Search This Blog

Thursday, December 15, 2011

ಮಣ್ಣು ನಮ್ಮಲ್ಲೆರ ಕಣ್ಣು


ಬೆಳೆಗಳ ಬೆಳವಣಿಗೆ ಮಣ್ಣಿನ ಸ್ವಭಾವದ ಮೇಲೆ ಅವಲಂಬಿತವಾಗಿದೆ. ಒಟ್ಟಾರೆ ಜೀವಿಯ ಅಳಿವು-ಉಳಿವು ಅರ್ಧ ಅಡಿ ಮಣ್ಣಿನ ಮೇಲೆ ನಿಂತಿದೆ. ಮಣ್ಣು ನಿಸರ್ಗದ ಜೀವಂತ ಸಂಪತ್ತು. ಎಲ್ಲರಿಗೂ ಚಿರಪರಿಚಿತವಾಗಿರುವ ವಸ್ತು. ಭೂಮಿಯ ಮೇಲ್ಭಾಗದಲ್ಲಿ ಜೀವಂತ ವಸ್ತುಗಳರುವ ಹಾಗು ಸಸ್ಯಗಳನ್ನು ಸಂರಕ್ಷಿಸುತ್ತಿರುವ ಸ್ವಾಭಾವಿಕ ವಸ್ತುಗಳ ಸಂಗ್ರಹವೇ ಮಣ್ಣು. ನಾನಾಬಗೆಯ ಜೀವಿಗಳು ವಾಸಮಾಡುವ ಅವಾಸ ಜಾಗ ಈ ಮಣ್ಣು. ಇದರ ಮೇಲಿನ ಹಾಗು ಎಲ್ಲೆಗಳನ್ನು ಸ್ಪಷ್ಟವಾಗಿ ಕಾಣಬಹುದು. ಆದರೆ ಮಣ್ಣಿನ ಕೆಳಗಿನ ಮಿತಿಯನ್ನು ಗುರುತಿಸುವುದು ಕಷ್ಟ.
ಮಣ್ಣು ಹುಟ್ಟು (Soil Genesis)
ಭೂಮಿಯ ಮೇಲಿನ ಹೊರಪದರದಲ್ಲಿರುವ ಹವಾಮಾನ ಕ್ರಿಯೆಗೊಳಗಾದ ಶಿಥಿಲ ಪದರ. ಪ್ರಾರಂಭದಲ್ಲಿ ಕಲ್ಲು-ಬಂಡೆಗಳು ಭೌತಿಕ ಹಾಗು ರಾಸಾಯನಿಕ ಚಟುವಟಿಕೆಗಳಿಂದಾಗಿ ವಿಘಟನೆಯಾಗಿ ಶಿಥಿಲಗೊಂಡು ಅನಂತರ ಅನೇಕ ಜೀವರಾಶಿಗಳ ಸಾವಿರಾರು ವರ್ಷಗಳ ಚಟುವಟಿಕೆ ಮತ್ತು ಅವುಗಳ ಉಳಿಕೆಗಳ ಸಂಗ್ರಹದಿಂದಾಗಿ ಮಣ್ಣು ರೂಪಾಂತರಗೊಳ್ಳುತ್ತದೆ.
  • ವಿವಿದ ಬಗೆಯ ಸಸ್ಯಗಳ ಅವಶೇಷಗಳು (ಎಲೆ, ಹೂ, ಕಡ್ಡಿ, ಬೇರು, ಬೀಜ, ಕಾಯಿ…) ಶಿಲೆಗಳ ಮೇಲೆ ಒಟ್ಟು ಸೇರುತ್ತವೆ.
