Search This Blog

Thursday, December 22, 2011

‘ಗುಳೆ ಬಂದೇವಿ..ನಮ್ಮನ್ನ ಖರೀದಿ ಮಾಡಾವ್ರು ಯಾರರೆ ಅದಾರೇನು?’ - ಅನ್ನದಾತನ ಅಳಲು.


"ಇನ್ನ ನಮ್ಮ ಹತ್ರ ಮಾರ್ಕೊಳ್ಳಾಕ ಏನೂ ಉಳದಿಲ್ಲ...ಉಳದಾವ್ರು ಅಂದ್ರ  ನಾವ... ನಮ್ಮನ್ಯಾರರೆ ಇಲ್ಲಿ ಖರೀದಿ ಮಾಡಾವ್ರ ಇದ್ರ ಬರ್ರೀ; ನಾವು ಮಾರ್ಕೊಳ್ಳಾಕ ರೆಡಿ ಅದೀವಿ.." ಈ ಬರಹದ ಕೆಳಗೆ ಕೆಲ ರೈತರ ಸಹಿ, ಸಂಪರ್ಕ ಸಂಖ್ಯೆ ಹಾಗೂ ಹಳ್ಳಿಯ ಹೆಸರು ನಮೂದಿಸಲಾಗಿತ್ತು! 
 
ಇತ್ತೀಚೆಗೆ ಧಾರವಾಡದಲ್ಲಿ ನಡೆದ ರೈತರ ಪ್ರತಿಭಟನಾ ಮೆರವಣಿಗೆಯಲ್ಲಿ ರೈತನೋರ್ವ ತನ್ನ ಕುತ್ತಿಗೆಗೆ ಈ ಭಿತ್ತಿ ಬರಹ ನೇತು ಹಾಕಿಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲು ಹೊರಟಿದ್ದ! ಜಿಲ್ಲಾಧಿಕಾರಿಗಳು ಮನವಿ ಸ್ವೀಕರಿಸಲು ಬರಲಿಲ್ಲ. ಅವರ ಕಾರ್ಯಾಲಯದ ಹಿರಿಯ ಅಧಿಕಾರಿಯೋರ್ವರು ಮನವಿ ಸ್ವೀಕರಿಸಿದರು, ಅವರು ಈ ಬೋರ್ಡ್ ಓದಿದರೋ ಇಲ್ಲವೋ ಗೊತ್ತಿಲ್ಲ! ಸದ್ಯದ ಪ್ರಶ್ನೆ ಎಂದರೆ, ಸಂಕಷ್ಟದಲ್ಲಿರುವ ಅನ್ನದಾತನನ್ನು ಸರಕಾರ ಕೊಂಡುಕೊಳ್ಳಬಹುದೇ? 
 
ಈ ಬಾರಿಯ ಉತ್ತರ ಕರ್ನಾಟಕ ಭಾಗದ ಅತಿವೃಷ್ಟಿಯ ‘ಹಸಿ ಬರ’ ನವಲಗುಂದ ಹಾಗೂ ಕುಂದಗೋಳ ತಾಲೂಕಿನ ರೈತರನ್ನು, ಕೃಷಿ ಕೂಲಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಅವರೆಲ್ಲ ಕೂಲಿ ಹುಡುಕಿಕೊಂಡು ಧಾರವಾಡ, ಹುಬ್ಬಳ್ಳಿಯತ್ತ ಮುಖ ಮಾಡಿದ್ದಾರೆ. ಚುಮುಚುಮು ಬೆಳಕು ಹರಿಯುವ ಹೊತ್ತಿಗೆ ಬುತ್ತಿಯ ಸಮೇತ ಗೆಲುವಿನಿಂದ ಹೊಲಕ್ಕೆ ಹೋಗಬೇಕಿತ್ತು ಇಲ್ಲಿನ ರೈತ ಹಾಗೂ ರೈತ ಮಹಿಳೆಯರು. ಆದರೆ, ಬುತ್ತಿಯ ಗಂಟು ಹಾಗೂ ಬದುಕಿನ ಭಾರ ಎರಡೂ ತಲೆ ಮೇಲೆ ಹೊತ್ತು, ಪೇಲವವಾದ ಮುಖದೊಂದಿಗೆ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಹಾಗೂ ಧಾರವಾಡದ ಹಳೆಯ ಬಸ್ ನಿಲ್ದಾಣಗಳಲ್ಲಿ ‘ಕೂಲಿ ಏಜೆಂಟ್’ ಗಳಿಗೆ ಕಮಿಷನ್ ನೀಡಿ, ಕೂಲಿಗಾಗಿ ಹೆಸರು ನಮೂದಿಸಿಕೊಂಡು ಪಾಳಿಯಲ್ಲಿ ಕಾಯುತ್ತ ನಿಂತ ಅನ್ನದಾತನ ಅಸಹಾಯಕ ದೃಷ್ಯ ಮನ ಕಲಕುತ್ತದೆ. ಈ ಪಾಳಿ ನೇಗಿಲಯೋಗಿ ‘ಕೃಷಿ ನಿರಾಶ್ರಿತ’ಆದಾನೆಯೇ ಎಂಬ ದಿಗಿಲು ಹುಟ್ಟಿಸುತ್ತದೆ. 
 
