Search This Blog

Saturday, January 7, 2012

ಡಿಡಿಟಿಯ ಪುನರಾಗಮನ!?


ಕಳೆದ ಐದು ವರ್ಷಗಳ ಹಿಂದೆ ಇಡೀ ಭೂಖಂಡದಿಂದಲೇ ಉಚ್ಛಾಟನೆಗೊಂಡಿದ್ದ ಡಿಡಿಟಿ ಎನ್ನುವ ಭಯಂಕರ ಕೀಟನಾಶಕ ಇಂದು ಮನೆಯೊಳಗೇ ನುಗ್ಗಲು ತಯಾರಾಗಿದೆ.  ಕಾರಣ ಮಲೇರಿಯಾ!!!
ಮೊದಲು ಸ್ವಲ್ಪ ಡಿಡಿಟಿಯ ಇತಿಹಾಸ ನೋಡೋಣ.
ಇಸವಿ ೧೯೩೯ ಡೈಕ್ಲೋರೋ ಡೈಫಿನೈಲ್ ಟ್ರೈಕ್ಲೋರೋ ಈಥೇನ್ (DDT)ಯನ್ನು ಸ್ವಿಸ್ ರಾಸಾಯನಶಾಸ್ತ್ರಜ್ಞ ಪಾಲ್ ಮುಲ್ಲರ್ ಕಂಡುಹಿಡಿದನು.  ಇಸವಿ ೧೯೪೨-೪೩ರಲ್ಲಿ ಇದನ್ನು ಬೆಳೆಗಳಿಗೆ ಬಳಸಲಾಯಿತು.  ಎರಡನೇ ವಿಶ್ವಯುದ್ಧದಲ್ಲಿ ಹೇನುನಾಶಕವಾಗಿಯೂ ಬಳಸಲಾಯಿತು.  ಧಾನ್ಯಗಳನ್ನು ನಾಶ ಮಾಡುವ ಕೀಟಗಳು ಹಾಗೂ ಕಾಯಿಲೆಗಳಿಗೆ ಕಾರಣವಾಗುವ ಕೀಟಗಳಿಗೆಲ್ಲಾ ಇದೊಂದು ಪರಿಣಾಮಕಾರಿ ನಾಶಕ ಎಂದು ವಿಶ್ವದಾದ್ಯಂತ ಪ್ರಚಾರ ಪಡೆಯಿತು.  ಇಸವಿ ೧೯೪೮ರಲ್ಲಿ ಮುಲ್ಲರ್‌ಗೆ ನೋಬಲ್ ಬಹುಮಾನ ಬಂತು.
ಅತ್ಯಂತ ವಿಷಯುಕ್ತವಾದ ಡಿಡಿಟಿಯಿಂದ ಕೃಷಿಕೀಟ, ಕಾಡಿನ ಕೀಟಗಳೊಂದೇ ಅಲ್ಲ, ಸೊಳ್ಳೆಗಳ ನಿಯಂತ್ರಣವೂ ಸಾಧ್ಯ ಎನ್ನುವುದನ್ನು ಮೊದಲು ಯುರೋಪ್, ಆಮೇಲೆ ಅಮೇರಿಕಾ ಕಂಡುಕೊಂಡಿತು.
ಇದರ ಹಿಂದೆ ಕ್ಲೋರ್‌ಡೆನ್, ಎಂಡ್ರಿನ್, ಆಲ್ಪ್ರಿನ್… ಹೀಗೆ ಅನೇಕ ಕೀಟನಾಶಕಗಳು…ಅಲ್ಲ…ವಿಷಗಳು ಬಂದವು.  ಈ ರೀತಿಯ ರಾಸಾಯನಿಕಗಳ ಉತ್ಪಾದನೆ ವಿಶ್ವದಲ್ಲಿ ೭ ಮಿಲಿಯನ್ ಟನ್‌ಗಳು ಎಂಬುದು ಒಂದು ಕನಿಷ್ಠ ಅಂದಾಜು ಮಾತ್ರ.
ಇಸವಿ ೧೯೪೬ರಲ್ಲಿಯೇ ಡಿಡಿಟಿಗೆ ವಿರೋಧವೂ ಬಂತು.  ಇದರಲ್ಲಿರುವ ವಿಷ ಶತ್ರುಕೀಟಗಳಿಗೆ ಮಾತ್ರವಲ್ಲ, ಇಡೀ ಪರಿಸರಕ್ಕೆ ಅಪಾಯಕಾರಿ ಎನ್ನುವ ವಿಚಾರ ವಿರೋಧಿಗಳದು.  ಆದರೆ ಡಿಡಿಟಿಯ ಜನಪ್ರಿಯತೆಯ ಮುಂದೆ ವಿರೋಧಿಗಳ ಕೂಗು ಕ್ಷೀಣವಾಗಿತ್ತು.