  • ಸಸ್ಯಗಳ ಅವಶೇಷಗಳು ದ್ರಾವಣದೊಂದಿಗೆ ಪ್ರತಿಕ್ರಿಯಿಸಿ ಕೊಳೆಯುವುದಕ್ಕೆ ಪ್ರಾರಂಭಿಸುತ್ತವೆ. ಈ ಕೊಳೆಯುವುಕೆಯಿಂದ ಸೂಕ್ಷ್ಮ ಜೀವಿಗಳ ಉಸಿರಾಡುವಿಕೆಯಿಂದ ಭೂವಿಯಲ್ಲಿ ಇಂಗಾಲ ಅನಿಲ ಹೊರಬೀಳುತ್ತದೆ.
  • ಹೊರಬಿದ್ದ ಇಂಗಾಲವು ಮಳೆ ನೀರಿನಲ್ಲಿ ಕರಗಿ ದುರ್ಬಲ ಇಂಗಾಲಾಮ್ಲವುಂಟಾಗುತ್ತದೆ.
  • ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಪೊಟ್ಯಾಸಿಯಂ ಮುತಾಂದ ಪ್ರತ್ಯಾಮ್ಲಗಳು ಮಣ್ಣಿನಿಂದ ತೊಳೆದುಹೋಗುತ್ತವೆ. ಇದರಿಂದ ಮಣ್ಣಿನ ಆಮ್ಲತೆಯು ಹೆಚ್ಚುತ್ತದೆ.
  • ಮಣ್ಣಿನಲ್ಲಿ ಜೇಡಿಯ ಕಣಗಳು ಉತ್ಪತ್ತಿಯಾಗುತ್ತವೆ. ಕೃಷಿಗೆ ಯೋಗ್ಯವಾದ ಮಣ್ಣು ಸಿದ್ಧವಾಗುತ್ತೆ.
ಮಣ್ಣಿನಲ್ಲಿರುವ ಸ್ಥಿತಿಗಳು
ಸಾಮಾನ್ಯವಾಗಿ ಯಾವುದೇ ಮಣ್ಣಿನಲ್ಲಿ ಮೂರು ರೀತಿಯ ಸ್ಥಿತಿಗಳು ಇರುತ್ತವೆ. ಘನ ವಸ್ತುಗಳಿರುವ ಘನಸ್ಥಿತಿ. ದ್ರಾವಣ ವಸ್ತುಗಳಿರುವ ದ್ರವಸ್ಥಿತಿ. ಹಾಗು ಕೊನೆಯದಾಗಿ ವಾಯು ವಸ್ತುಗಳಿರುವ ಅನಿಲಸ್ಥಿತಿ. ಮಣ್ಣಿನ ಘನವಸ್ತುಗಳನ್ನು ಮತ್ತೆ ಎರಡು ವಿಭಾಗ ಮಾಡಬಹುದು. ಅವುಗಳಲ್ಲಿ ಒಂದನೆಯದು ನಿರವಯವ ಹಾಗು ಎರಡನೆಯದು ಸಾವಯವ ಘನ ವಸ್ತುಗಳು. ಮಣ್ಣಿನ ದ್ರವ ವಸ್ತುಗಳನ್ನು ನೀರು ಮತ್ತು ಲವಣಗಳನ್ನಾಗಿ ವಿಂಗಡಿಸಬಹುದು. ಉದಾಹರಣೆಗೆ, ಕ್ಯಾಲ್ಸಿಯಂ, ಮೆಗ್ನೀಷಿಯಂ, ನೈಟ್ರೇಟ್, ಸಲ್ಫೇಟ್ ಮತ್ತು ಸೋಡಿಯಂ. ಇನ್ನು ಮೂರನೆ ಸ್ಥಿತಿಯೇ ಅನಿಲ ಸ್ಥಿತಿ. ಅವುಗಳಲ್ಲಿ ಮುಖ್ಯವಾಗಿ ಆಮ್ಲಜನಕ, ಸಾರಜನಕ ಮತ್ತು ಇಂಗಾಲ.