ನಮಗೆಲ್ಲ ಗೊತ್ತು, ಸಕಾಲಕ್ಕೆ ಮಳೆ ಬೀಳದಿದ್ದರೆ ಬರ ತಲೆದೋರುತ್ತದೆ. ಆದರೆ ಅತಿವೃಷ್ಟಿಯಿಂದ ಹೊರಹೊಮ್ಮುವ ‘ಹಸಿ ಬರ’ ಕೂಡ ಅಷ್ಟೆ ವಿದ್ರಾವಕವಾದದ್ದು. ಈ ಬಾರಿ ಉತ್ತರ ಕರ್ನಾಟಕದಲ್ಲಿ ಬಿತ್ತನೆಯ ಕಾಲಕ್ಕೆ ತಕ್ಕ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಬಿದ್ದ ಮಳೆಯಿಂದ ನೆಲ ತೋಯ್ದು ಹಸಿಯಾಗದೇ ಹೋಗಿದ್ದರಿಂದ ಬಿತ್ತನೆಯಾದ ಬೀಜಗಳೆಲ್ಲ ಮೊಳಕೆಯೊಡೆಯುವ ಕಾಲಕ್ಕೆ ಬಿರು ಬಿಸಿಲಿಗೆ ಮೈಯೊಡ್ಡಿ, ಅರೆಬೆಂದು ಸಸಿಗಳು ಸತ್ತುಹೋದವು. ಆದರೆ ಧಾರವಾಡ ಜಿಲ್ಲೆಯಲ್ಲಿ ಮೆಣಸಿನಕಾಯಿ, ಉಳ್ಳಾಗಡ್ಡಿ ಹಾಗೂ ಗೋವಿನಜೋಳ ರೈತನ ಕೈಗೆ ದಕ್ಕುವಷ್ಟು ಸೊಕ್ಕಿತ್ತು. ಆದರೆ ಸಕಾಲಿಕವಾಗಿ ಕೃಷಿ ಕೂಲಿ ಕಾರ್ಮಿಕರು ಎದೆಯುದ್ದ ಬೆಳೆದಿದ್ದ ಬೆಳೆಯ ಕಟಾವಿಗೆ ದೊರಕದೇ ಹೋಗಿದ್ದು ಸಮಸ್ಯೆ ಸೃಷ್ಟಿಸಿತು. ಅಳಿದುಳಿದ ಬೆಳೆ ಕೊಯ್ಲಾಗಬೇಕು ಎಂದು ರೈತ ಅಣಿಯಾಗುವ ಹೊತ್ತಿಗೆ ಆರ್ಭಟಿಸುತ್ತ ಸುರಿದ ಮಳೆ, ಜಮೀನುಗಳನ್ನು ನುಂಗಿ ನಿಂತಿತು. ವಾರಗಟ್ಟಲೇ ನೀರಿನ ಪ್ರವಾಹಕ್ಕೆ ಸಿಕ್ಕ ಬೆಳೆ ಕೊಳೆತು ಕೊಚ್ಚಿ ಹೋಯಿತು.
 
ಮಳೆಯ ಅಭಾವದಿಂದ ಬರುವ ಬರಕ್ಕೂ, ಅತಿ ವೃಷ್ಟಿಯಿಂದ ಬರುವ ‘ಹಸಿ ಬರ’ಕ್ಕೂ ವ್ಯತ್ಯಾಸಗಳಿವೆ. ಹಸಿ ಬರ ಉಂಟಾದ ಸಂದರ್ಭದಲ್ಲಿ ನೀರು ಉಕ್ಕೇರಿ ಇಳಿದ ನಂತರ ಆ ಜಮೀನಿನಲ್ಲಿ ಹವಾಗುಣ ಹಾಗೂ ಮಣ್ಣಿನ ಗುಣಕ್ಕೆ ಅನುಗುಣವಾಗಿ ಏನಾದರೂ ಕೈ ಹಿಡಿಯುವ ಬೆಳೆ (ಲಾಭದ ದೃಷ್ಟಿಯಿಂದಲ್ಲ) ರೈತ ಬೆಳೆದುಕೊಳ್ಳಬಹುದು. ಜೊತೆಗೆ ಅಂತರ್ಜಲ ಮಟ್ಟ ಸಹ ಗಣನೀಯವಾಗಿ ಏರುವುದರಿಂದ ನೀರಿನ ಸಮಸ್ಯೆಗೆ ವರ್ಷವಿಡಿ ಪರಿಹಾರ ಸಿಕ್ಕಂತೆ. ಆದರೆ ನವಲಗುಂದದ ಬೆಣ್ಣೆ ಹಳ್ಳದ ‘ಹಸಿವಿನ ಬರ’ ಈ ಬಾರಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆಯನ್ನು ಹಾನಿ ಮಾಡಿದೆ. 
 