೧೯೫೦ರ ಹೊತ್ತಿಗೆ ಸಂಶೋಧನಾ ಕಾರ್ಯ ಹೆಚ್ಚಿತು.  ಸುಮಾರು ೧೨ ವರ್ಷಗಳ ನಂತರ ಮರದ ತೊಗಟೆಗಳಲ್ಲಿ ಡಿಡಿಟಿ ಮಿತಿಮೀರಿದ ಪ್ರಮಾಣದಲ್ಲಿರುವುದು ಪತ್ತೆಯಾಯಿತು. ಅದೇ ಸಮಯದಲ್ಲಿ ಫ್ಲೋರಿಡಾದ ಎವರ್‌ಗ್ಲೇಡ್‌ನಲ್ಲಿನ ಮೊಸಳೆಗಳು ಅಂಗವಿಕಲವಾಗಿ ಜನಿಸತೊಡಗಿದವು.  ವಿಶಾಲ ಹುಲ್ಲುಗಾವಲಿನ ಪಕ್ಕದ ಸರೋವರದ ನೀರು ಪೂರ್ತಿ ವಿಷ ರಾಸಾಯನಿಕಗಳ ಸರೋವರವಾಗಿತ್ತು.  ಉತ್ತರ ಅಮೇರಿಕಾ ಹಾಗೂ ಭಾರತದಲ್ಲಿ ಹದ್ದುಗಳ ವಂಶ ನಾಶವಾಗತೊಡಗಿತು.  ಹದ್ದುಗಳು ಸಸ್ಯಾಹಾರಿಗಳಲ್ಲ.  ಆದರೆ ಈ ಕೀಟನಾಶಕದೊಂದಿಗೆ ಜೀವಿಸಿದ್ದ ಕಪ್ಪೆ, ಕೀಟ, ಕೋಳಿಗಳನ್ನು, ಸತ್ತಪ್ರಾಣಿಗಳನ್ನು ತಿನ್ನುತ್ತಿದ್ದವು.  ಇವುಗಳೊಳಗಿದ್ದ ಡಿಡಿಟಿಯು ಹದ್ದಿನ ಮೊಟ್ಟೆಗಳ ಕವಚಗಳನ್ನು ಶಿಥಿಲಗೊಳಿಸುತ್ತಿತ್ತು.  ಅಂದರೆ ಡಿಡಿಟಿ ಮೂರು ತಡೆಗಳನ್ನು ದಾಟಿಯೂ ಉಳಿಯುವಷ್ಟು ತೀವ್ರತೆ ಹೊಂದಿತ್ತು.  ಅದೇ ರೀತಿ ಎದೆಹಾಲು ಕುಡಿಯುತ್ತಿರುವ ಮಗುವಿನಲ್ಲೂ ಡಿಡಿಟಿಯ ಅಂಶ ಪತ್ತೆಯಾಯಿತು.
ಇದೇ ಸಮಯದಲ್ಲಿ ಗ್ರೇಟ್ ಬ್ರಿಟನ್ ಹಾಗು ಜಪಾನ್‌ಗಳಲ್ಲಿ ರಾಸಾಯನಿಕ ಕೀಟನಾಶಕಗಳ ವಿರುದ್ಧ ದೊಡ್ಡ ಆಂದೋಲನ ನಡೆಯಿತು.  ಜಪಾನ್‌ನ ಮೀನಮಾಟದಲ್ಲಿ ಹುಟ್ಟುವಾಗಿನ ಅಂಗವೈಕಲ್ಯದಿಂದ ಹಿಡಿದು ಯಾವುದೇ ವಯಸ್ಸಿನಲ್ಲೂ ಇದ್ದಕ್ಕಿದ್ದಂತೆ ನರದೌರ್ಬಲ್ಯ ಉಂಟಾಗುವಿಕೆ ದಾಖಲಾಯಿತು.
ಡಿಡಿಟಿ ಹಾಗೂ ಇತರ ರಾಸಾಯನಿಕ ವಿಷಗಳನ್ನು ಮನೆಯಲ್ಲಿಟ್ಟುಕೊಂಡರೂ ಸಾಕು, ಆತ್ಮಹತ್ಯಾ ಭಾವನೆಗಳು ಹೆಚ್ಚುತ್ತದೆ ಎಂಬುದೂ ಸಹ ಸಾಬೀತಾಯಿತು.  ಜೊತೆಗೆ ನಿರಂತರ ಸಹಚರ್ಯೆಯಿಂದ ಲ್ಯುಕೇಮಿಯಾ, ಮೈಲೋಮಾ, ಲಿಂಫೋಮಾ ಕ್ಯಾನ್ಸರ್ ಪ್ರಕರಣ ರಾಶಿ ರಾಶಿ ಹೊರಹೊಮ್ಮಿದವು.  ಹೃದಯಾಘಾತ ಹೆಚ್ಚಿತು.
ದೊಡ್ಡ ಜೀವಿಗಳು ಬಲಿಯಾಗುವುದು ಹೆಚ್ಚಿದಷ್ಟೂ ಕೀಟಗಳು ಪ್ರತಿರೋಧ ಬೆಳೆಸಿಕೊಳ್ಳತೊಡಗಿದವು.  ೧,೦೦೦ ರೀತಿಯ ಕೀಟಗಳು ಡಿಡಿಟಿಯನ್ನು ಇಂದು ಸುಲಭವಾಗಿ ಜೀರ್ಣಿಸಿಕೊಳ್ಳುತ್ತವೆ.  ಅವುಗಳ ವಂಶವಾಹಿಯಲ್ಲೇ ಪ್ರತಿರೋಧ ಬೆಳೆದಿದೆ ಎನ್ನುತ್ತಾರೆ ವಂಶವಾಹಿ ತಂತ್ರಜ್ಞರು.
