Search This Blog

Thursday, December 22, 2011

ಬಿತ್ತಿದಂತೆ ಬೆಳೆ, ಬೀಜದಂತೆ ಫಲ


‘ಬಿತ್ತಿದಂತೆ ಬೆಳೆ- ನೂಲಿನಂತೆ ಸೀರೆ’ ಎಂಬ ನಾಣ್ಣುಡಿ ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಅದೇ ಮಾತನ್ನು ಬೀಜದಂತೆ ಬೆಳೆ ಎಂದೂ ಹೇಳಬಹುದು. ಉತ್ತಮ ದರ್ಜೆಯ ಬೀಜ ಮತ್ತು ಬಿತ್ತನೆ ಸಾಮಗ್ರಿಯನ್ನು ಬಳಸುವುದರಿಂದ ಉತ್ತಮ ಪ್ರತಿಫಲ ಸಾಧ್ಯವಾಗುತ್ತದೆ. ಪ್ರಕೃತಿಯಲ್ಲಿನ ಎಲ್ಲಾ ಜೀವಜಂತುಗಳೂ ತಮ್ಮ ಪೀಳಿಗೆಯನ್ನು ಮುಂದುವರಿಸಲು ಬೀಜದ ಸದೃಢತೆಗೆ ಇನ್ನಿಲ್ಲದ ಪ್ರಯತ್ನ ನಡೆಸುತ್ತಲೇ ಇರುತ್ತವೆ. ತಲೆಮಾರಿನ ಮುಂದುವರಿಕೆಗೆ ಬೀಜವೇ ಮೂಲ.
ಹಾಗೇ ಕೃಷಿಯಲ್ಲಿ ಕೂಡ ರೈತನಿಗೆ ಮೂಲಾಧಾರ ಬೀಜವೇ. ಆದ್ದರಿಂದಲೇ ಆತ ಉತ್ತಮ ಮತ್ತು ವರ್ಷಗಳಿಂದ ದೃಢಪಟ್ಟ ತಳಿಗಳ ಬೀಜಗಳ ಜತನಕ್ಕೆ ನಿರಂತರ ಪ್ರಯತ್ನಿಸುತ್ತಾನೆ. ಬೀಜ ಉಳಿವಿಗಾಗಿ ಹಲವಾರು ರೀತಿಯಲ್ಲಿ ಹೋರಾಟ ಮಾಡುತ್ತಾನೆ. ಇತ್ತೀಚಿನ ಬಿ.ಟಿ ಬದನೆ ವಿರುದ್ಧ ಬೀದಿಗಿಳಿದ ರೈತರ ಹೋರಾಟ, ಹಲವು ಕಡೆ ನಡೆಯುವ ಕಳಪೆ ಬೀಜದ ವಿರುದ್ಧದ ಹೋರಾಟ,… ಇವೆಲ್ಲವೂ ಬೀಜ ಉಳಿಸಿಕೊಳ್ಳುವ ತಂತ್ರಗಳೇ.
ಬಿತ್ತನೆ ಸಾಮಗ್ರಿ ಎಂದರೆ ಬೀಜವಾಗಬಹುದು, ಇಲ್ಲವೇ ಬಿತ್ತನೆಗೆ ಬಳಸುವ ಸಸ್ಯದ ಇತರೆ ಭಾಗಗಳಾಗಿರಬಹುದು. ತರಕಾರಿ ಮತ್ತು ಹಣ್ಣಿನ ಗಿಡಗಳನ್ನು ಬೀಜ, ಬೇರು, ಕಾಂಡ, ಗೆಡ್ಡೆ, ಗೆಣ್ಣು, ಹಂಬು ತುಂಡು, ಇಲಕುಗಳು, ಬೇರಿನ ತುಂಡು ಮುಂತಾದವುಗಳ ಮೂಲಕ ವೃದ್ಧಿ ಮಾಡಬಹುದು, ಬೀಜ ಪದ್ಧತಿಗೆ ಲಿಂಗ ಪದ್ಧತಿ ಎಂಬ ಹೆಸರು ಕೂಡ ಇದೆ. ಸಸ್ಯದ ಇತರ ಭಾಗಗಳನ್ನು ಬಳಸಿ ವೃದ್ಧಿಪಡಿಸುವುದಕ್ಕೆ ನಿರ್ಲಿಂಗ ಪದ್ಧತಿ ಎನ್ನುತ್ತೇವೆ.