"ಮುಳ್ಳಿನ ಮೇಲೆ ಬಟ್ಟೆ ಬೀಳಲಿ; ಅಥವಾ ಬಟ್ಟೆಯ ಮೇಲೆ ಮುಳ್ಳು ಬೀಳಲಿ ಹರಿಯುವುದು ಮಾತ್ರ ಬಟ್ಟೆಯೇ!" ಈ ನಾಣ್ಣುಡಿಯಂತೆ, ಡೌಗಿ ಬರವಿರಲಿ, ಹಸಿ ಬರವಿರಲಿ ಅಥವಾ ಬೆಣ್ಣಿಹಳ್ಳದ ‘ಹಸಿವಿನ ಬರ’ವಿರಲಿ ಸಂಸಾರ ನೌಕೆ ಇಕ್ಕಟ್ಟಿಗೆ ಸಿಲುಕುವುದು ರೈತನದ್ದೇ. 
 
ಕುಂದಗೋಳದ ಪ್ರಗತಿಪರ ಕೃಷಿಕ ಹಾಗೂ ಬೆಣ್ಣೆ ಹಳ್ಳ ಪ್ರವಾಹ ಪೀಡಿತ ಪ್ರದೇಶಗಳ ಶಾಶ್ವತ ಪರಿಹಾರಕ್ಕೆ ಹೋರಾಟ ನಡೆಸುತ್ತಿರುವ ಶಂಕರಗೌಡ ಮುದಿಗೌಡರ ಹೇಳುತ್ತಾರೆ, "ಇಷ್ಟಾದ್ರೂ ನಾವೇನು ಎದಿಗುಂದಿಲ್ರೀ...ಸಾಹೇಬ್ರ, ಪೇಪರ್ನ್ಯಾವ್ರು ನಮ್ಮ ಫೋಟೊ ಹಾಕ್ಯಾಕಿ ನಮನ್ನ ದೈನೇಸಿ ಮಾಡಿ ತೋರ್ಸ್ಯಾರೀ.. ಖರೆ ಕತಿ ಕೇಳ್ರೀ ನನ್ನಿಂದ; ಬೆಣ್ಣಿ ಹಳ್ಳ ಇಳದಮ್ಯಾಲೆ ಹೊಲದಾಗಿನ ಎದಿ ಮಟಾ ಹುದಲಾಗ ಇಳದು ಮೊಳಕಿ ಒಡದ ಉಳ್ಳಾಗಡ್ಡಿ ಪೇರಿಸಿ ರಸ್ತೆ ದಂಡಿಮ್ಯಾಲೆ ಹಾಕಿ ಒಣಗಿಸಿದ್ವಿ. ಮನಿಮಾರು ಬಿದ್ಧೋಗಿ ಊರ ಸರಕಾರಿ ಸಾಲ್ಯಾಗ, ಗುಡ್ಯಾಗ ಮಕ್ಳು ಮರಿ ಕಟಗೊಂಡು ಬಿದ್ದಿದ್ರೂ ನಾವೇನು ಯಾರಿಗೂಪ ಕೈಚಾಚಿಲ್ರೀಪಾ. ಉಳ್ಳಾಗಡ್ಡಿ ಬಿಸಿಲಿಗೆ ಒಣಗಿದ ಮ್ಯಾಲೆ ಚಂಡಿ ಕತ್ತರಿಸಿ ಪ್ಯಾಟಿಗೆ ಒಯ್ದರ..ಅರ್ಧ ರೇಟಿಗೆ ಕೇಳಿದರು. ಮತ್ತೆಲ್ಲಿ ವಾಪಸ್ ಊರಿಗೆ ಬಸ್ ಚಾರ್ಜ್ ಕೊಟ್ಟು ಹೇರಿಕೊಂಡು ಹೋಗೋದು ಅಂತ ಬಂದ ರೇಟಿಗೆ ಮಾರಿ, ಬಿತ್ತಿದ್ದು ಬೆಳದಿದ್ದ ಸಾಲಾ ತೀರಸಾಕ ಹುಬ್ಬಳ್ಳಿ ಪ್ಯಾಟಾಗ ದುಡಿಮಿಗೆ ಹೋಗ್ತಾರೀ. ಕಾರ್ಖಾನ್ಯಾಗ ತಯ್ಯಾರಾದ ಉತ್ಪನ್ನಕ್ಕ ಪ್ರಿಂಟ್ ಮಾಡಿದ ಬೆಲಿ ಪ್ಯಾಟಾಗ ಕೊಡ್ತಾರ. ಆದ್ರ ರೈತ ಬೆಳದ ಬೆಳಿ ಅಂದ ಕೂಡಲೇ ಚೌಕಾಸಿ ಮಾಡ್ತಾರ" ಎಂದು ಕಹಿ ಸತ್ಯ ಅರುಹಿದರು.
 