ಮಣ್ಣಿನ ಪಾರ್ಶ್ವದೃಶ್ಯ (Soil profile)
ಮಣ್ಣಿನ ಸಾಮಾಗ್ರಿಗಳು ಮಣ್ಣಿನಲ್ಲಿ ಪದರಗಳಾಗಿ ಜೋಡಣೆಗೊಂಡಿಲ್ಲ. ಅವು ಮಣ್ಣಿನ ಮೂಲ ಸಾಮಗ್ರಿಗಳು ಪರಿವರ್ತನೆ ಹೊಂದಿರುವುದರಿಂದ ಸ್ಪಷ್ಟ ಪದರ ಅಥವಾ ಸ್ತರಗಳಾಗಿ ಭೂಮಿಗೆ ಸಮಾನಾಂತರವಾಗಿ ಉಂಟಾದವು. ಈ ಪದರಗಳಿಗೆ ಮಣ್ಣಿನ ವಲಯ(ಹೊರೈಜನ್)ಗಳೆಂದು ಹೆಸರು. ಮಣ್ಣುಗಳು ಬೇರೆ ಬೇರೆ ಇದ್ದರೂ ಸಹ ಒಂದೇ ರೀತಿಯ ಪದರುಗಳನ್ನು ಕಾಣಬಹುದು. ಭೂಮಿಯ ಮೇಲಿನ ಭಾಗವನ್ನು 0ವಲಯವೆಂದು ಕರೆಯುದುಂಟು. ಇದು ಕಸಕಡ್ಡಿಗಳಿಂದ ಕೂಡಿರುವ ವಲಯ. ಇದರಲ್ಲಿ ನಿರಂತರವಾಗಿ ಕೃಷಿ ಮಾಡಬಹುದು. ನಂತರ ಭಾಗವನ್ನು A’ ವಲಯವೆಂದು ಕರೆಯುದುಂಟು. ಇದು ನಷ್ಟದ ವಲಯ. ಈ ಪದರದಿಂದ ಜೇಡಿ ಮತ್ತು ಪೋಷಕಾಂಶಗಳು ಸೋಸಿ ಕೆಳಗಿನ ಪದರವನ್ನು ಸೇರುತ್ತದೆ. ನಂತರದ ಭಾಗವನ್ನು B’ ವಲಯವೆಂದು ಕರೆಯುದುಂಟು. ಇದು ಸಂಗ್ರಹದ ವಲಯ. ಈ ವಲಯದಲ್ಲಿ ಮೇಲಿನ ಪದರದಿಂದ ಸೋಸಿ ಬಂದ ಎಲ್ಲಾ ಪೋಷಕಾಂಶಗಳು ಸಂಗ್ರಹವಾಗುತ್ತೆವೆ. ನಂತರದ ಭಾಗವನ್ನು ‘C’ವಲಯವೆಂದು ಕರೆಯುದುಂಟು. ಇದು ಮೂಲ ಸಾಮಾಗ್ರಿಗಳು ಹುದುಗಿರುವ ವಲಯ. ನಂತರದ ವಲಯದಲ್ಲಿ ಬಂಡೆಗಳನ್ನು ಕಾಣಬಹುದು.
ಮಣ್ಣಿನಲ್ಲಿರುವ ಬಗೆಗಳು
ಗಟ್ಟಿ ಕಲ್ಲುಬಂಡೆಯು ಹವಾಮಾನಕ್ರಿಯೆಗೊಳಗಾದಾಗ ಮಣ್ಣು ಸಾಕಷ್ಟು ಪ್ರಮಾಣದಲ್ಲಿ ಶೇಖರವಾಗುತ್ತದೆ. ಆಗ ಅದು ಸಸ್ಯಗಳ ಬೆಳವಣಿಗೆಗೆ ಬೇಕಾದ ಮಾಧ್ಯಮವಾಗಿರುತ್ತದೆ. ಈ ರೀತಿಯ ಮಣ್ಣಿನ ಸಂಗ್ರಹವು ಶಿಲೆಗಳು ಶಿಥಲಗೊಂಡಾಗ ಉಂಟಾಗಬಹುದು. ಗಾಳಿಯಿಂದ ಉಂಟಾಗಿರಬಹುದು, ಅದನ್ನು ಬಂಕೆ ಮಣ್ಣು ಎಂದು ಕರೆಯುದುಂಟು. ನೀರಿನಿಂದ ಸಾಗಿತವಾಗಿರಬಹುದು, ಇದಕ್ಕೆ ಮೆಕ್ಕಲುಮಣ್ಣು ಎಂದು ಕರೆಯುದುಂಟು. ಮಂಜಿನಿಂದ ಉಂಟಾಗಿರಬಹುದು, ಇದಕ್ಕೆ ನೀರ್ಗಲ್ಲು ಮಣ್ಣು ಎಂದು ಕರೆಯುದುಂಟು.