ಉತ್ತಮ ಗುಣಮಟ್ಟದ, ಶ್ರೇಷ್ಠ ದರ್ಜೆಯ ಬೀಜವನ್ನು ಬಿತ್ತಬೇಕು, ಉತ್ತಮ ಬಿತ್ತನೆಯಿಂದ ಅರ್ಧ ಬೆಳೆ ಕೈಗೆ ಬಂದಂತೆ. ಉಳಿದ ಅರ್ಧ ಬೆಳೆ ಪೌಷ್ಟಿಕ ಗೊಬ್ಬರ, ಸುಧಾರಿತ ಬೇಸಾಯ ಕ್ರಮ, ಸಸ್ಯ ಸಂರಕ್ಷಣೆ ಮುಂತಾದವುಗಳಿಂದ ಸಾಧ್ಯ. ಬೀಜ ಜೀವಂತವಿದ್ದು ಅನುಕೂಲಕರ ಪರಿಸ್ಥಿತಿಗಳಲ್ಲಿ ಬಿತ್ತಿದ ಕೂಡಲೇ ಮೊಳೆಯಬೇಕು. ಒಂದು ವೇಳೆ ಮೊಳೆಯದೇ ಇದ್ದರೆ, ಅವು ನಿರ್ಜೀವ ಬೀಜ ಅಥವಾ ಸತ್ತು ಹೋಗಿವೆ ಎಂದು ಅರ್ಥ. ಕೆಲವೊಮ್ಮೆ ಮೊಳೆಯುವಿಕೆ ವಿಳಂಬವಾಗುತ್ತದೆ. ಅದಕ್ಕೆ ಕಾರಣ, ಬೀಜ ಅಚೇತನಾವಸ್ಥೆಯಲ್ಲಿ ಇರುವುದು, ಇಲ್ಲವೆ ಅವುಗಳ ಶಾರೀರಿಕ ಕ್ರಿಯೆಗಳು ಇನ್ನೂ ಪೂರ್ಣಗೊಳ್ಳದಿರುವುದು. ಅಂತಹ ಪರಿಸ್ಥಿತಿಯನ್ನು ‘ಕೊಯ್ಲೋತ್ತರ ಪರ್ವಗೊಳ್ಳುವಿಕೆ’ ಎನ್ನುತ್ತಾರೆ.
ಬೀಜ ಜೀವಂತಿಕೆಯ ಕುರುಹು
ಬೀಜವನ್ನು ನೀರಿಗೆ ಸುರಿದಾಗ ಗಟ್ಟಿ ಬೀಜ ತಳ ಸೇರಿ ಜೊಳ್ಳು- ಸೀಕಲು, ಹುಳು ತಿಂದ, ಹಾಳಾದ, ಅರೆ ಬಲಿತ ಬೀಜಗಳು ಮೇಲೆ ತೇಲುತ್ತವೆ. ನೀರನ್ನು ಬಸಿದು, ಗಟ್ಟಿ ಬೀಜಗಳನ್ನು ಬಿತ್ತನೆಗೆ ಬಳಸಬೇಕು. ನೀರಿನಿಂದ ಬೀಜಗಳನ್ನು ತೆಗೆದು ಅವುಗಳನ್ನು ಸ್ವಚ್ಛ ನೆಲದ ಮೇಲೆ, ಇಲ್ಲವೆ ಚಾಪೆಯ ಮೇಲೆ ತೆಳ್ಳಗೆ ನೆರಳಲ್ಲಿ ಹರಡಿ ಅನಂತರ ಬಿತ್ತಬೇಕು. ಸಾಮಾನ್ಯವಾಗಿ ಈ ಪದ್ಧತಿಯಿಂದ ಉತ್ತಮ ಗುಣಮಟ್ಟದ ಬೀಜಗಳನ್ನು ಬಿತ್ತನೆಗೆ ಬಳಸಬಹುದು. ನಂತರ ಗಟ್ಟಿ ಬೀಜಗಳನ್ನು ಚೆನ್ನಾಗಿ ಇದೆಯೋ ಇಲ್ಲವೋ ಎಂಬುವುದನ್ನು ಈ ಕೆಳಗಿನ ವಿಧಾನಗಳಿಂದ ಕಂಡುಕೊಳ್ಳಬಹುದು.