ಕೂಲಿ ಹುಡುಕಿ ಹುಬ್ಬಳ್ಳಿ ರೈಲು ನಿಲ್ದಾಣಕ್ಕೆ ಪಶುಪತಿಹಾಳದಿಂದ ಆಗಮಿಸಿದ್ದ ಹುಲಿಗೆಪ್ಪ ದಾಸರ ಹಾಗೂ ಶಿವಪ್ಪ ತೆಗ್ಗಿನಮನಿ ಹೇಳುತ್ತಾರೆ.." ಸರಕಾರದವರು ದಿನಕ್ಕ ೮ ತಾಸು ಚೆಂದಾಗಿ ಡಬಲ್ ಫೇಜ್ ಕರೆಂಟ್ ನಮ್ಮ ಹಳ್ಳಿಗೆ ಕೊಟ್ರ ಸಾಕು ನಾವು ಬದಕತೇವಿ; ಆದ್ರ ಕೊಡೂದುಲ್ಲ. ಈಗ ಬ್ಯಾಸಗಿ ಬ್ಯಾರೆ, ಹಂಗಾಗಿ ನಮ್ಮ ಊರಾಗಿನ ಮಸಾರಿ ಹೊಲಗೊಳಾಗ ಇಟ್ಟಂಗಿ ಭಟ್ಟಿ ಕೆಲಸ ಜೋರ ಐತಿ. ಇಟ್ಟಂಗಿಗೆ ಹೊಲದ ಮೇಲ್ಮಣ್ಣು ಬೇಕು..ಬಂಗಾರ ಮಣ್ಣಿನ (ಫಲವತ್ತಾದ) ಸವಕಳಿ ಅಲ್ದ.. ಇಟ್ಟಂಗಿ ಸುಡಾಕ ಸುತ್ತ ಗುಡ್ಡಾ ಬೋಳಿಸಿ ಕಟಗಿ ತಂದು ಭಟ್ಟಿಗೆ ಸುರುವುತಾರ. ಮನಿ ಮಂದೆಲ್ಲ ದುಡದ್ರ ನಾಲ್ಕ ದಮಡಿ..ಇಲ್ದಿದ್ರ ಮತ್ತ ಕೂಲಿ ತಪ್ಪಿದ್ದಲ್ಲ. ಹೊಲಾ ಇದ್ದಾವ್ರು ಹಂಗ ಮಾಡಿದ್ರ ಇರಲಾರದ ನಮ್ಮಂಥಾವರು ಕೂಲಿಗೆ ಹುಬ್ಬಳ್ಳಿಗೆ ಬರಬೇಕ್ರೀ. ಕೂಲಿ ಸಿಕ್ರ ಹಂಗಾತು ಇಲ್ಲಂದ್ರ ೨ ದಿನಕ್ಕಾಗುವಷ್ಟು ಬುತ್ತಿ ತಂದೇವ್ರೀ. ಇಲ್ಲೇ ಬಸ್ ಸ್ಟ್ಯಾಂಡು, ರೈಲ್ವೆ ಸ್ಟೇಷನ್ ಒಳಗ ರಾತ್ರಿ ಕಳದು ಮತ್ತ ಕೆಲಸ ಹುಡುಕತೇವ್ರೀ.." ಎಂದು ವಿವರಿಸಿದರು. 
ಅವರ ಕಷ್ಟ ಕೇಳಿ ನನ್ನ ಮುಖದಲ್ಲಿ ಚಿಂತೆಯ ಗೆರೆಗಳು ಮೂಡಿದವು. ಪರಿಸ್ಥಿತಿಯನ್ನು ತಿಳಿಗೊಳಿಸಲು ಹುಲಿಗೆಪ್ಪ "ಬರ್ರೀ ಸಾಹೇಬ್ರ ಬುತ್ತಿ ಊಟಾಮಾಡೋಣ.." ಎಂದು ನನ್ನನ್ನು ಆಹ್ವಾನಿಸಿದರು. ಅನ್ನದಾತನ ಹೃದಯ ಶ್ರೀಮಂತಿಕೆಗೆ ಕಣ್ಣು ಹನಿಗೂಡಿದವು.

Written by Harshavaedhan V Shilavantha

No comments:

Post a Comment