ್ರೀನ್‌ಪೀಸ್, ನವಧಾನ್ಯ, ಸಂವಾದ, ಸಹಜ, ಎಡ್ ಇಂಡಿಯಾ, ಥನಲ್, ಸಿ.ಎಸ್.ಎ ಇತ್ಯಾದಿ ಸಂಸ್ಥೆಗಳು ನಿನ್ನ ಬಗ್ಗೆ ಹೋರಾಟ ಮಾಡುತ್ತಿದ್ದಾರೆ, ನೀನು ಸಹ ಅವರ ಹತ್ತೀರ ಹೋಗಿ ಅವರಿಗೆ ಸಹಾಯ ಮಾಡು.
ಬದನೆ: ತುಂಬಾ ಧನ್ಯವಾದಗಳು, ದೇವಾ
ಬ್ರಹ್ಮದೇವ: ಬದನೆ ಹಾಗೂ ಎಲ್ಲಾ ತರಕಾರಿಗಳೇ, ಹಣ್ಣು ಮತ್ತು ಆಹಾರ ಧಾನ್ಯಗಳೇ ಗಮನವಿಟ್ಟು ಆಲಿಸಿ, ಮಾನವರಲ್ಲಿ ಸ್ವಾರ್ಥಿಗಳು ಇರುವಂತೆ, ನಿಸ್ವಾರ್ಥವನ್ನು ಬಯಸುವ ಪುಕುವೋಕಾ ಮತ್ತು ಸಾಯಿನಾಥ್ ರಂತವರು ನೂರಾರು ಮಂದಿ ಒಳ್ಳೆಯವರಿದ್ದಾರೆ. ಅವರೆಲ್ಲಾ ಈ ರೀತಿಯ ಕೆಟ್ಟತನಗಳನ್ನು ನಿಯಂತ್ರಸಲು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಅವರಿಗೆ ನಮ್ಮ ಆಶೀರ್ವಾದವಿದೆ. ‘ಕುಲಾಂತರಿ ತಳಿ ವಿಜ್ಞಾನದ’ ವಿರುದ್ಧ ಹೋರಾಡುತ್ತಿರುವ ಸಂಘ-ಸಂಸ್ಥೆಗಳೇ, ರೈತರೇ, ವಿದ್ಯಾರ್ಥಿಗಳೇ ಭೂಲೋಕದ ಜನರೆ ‘ಬಿ.ಟಿ. ಬೇಡ - ನಾಟಿ ಬೇಕು’ ಎಂದು ಕೂಗಿ ಹೇಳಿ. ಜನರಿಗೆ ವಿಷ ಕೊಟ್ಟರಾದರೂ ಲಾಭ ಗಳಿಸುವುದೇ ಬಹು ರಾಷ್ಟ್ರೀಯ ಕಂಪನಿಗಳ ಜಾಯಮಾನಕ್ಕೆ ಧಿಕ್ಕರಿಸಿ. ಬಿಟಿ ಬದನೆ ಬೆಳೆಯುವ ಪ್ರಯೋಗದ ಮೂಲಕ ಜನರಿಗೆ ಕಂಪನಿ ಕಪಿಗಳು ಭೂಮಿಗೆ ದುಸ್ವಪ್ನವಾಗಿದ್ದಾರೆ. ಅವರನ್ನು ಸಂಹಾರ ಮಾಡಲು ಬಿನ್ ಲಾಡೆನ್ ಮತ್ತು ಎಲ್.ಟಿ.ಟಿಯ ಪ್ರಭಾಕರನನ್ನು ಸೃಷ್ಟಿಸುತ್ತೇನೆ. ಬಿ.ಟಿ.ಯ ಕೆಟ್ಟಪರಿಣಾಮದ ಅರಿವನ್ನು ಮೂಡಿಸಿ ಶಾಲಾ ಹಂತದಿಂದಲೇ ಮಕ್ಕಳಿಗೆ ಪರಿಸರದ ಪಾಠವನ್ನೂ ಭೋಧಿಸಿ ಅತಿಯಾದ ಆಸೆ ಪಡದೆ ಸರಳ ಜೀವನ ನಡೆಸಿ ಇತರ ಜೀವಿಗಳನ್ನು ಬದುಕಲು ಬಿಡಿ, ನಿಮಗೆಲ್ಲರಿಗೂ ಮಂಗಳವಾಗಲಿ, ‘ಸರ್ವೇ ಜನಃ ಸುಖಿನೋ ಭವಂತು’
“ಅಸತೋಮಾ ಸದ್ಗಮಯ,
ತಮಸೋಮಾ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ, ಶಾಂತಿಃ, ಶಾಂತಿಃ, ಶಾಂತಿಃ.”
[ತೆರೆ ಬೀಳುವುದು]
No comments:
Post a Comment