ಎಣಿಸಿದ ಬೀಜವನ್ನು ನೀರಿನಲ್ಲಿ ನೆನೆಸಿಟ್ಟಲ್ಲಿ ಅವು ಮೊಳೆಯುತ್ತವೆ. ಆಗ ಎಷ್ಟು ಬೀಜ ಮೊಳೆತಿವೆ ಎಷ್ಟು ಮೊಳೆತ್ತಿಲ್ಲ ಎಂಬುದನ್ನು ಎಣಿಸಿ ನೂರಕ್ಕೆ ಎಷ್ಟು ಮೊಳಕೆಯೊಡದಿವೆ ಎಂದು ಲೆಕ್ಕ ಮಾಡಲಾಗುತ್ತದೆ. ಬೀಜಗಳ ಮೇಲಿನ ಸಿಪ್ಪೆ ಬಿಡಿಸಿ ಭ್ರೂಣವನ್ನು ನೀರಿಗೆ ಹಾಕಿ ಇಟ್ಟಲ್ಲಿ ಅದು ಹಸಿರು ಬಣ್ಣ ತಾಳಿದರೆ ಅಂತಹ ಬೀಜಗಳು ಜೀವಂತವಿರುತ್ತವೆ.
ಜೀವಂತಿಕೆಯನ್ನು ಕೂಡಲೆ ತಿಳಿಯುವಲ್ಲಿ ಟಿಟಿಸಿ ಪರೀಕ್ಷೆಯನ್ನು ಅನುಸರಿಸುತ್ತಾರೆ. ಟ್ರೈಫಿನೈಲ್ ಟೆಟ್ರಜೋಲಿಯಂ ಕ್ಲೊರೈಡ್(ಟಿಟಿಸಿ) ಎಂಬ ರಾಸಾಯನಿಕ ವಸ್ತುವನ್ನು ನೀರಿಗೆ ಹಾಕಿ ಕರಗಿಸಿ ಆ ದ್ರಾವಣದಲ್ಲಿ ಬೀಜವನ್ನು ಇಟ್ಟಲ್ಲಿ; ಅವು ಕೆಂಬಣ್ಣಕ್ಕೆ ಮಾರ್ಪಟ್ಟರೆ ಆ ಬೀಜಗಳು ಜೀವಂತವಾಗಿವೆ ಎಂದರ್ಥ.
ಪ್ರಯೋಗಶಾಲೆಯಲ್ಲಿ ಬ್ಲಾಟಿಂಗ್ ಕಾಗದದ ಹಾಳೆಗಳ ಮೇಲೆ ನೀರಿನಲ್ಲಿ ತೊಯಿಸಿದ ಬೀಜವನ್ನು ಉದ್ದಕ್ಕೆ ಇಟ್ಟು ಸಾಗುವಳಿಯಂತೆ ಸುತ್ತಿಡುತ್ತಾರೆ. ಮೂರು- ನಾಲ್ಕು ದಿನಗಳ ನಂತರ ಸುರುಳಿಯನ್ನು ಬಿಡಿಸಿ ನೋಡಿ, ಬೀಜಗಳನ್ನು ಎಣಿಸಿ, ಶೇಕಡವಾರು ಮೊಳಕೆ ಪ್ರಮಾಣವನ್ನು ಕಂಡುಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನುಭವಿ ಕುಟುಂಬದ ಹಿರಿಯರು, ಬಿತ್ತುವ ಮುಂಚೆ ಒಂದಿಷ್ಟು ಕಾಳು ಅಥವಾ ಬೀಜವನ್ನು ಹಳೆಯ ಗೋಣಿ ಚೀಲ ಅಥವಾ ಬಟ್ಟೆ ತುಂಡಿನಲ್ಲಿ ಸುತ್ತಿಟ್ಟು, ನೀರಿನಲ್ಲಿ ಅದ್ದಿ ತೇವ ಮಾಡುವ ರೂಢಿ ಇದೆ. ಅವು ಮೊಳೆತ ನಂತರ ಬೀಜ ನೋಡುತ್ತಾರೆ.