ಮರಳು ದಿಬ್ಬಗಳು (Sand dunes)
ಗಾಳಿಯಿಂದ ಸಾಗಣೆಗೊಂಡ ಒಂಡು ಹಾಗು ಜೇಡಿಯು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡು ಬಂಕೆಮಣ್ಣಿನ ಶೇಖರವೆನಿಸಿಕೊಳ್ಳುತ್ತದೆ. ಒಂದೇ ಒಂದು ಮೂಲದಿಂದ ಸಾಗಣೆಗೊಂಡ ಮಣ್ಣು ನೂರಾರು ಮೈಲಿ ಪ್ರದೇಶದ ಮೇಲೆ ಹೊದಿಕೆಯಂತೆ ಹರಡಿರಬಹುದು. ಹೀಗೆ ಶೇಖರವಾದ ಬಂಕೆ ಮಣ್ಣು ಕೆಲವಡೆಗಳಲ್ಲಿ ನೂರು ಅಡಿಗಳಿಗಿಂತಲೂ ಆಳವಿರಬಹುದು. ಮೂಲಕ್ಕೆ ಸಮೀಪವಿರುವ ಸ್ಥಳಗಳಲ್ಲಿ ಬಂಕೆ ಮಣ್ಣಿನ ಆಳವು ಹೆಚ್ಚಾಗಿರುತ್ತದೆ. ಕಣಗಳೂ ಸಹ ದಪ್ಪವಾಗಿರುತ್ತದೆ. ಮೂಲದಿಂದ ದೂರಕ್ಕೆ ಹೋದಂತೆಲ್ಲಾ ಈ ಮಣ್ಣುಗಳ ಆಳ ಕಡಿಮೆಯಾಗುತ್ತಾಹೋಗಿ ಕಡೆಯಲ್ಲಿ ಇವುಗಳನ್ನು ಗುರುತಿಸುವುದೇ ಕಷ್ಟವಾಗಬಹುದು.
ಸಸ್ಯಗಳು ಕಡಿಮೆ ಇರುವ ಪ್ರದೇಶಗಳಿಂದ ಗಾಳಿಯು ಮಣ್ಣು ಅಥವಾ ಮರಳಿನ ಕಣಗಳನ್ನು ಎತ್ತಿಕೊಂಡು ಹೋಗುತ್ತದೆ. ಮಣ್ಣು ಅಥವಾ ಮರಳಿನ ಮೂಲವು ಮರುಭೂಮಿ, ಸಮುದ್ರತೀರ, ನದೀಬಯಲು ಮತ್ತು ನೀರ್ಗಲ್ಲುಗಳಿಂದ ಬಂದು ಶೇಖರವಾದ ಮಣ್ಣುಗಳಿರಬಹುದು. ಈ ಮರಳು ದಿಬ್ಬಗಳಲ್ಲಿ ಸಾಧಾರಣವಾಗಿ ನೀರು ಮತ್ತು ಪೋಷಕಾಂಶಗಳು ಬಹಳ ಅಲ್ಪ ಪ್ರಮಾಣದಲ್ಲಿರುವುದರಿಂದ ಸಸ್ಯಗಳು ಬಹಳ ಕಡಿಮೆ.
