Search This Blog

Monday, October 19, 2015

ಬೇಳೆ ಹಾಗೂ ಅಪೌಷ್ಟಿಕತೆ


ಭಾರತದಲ್ಲಿ ಶೇಕಡ 40ರಷ್ಟು ಜನ ಸಸ್ಯಾಹಾರಿಗಳು, ಇದರಲ್ಲಿ ಶೇ 80ರಷ್ಟು ಜನರು ಬಡತನ ರೇಖೆಗಿಂತ ಕೆಳಗಿನವರು. ಕಿತ್ತು ತಿನ್ನುವ ಬಡತನದಲ್ಲಿ ಕೆ.ಜಿ.ಗೆ ₹ 180 ಕೊಟ್ಟು ಬೇಳೆಕಾಳು ಖರೀದಿಸಲು ಕಷ್ಟಸಾಧ್ಯ. ಹಾಗಾಗಿ ಮತ್ತೆ ಅಪೌಷ್ಟಿಕತೆ ಪೆಡಂಭೂತ ಕಾಡುತ್ತದೆ. ರಾಜ್ಯದಲ್ಲಿ ಈ ವರ್ಷ ಸರಾಸರಿಗಿಂತ ಶೇ 8ರಷ್ಟು ಮಳೆ ಕಡಿಮೆ ಆಗಿದೆ. ಆದರೆ ಬೇಳೆಕಾಳು ಬೆಳೆಯುವ ಪ್ರದೇಶದಲ್ಲಿ ಶೇ 33ರಷ್ಟು ಮಳೆ ಕಡಿಮೆ ಆಗಿದೆ. ಆದಕಾರಣ ಇಳುವರಿ ಕಡಿಮೆ ಆಗುವುದರಲ್ಲಿ ಅನುಮಾನವೇ ಇಲ್ಲ.
ಹೆಚ್ಚಾಗಿ ಬೇಳೆ ಕಾಳುಗಳನ್ನು ಮಳೆಯಾಶ್ರಿತ ಪ್ರದೇಶದಲ್ಲಿ ಬೆಳೆಯಲಾಗಿದೆ. ಬೇಳೆ ಕಾಳುಗಳಲ್ಲಿ ಪ್ರಮುಖವಾದವು ತೊಗರಿ, ಹೆಸರು, ಉದ್ದು, ಕಡಲೆ, ಅಲಸಂದಿ ಹಾಗೂ ಹುರುಳಿ. ಮಳೆಯಾಶ್ರಿತ ಬೆಳೆಗೆ ಸರಿಯಾದ ಕೃಷಿನೀತಿಗಳು ಇಲ್ಲ ಹಾಗೂ ಕೆಲ ಕಾರ್ಯಕ್ರಮಗಳು ಇದ್ದರೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಬೇಳೆ ಕಾಳುಗಳ ಕೊರತೆಗೆ ಹಸಿರು ಕ್ರಾಂತಿ ಯೋಜನೆ ಕೂಡ ಒಂದು ಕಾರಣ. ನಮ್ಮ ಬಹುತೇಕ ಕೃಷಿ ಸಂಶೋಧನೆಗಳು ನೀರಾವರಿ ಹಾಗೂ ಬಂಡವಾಳ ಆಧಾರಿತ ಬೆಳೆಗಳಿಗೆ ಸೀಮಿತವಾಗಿವೆ.
ಇದರಿಂದ ಹಸಿರುಕ್ರಾಂತಿ ಬೆಂಬಲಿತ ಬೆಳೆಗಳ ವಿಸ್ತೀರ್ಣ ಅಧಿಕವಾಯ್ತು. ರಾಜ್ಯದಲ್ಲಿ 1960–61ರ  ಸಮಯದಲ್ಲಿ ಭತ್ತದ ಬೆಳೆ ವಿಸ್ತೀರ್ಣ 10.28 ಲಕ್ಷ ಹೇಕ್ಟೇರ್, ಆದರೆ 2010–11ರಲ್ಲಿ 15.36 ಲಕ್ಷ ಹೆಕ್ಟೇರ್‌ಗೆ ಹಿಗ್ಗಿದೆ. ಅದೇ ರೀತಿ ಮೆಕ್ಕೆಜೋಳ ಬೆಳೆಯಲ್ಲಿ 1960–61ರಲ್ಲಿ 0.11 ಲಕ್ಷ ಹೆಕ್ಟೇರ್, 2010–11ರಲ್ಲಿ 12.87 ಲಕ್ಷ ಹೆಕ್ಟೇರ್ ಆಗಿದೆ. ಈ  ಅವಧಿಯಲ್ಲಿ  ಮೇಲೆ ಹೇಳಿದ ಎರಡು ಬೆಳೆಯಲ್ಲಿ 17.87 ಲಕ್ಷ ಹೆಕ್ಟೇರ್‌ನಷ್ಟು ವಿಸ್ತೀರ್ಣ ಹಿಗ್ಗಿದೆ. ಬಹುತೇಕವಾಗಿ ಹಿಗ್ಗಿದ  ಪ್ರದೇಶಗಳು ನಮ್ಮ ಮೂಲ ಬೆಳೆಗಳಾದ ಬೇಳೆಕಾಳುಗಳು ಹಾಗು ಸಿರಿಧಾನ್ಯಗಳು ಬೆಳೆಯುವ ಪ್ರದೇಶಗಳಾಗಿದ್ದವು. 
ಒಂದು ಕಡೆ ಮುಂದಿನ ಐದು ವರ್ಷಕ್ಕೆ ಬೇಕಾದ ಸಕ್ಕರೆ ದಾಸ್ತಾನು ಗೋದಾಮುಗಳಲ್ಲಿ ಕೊಳೆಯುತ್ತಿದೆ. ಇತ್ತ ಕಡೆ ನಮಗೆ ಬೇಕಾಗುವಷ್ಟು ಬೇಳೆಕಾಳುಗಳ ಇಳುವರಿ ಆಗುತ್ತಿಲ್ಲ. ಅಪೌಷ್ಟಿಕತೆಯ ಮೂಲ ಬಡತನ ಅಲ್ಲ. ಬದಲಾಗಿ ಕೆಟ್ಟ ಕೃಷಿ ನೀತಿಗಳು. ಬೆಳೆಗಳ ಅಸಮಾನತೆ ಹೋಗಲಾಡಿಸಬೇಕು. ನಮ್ಮ ಭವ್ಯ ಭಾರತ ಕಟ್ಟಲು ಬೇಕಾದ ಆಹಾರದ ಉತ್ಪಾದನೆ ಸಮಗ್ರವಾಗಿ ಸುಧಾರಿಸಬೇಕು. ಹಸಿರುಕ್ರಾಂತಿ ಬೆಂಬಲಿತ ಆಹಾರ ಬೆಳೆಗಳನ್ನು ಕಡಿಮೆ ಮಾಡಿ, ಬೇಳೆಕಾಳು ಹಾಗೂ ಸಿರಿಧಾನ್ಯಗಳ ಉತ್ಪಾದಕತೆ ಹೆಚ್ಚಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕೃಷಿ ನೀತಿಗಳನ್ನು ರೂಪಿಸಬೇಕು.  

No comments:

Post a Comment