ಬೀಜ ಸಂಗ್ರಹ ಮತ್ತು ಸಂರಕ್ಷಣೆ
ಅನಾದಿ ಕಾಲದಿಂದಲೂ ರೈತ ತನಗೆ ಬೇಕಾದ ಬಿತ್ತನೆ ಬೀಜಗಳನ್ನು ಕಾಪಾಡಿಕೊಂಡು ಬಂದಿದ್ದಾನೆ. ಬೆಳೆ ಬಂದ ಸಮಯದಲ್ಲಿ ಉತ್ತಮ ಗುಣಮಟ್ಟದ ತೆನೆಗಳನ್ನ ಆಯ್ದು, ಬೇರೆ ಜಾಗದಲ್ಲಿ ಒಣಗಿಸಿ, ಕಾಳುಗಳನ್ನು ಬೇರ್ಪಡಿಸಿ ತನ್ನದೇ ಆದ ರೀತಿಯಲ್ಲಿ ಸಂಗ್ರಹಿಸಿಕೊಳ್ಳುತ್ತಾನೆ. ಅವುಗಳಲ್ಲಿ ಕೆಲವು ವಿಧಾನಗಳನ್ನು ಈಗ ತಿಳಿಯೋಣ;
ಕೆಂಮಣ್ಣು ಹಚ್ಚುವುದು- ಕೆಂಮಣ್ಣಿಗೆ ಸ್ವಲ್ಪ ನೀರು ಹಾಕಿ ರಾಡಿ ತರಹ ಮಾಡಿಕೊಂಡು, ಬಿತ್ತನೆಗೆ ತೆಗೆದಿಟ್ಟ ನಾಟಿ ಬೀಜಗಳನ್ನ ಸುರಿದು ಚೆನ್ನಾಗಿ ಎಲ್ಲಾ ಬೀಜಗಳಿಗೆ ಮಣ್ಣು ತಲಗುವಂತೆ ಹಚ್ಚಿ ಸ್ವಲ್ಪ ಹೊತ್ತು ನೆರಳಲ್ಲಿ ಒಣಗಿಸಿ ನಂತರ ಮೂಡೆಯಲ್ಲಿ ಅಥವಾ ಸೆಣಬಿನ ಚೀಲದಲ್ಲಿ ಕಟ್ಟಿ ಇಡಬಹುದು. ಇದರಿಂದ ಬೀಜ ತಿನ್ನುವ ಕೀಟಗಳಿಗೆ ಮಣ್ಣು ರಕ್ಷಾ ಕವಚದಂತೆ ಇರುತ್ತದೆ ಮತ್ತು ಕೀಟಗಳ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ.
ಹರಳು(ಔಡಲ) ಅಥವಾ ಬೇವಿನ ಎಣ್ಣೆ ಹಚ್ಚುವುದು- ಬಿತ್ತನೆಗೆ ತೆಗೆದಿಟ್ಟ ನಾಟಿ ಬೀಜಗಳ ಮೇಲೆ ಔಡಲ ಎಣ್ಣೆಯನ್ನು ಚೆನ್ನಾಗಿ ಸುರಿದು, ಎಲ್ಲಾ ಬೀಜಗಳಿಗೆ ತಗಲುವಂತೆ ಹಚ್ಚಬೇಕು. ನಂತರ ನೆರಳಲ್ಲಿ ಒಣಗಿಸಿ ಮೂಡೆಯಲ್ಲಿ ಕಟ್ಟಬಹುದು. ಎಣ್ಣೆಯ ವಾಸನೆಗೆ ಕೀಟಗಳು ಹತ್ತಿರ ಬರುವುದಿಲ್ಲ ಮತ್ತು ಕೀಟಗಳ ಸಂತತಿಯನ್ನು ಕೂಡ ಈ ವಾತಾವರಣ ನಿಯಂತ್ರಿಸುತ್ತದೆ.