ನೀರ್ಗಲ್ಲು ಮಣ್ಣು
ನೀರ್ಗಲ್ಲು ಯುಗದಲ್ಲಿ ಭೂಮಿಯ ಬಹುಭಾಗವು ಮಂಜುವಿನಿಂದ ಕೂಡಿತ್ತು. ಬೇರೆ ಬೇರೆ ಕಾರಣಗಳಿಂದ ನೀರ್ಗಲ್ಲುಗಳು ಚಲಿಸುವಾಗ ದಾರಿಯಲ್ಲಿ ಸಿಗುವ ಮಣ್ಣು ಹಾಗು ಉಳಿದ ವಸ್ತುಗಳನ್ನು ಸೇರಿಸಿಕೊಂಡು ಮುಂದೆ ಸಾಗುತ್ತವೆ. ಈ ರೀತಿಯಲ್ಲಿ ಮಣ್ಣಿನಿಂದ ಬೇರ್ಪಡಿಸಲಾದ ವಸ್ತುಗಳ ಪ್ರಮಾಣ ಹೆಚ್ಚಿದಾಗ ಮಣ್ಣಿನ ಆಳ ಕಡಿಮೆಯಾಗುತ್ತದೆ. ನೀರ್ಗಲ್ಲುಗಳು ಸಂಚಯ ಹಾಗು ತೇಮಾನಗಳೆಂದು ಎರಡು ಪ್ರದೇಶಗಳಿರುತ್ತವೆ. ಮಂಜು ಬೀಳುವಿಕೆಯ ಪ್ರಮಾಣವು ಅದು ಕರಗುವಿಕೆಯ ಪ್ರಮಾಣಕ್ಕಿಂತಲೂ ಹೆಚ್ಚಾಗಿದ್ದರೆ ಸಂಚಯವು ಮುಂದುವರಿಯುತ್ತದೆ. ಸಂಗ್ರಹಣೆ ಮುಂದುವರಿದಂತೆ ಅದರ ಗಾತ್ರವು ಸಹ ಹೆಚ್ಚುತ್ತದೆ. ಸಂಗ್ರಹಿಸಿದ ಕಲ್ಲುಗಳ ರಾಶಿಯನ್ನು ಅಲ್ಲಿಯೇ ಶೇಖರವಾಗುವಂತೆ ಮಾಡುತ್ತದೆ.
ಮೆಕ್ಕಲು ಮಣ್ಣು
ತೊರೆ, ಹಳ್ಳ, ನದಿ ಮುಂತಾದ ಜಾಗದಲ್ಲಿ ಹರಿಯುವ ನೀರಿನಿಂದ ಶೇಖರವಾದ ಮಣ್ಣು. ಜಲ ಪ್ರವಾಹವುಂಟಾದಾಗ ಮಣ್ಣು ಕೊಚ್ಚಿಕೊಂಡು ಹೋಗುತ್ತದೆ. ನದೀ ಬಯಲುಗಳು ನೀರಿನಿಂದ ಮುಚ್ಚಿಹೊಗುತ್ತೆ. ಈ ಪ್ರವಾಹ ನೀರು ನಿಧಾನವಾಗಿ ಹಿಂದಕ್ಕೆ ಚಲಿಸುವುದರಿಂದ ಕೊಚ್ಚಿಕೊಂಡ ಬಂದ ಸೂಕ್ಷ್ಮವಾದ ಮಣ್ಣಿನ ಕಣಗಳು ಬಯಲು ನೆಲದ ಮೇಲೆ ಶೇಖರವಾಗುತ್ತೆ. ಪದರ ಮೇಲೆ ಪದರ ಮಣ್ಣು ಬಂದು ಶೇಖರವಾಗುತ್ತೆ. ಇಂತಹ ಮಣ್ಣುಗಳನ್ನು ಮೆಕ್ಕಲು ಮಣ್ಣು ಎಂದು ಹೇಳಲಾಗಿದೆ. ಇವುಗಳನ್ನು ಗಂಗಾ ನದಿ ಮುಖಜ ಬಯಲುಗಳಲ್ಲಿ ಕಾಣಬುಹುದು.

No comments:

Post a Comment