ಒಣಗಿದ ಮೆಣಸಿನ ಹಣ್ಣು ಅಥವಾ ಬೇವಿನ ಎಲೆ- ಬಿತ್ತನೆಗೆ ತೆಗೆದಿಟ್ಟ ನಾಟಿ ಬೀಜಗಳ ಮೇಲೆ ಮೆಣಸಿನ ಹಣ್ಣು ಅಥವಾ ಒಣಗಿದ ಬೇವಿನ ಎಲೆಯನ್ನ ಒಳಗಡೆಯಿಟ್ಟು ಮೂಡೆಯನ್ನ ಕಟ್ಟಬೇಕು. ಆಗ ಅದರ ವಾಸನೆಗೆ ಕೀಟಗಳು ಹತ್ತಿರ ಬರುವುದಿಲ್ಲ ಮತ್ತು ಕೀಟಗಳ ಸಂತತಿ ಕೂಡ ನಿಯಂತ್ರಣದಲ್ಲಿರುತ್ತದೆ.
ಬೀಜೋಪಚಾರ
ಬಿತ್ತನೆಗೆ ಮುನ್ನ ಬಿತ್ತನೆ ಬೀಜಗಳನ್ನು ನೀರಿನಲ್ಲಿ ನೆನೆಸಿದಲ್ಲಿ, ಮೊಳಕೆಯೊಡೆಯುವ ಶೇಕಡವಾರು ಪ್ರಮಾಣ ಹೆಚ್ಚಾಗುತ್ತದೆ. ಬಿತ್ತನೆ ಬೀಜಗಳನ್ನು ಎಷ್ಟು ಸಮಯ ನೆನೆಸಬೇಕು ಎನ್ನುವುದು ಬಿತ್ತನೆ ಬೀಜದ ಕವಚದ ಗುಣವನ್ನು ಅವಲಂಬಿಸಿದೆ. ಬಿತ್ತನೆ ಬೀಜಗಳನ್ನು ಕಾಂಪೋಸ್ಟ್ ಮಿಶ್ರಣ ಅಥವಾ ಹಸುವಿನ ಗಂಜಲದಲ್ಲಿ ನೆನೆಸಿ ರೋಗ ನಿರೋಧಕ ಶಕ್ತಿ ಹೊಂದುವಂತೆ ಮಾಡಬಹುದು. ಜೋಳಕ್ಕೆ ಸಾಮಾನ್ಯವಾಗಿ ಕಾಡಿಗೆ ರೋಗ ಬರುತ್ತದೆ.
ಹೈಬ್ರಿಡ್ ಮತ್ತು ನಾಟಿ ಜೋಳದ ಬೀಜಕ್ಕೂ ಕಾಡಿಗೆ ರೋಗ ಬರುವುದುಂಟು. ಕಾಡಿಗೆ ರೋಗಕ್ಕೆ ನಾನಾ ತರಹದ ಕೀಟನಾಶಕಗಳನ್ನು ಬಳಸಿದರೂ ಕಾಡಿಗೆ ರೋಗ ಹತೋಟಿಗೆ ಬರುವುದಿಲ್ಲ. ಬಿಸಿಲ ನಾಡಿನಲ್ಲಿ ಜೋಳವನ್ನು ಬೆಳೆಯುತ್ತಾರೆ. ನಾನು ಹಲವಾರು ಸಾರಿ ರೈತರೊಂದಿಗೆ ಮಾತನಾಡುವಾಗ ಕಾಡಿಗೆ ರೋಗದ ಬಗ್ಗೆ ಕೇಳುತ್ತಿದ್ದೆ. ಬಹಳಷ್ಟು ರೈತರು ಕಾಡಿಗೆ ರೋಗವನ್ನು ನಿಯಂತ್ರಿಸುವಲ್ಲಿ ವಿಫಲವಾಗಿದ್ದರು. ಇದೇ ರೀತಿ ಹಾವೇರಿಯಲ್ಲಿ ಕೆಲಸ ಮಾಡುವಾಗ ಒಬ್ಬ ರೈತರಿಂದ ಉತ್ತರ ಸಿಕ್ಕಿತ್ತು. ಆ ರೈತನ ಪ್ರಯೋಗ ಬಹು ಸುಲಭ. ಬಿತ್ತನೆ ಬೀಜಗಳಿಗೆ ದತೂರ, ಮದುಗುಣಕಿ ಅಥವಾ ನಾಯಿಗಿಡದ ಎಲೆಯ ರಸವನ್ನು ಹಚ್ಚಿ ನೆರಳಲ್ಲಿ ಒಣಗಲು ಬಿಡುತ್ತಾರೆ. ಒಣಗಿದ ಬೀಜಗಳನ್ನು ನೇರವಾಗಿ ಬಿತ್ತನೆಗೆ ಬಳಸುತ್ತಾರೆ. ದತೂರ ಗಿಡವು ರಸ್ತೆ ಅಕ್ಕ- ಪಕ್ಕದಲ್ಲೂ ಬೆಳೆಯುವುದುಂಟು. ಕಾಯಿಯ ಮೇಲೆ ಮುಳ್ಳಿನಿಂದ ಅವರಿಸಿದೆ. ಸುಮಾರು ಒಂದು ಅಡಿಯಿಂದ ಮೂರು ಅಡಿವರಗೂ ಬೆಳೆಯುತ್ತದೆ. ಇದರ ಸಸ್ಯನಾಮ Datura mentel or Datura album.  ಕೇವಲ ಈ ಗಿಡದ ರಸದಿಂದ ಕಾಡಿಗೆ ರೋಗದಿಂದ ಮುಕ್ತಿ ಪಡೆಯಬಹುದು.
ಬೀಜಾಮೃತ- ತಯಾರಿಸಲು 5 ಕೆ.ಜಿ ಸಗಣಿ, 5 ಲೀ. ಗಂಜಲ, 1 ಲೀ. ಹಾಲು, 250 ಗ್ರಾಂ. ಸುಣ್ಣ, 50 ಲೀ. ನೀರು. ಇವೆಲ್ಲವನ್ನು ರಾತ್ರಿ ಒಟ್ಟುಗೂಡಿಸಿ ಬೆಳಿಗ್ಗೆ ಬಿತ್ತುವ ಸಮಯದಲ್ಲಿ ಎಲ್ಲಾ ಬೀಜಗಳನ್ನು ಬೀಜಾಮೃತದಲ್ಲಿ ಅದ್ದಿ ತೆಗೆದು ಬಿತ್ತುವುದು ಸೂಕ್ತ. ಒಂದು ನಿಮಿಷ ಅದ್ದಿದರೆ ಸಾಕು. ಬಿತ್ತನೆಗೆ ಸಸಿಗಳನ್ನು ಬಳಸುವುದಾದರೆ, ಬೇರನ್ನು ಅದ್ದಿ ತೆಗೆಯಬಹುದು. ಇದರಿಂದ ಬೀಜಕ್ಕೆ ತಗಲಿರುವ ರೋಗ ನಾಶವಾಗುತ್ತದೆ ಮತ್ತು ಯಾವುದೇ ಕೀಟಗಳ ಬಾಧೆ ಇರುವುದಿಲ್ಲ. ಈ ವಿಧಾನವನ್ನು ಬೀಜ ಹಾಗೂ ಬೇರು, ಕಾಂಡ, ಗೆಡ್ಡೆಗಳಿಗೂ ಬಳಸಬಹುದು.
ತಳಿ ಬಿತ್ತನೆ ಬೀಜಗಳಿಗೆ ಹಸುವಿನ ಹಾಲು ಮತ್ತು ನೀರನ್ನು 1:9 ಪ್ರಮಾಣದಲ್ಲಿ ಮಿಶ್ರಣ ಮಾಡಿಕೊಂಡಿರಬೇಕು. ಬಿತ್ತನೆ ಬೀಜಗಳ ಮೇಲೆ ಸಿಂಪಡಿಸಿ ನೆರಳಿನಲ್ಲಿ ಒಣಗಿಸುವುದು ಪ್ರಯೋಜನಕಾರಿ. ಇದರಿಂದ ಬೀಜದ ಭ್ರೂಣಕ್ಕೆ ಶಕ್ತಿ ಸಿಗುತ್ತದೆ. ಮೊಳೆಕೆ ಬರುವ ಸಾಧ್ಯತೆ ಅಧಿಕವಾಗುತ್ತದೆ. ಇದರಿಂದ ಯಾವುದೇ ರೋಗ ಅಥವಾ ಕೀಟ ಬಾಧೆ ತಡೆಯುವುದಕ್ಕೆ ಆಗುವುದಿಲ್ಲ.
ಹಸುವಿನ ಗಂಜಲದಲ್ಲಿ ಬೀಜೋಪಚಾರ ಮಾಡಿ ನಂತರ ನೆರಳಿನಲ್ಲಿ ಒಣಗಿಸುವುದು (100 ಕೆ.ಜಿ ಬಿತ್ತನೆ ಬೀಜಗಳಿಗೆ 1 ರಿಂದ 2 ಲೀಟರ್ ಹಸುವಿನ ಗಂಜಲ ಬೇಕಾಗುತ್ತದೆ). ಸುಮಾರು 1 ಲೀಟರ್ ಹಸುವಿನ ಗಂಜಲಕ್ಕೆ 10 ಲೀಟರ್ ನೀರು ಬೆರಸಬೇಕು. ಬಿತ್ತನೆಗೆ ತೆಗೆದಿಟ್ಟ ಬೀಜಗಳನ್ನು ಬಟ್ಟೆಯಲ್ಲಿ ಕಟ್ಟಿ ಮಿಶ್ರಣದಲ್ಲಿ 10ರಿಂದ 15 ನಿಮಿಷ ಕಾಲ ನೆನೆಸಬೇಕು. ಅದ್ದಿ ತೆಗೆದ ನಂತರ ಬೀಜಗಳನ್ನು ಎರಡರಿಂದ ಮೂರು ಬಾರಿ ನೀರಿನಲ್ಲಿ ತೊಳೆದು ನೆರಳಲ್ಲಿ ಒಣಗಿಸಬೇಕು. ಈ ಬೀಜೋಪಚಾರದಿಂದ ಮಣ್ಣಿನಿಂದ ಹರಡುವ ಹಲವು ರೋಗಗಳಿಂದ ಮುಕ್ತಿ ಪಡೆಯಬಹುದು. ಯಾವುದೇ ಕಾರಣಕ್ಕೂ ಮಿಶ್ರಣದಲ್ಲಿ ಅದ್ದಿದ ಮೇಲೆ ನೀರಿನಲ್ಲಿ ತೊಳೆಯುವುದನ್ನು ಮರೆಯಬಾರದು.
ನೆನೆಸಲು ಬೇಕಾಗುವ ಕಾಲಾವಧಿ
ಭತ್ತ- 12 ಗಂಟೆ, ಮೆಕ್ಕೆಜೋಳ 24 ಗಂಟೆ, ಗೋಧಿ 7 ಗಂಟೆ, ನೆಲಗಡಲೆ 1-2 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಬೀಜಗಳನ್ನು 4-5 ಗಂಟೆ ಕಾಲ ನೆರಳಿನಲ್ಲಿ ಒಣಗಿಸಬೇಕು. ಒಣಗಿದ ಬೀಜಗಳನ್ನು ತೆಗೆದು ಬಿತ್ತನೆಗೆ ಬಳಸಬೇಕು.

No comments:

Post a Comment