ಮಲೇರಿಯಾ V/s ಡಿಡಿಟಿ
ಪರ-ವಿರೋಧಗಳ ಗದ್ದಲ ನಡೆಯುತ್ತಿರುವಾಗಲೇ ಜೀನಸ್ ಅನಾಫಿಲಿಸ್ ಕುಟುಂಬಕ್ಕೆ ಸೇರಿದ ೬೦ ಜಾತಿಯ ಸೊಳ್ಳೆಗಳು ಡಿಡಿಟಿಯಿಂದ ನಿರ್ವಂಶವಾಗತೊಡಗಿದವು.  ಎರಡನೇ ಮಹಾಯುದ್ಧದ ನಂತರ ವಿಶ್ವವನ್ನೇ ಆತಂಕದಿಂದ ಗಡಗಡ ನಡುಗಿಸಿದ್ದ ಮಲೇರಿಯಾವು ಡಿಡಿಟಿಯಿಂದ ನಿಯಂತ್ರಣಕ್ಕೆ ಬಂದಿದ್ದು ಎಲ್ಲರಿಗೂ ಸೋಜಿಗವನ್ನುಂಟುಮಾಡಿತ್ತು.
ವಿಷಯದ ಆಳಕ್ಕಿಳಿದಾಗ ಮಲೇರಿಯಾಕ್ಕೆ ಕಾರಣವಾಗುವ ಪ್ಲಾಸ್ಮೋಡಿಯಂ ಎನ್ನುವ ಭಯಂಕರ ಪರಾವಲಂಬಿ ಜೀವಿ ಎದುರಿಗೆ ಬಂದಿತು.  ಇದು ಕೊಳಚೆ ನೀರಿನಲ್ಲಿರುವ ಸೂಕ್ಷ್ಮಜೀವಿ.  ಏನೆಲ್ಲಾ ರಾಸಾಯನಿಕ ವಿಷಗಳಿಗೆ ಪ್ರತಿರೋಧ ಹೊಂದಿರುವ ಕ್ರಿಮಿ.  ಆದರೆ ಇದು ಮಾನವನ ದೇಹದೊಳಗೆ ತಾನಾಗಿಯೇ ಪ್ರವೇಶ ಮಾಡಲು ಸಾಧ್ಯವಿಲ್ಲ.  ಮಾಧ್ಯಮವಾಗಿ ಅನಾಫಿಲಿಸ್ ಕುಟುಂಬದ ಸೊಳ್ಳೆಗಳೇ ಬೇಕು ಹಾಗೂ ಅದೊಂದೇ ಮಾರ್ಗ ಕೂಡ.
ಕೊಳಚೆಯಲ್ಲೇ ಹುಟ್ಟುವ ಅನಾಫಿಲಿಸ್ ಸೊಳ್ಳೆಗಳೊಳಗೆ ಫ್ಲಾಸ್ಮೋಡಿಯಂ ಸೇರಿಕೊಂಡು ತನ್ನ ಜೀವನಚಕ್ರ ನಡೆಸುತ್ತದೆ.  ಅನಾಫಿಲಿಸ್ ತನ್ನ ಜೀವನಚಕ್ರ ಪೂರೈಸಲು ಮನುಷ್ಯನ (ಪ್ರಾಣಿಗಳ) ರಕ್ತಕ್ಕೋಸ್ಕರ ಕಚ್ಚಿದಾಗ ಫ್ಲಾಸ್ಮೋಡಿಯಂ ಮನುಷ್ಯನ ದೇಹದೊಳಗೆ ತೂರಿಕೊಳ್ಳುತ್ತದೆ.  ಹಾಗಂತ ಫ್ಲಾಸ್ಮೋಡಿಯಂ ಅನಾಫಿಲಿಸ್‌ಗೆ ಅಪಾಯಕಾರಿಯಲ್ಲ.
ಪ್ರತಿವರ್ಷ ವಿಶ್ವದಲ್ಲಿ ೫೦ ಕೋಟಿ ಜನರು ಮಲೇರಿಯಾಕ್ಕೆ ತುತ್ತಾದರೆ ೧೦ ಲಕ್ಷ ಜನ ಮಲೇರಿಯಾದಿಂದ ಸಾಯುತ್ತಾರೆ. ಅಷ್ಟೇ ಅಲ್ಲ, ಪ್ರತಿಸಾರಿಯೂ ಮಲೇರಿಯಾಕ್ಕೆ ಹೊಸ ರಾಸಾಯನಿಕ ಸಂಯುಕ್ತಗಳೇ ನಿಯಂತ್ರಿಸಲು ಬೇಕು.  ಮಲೇರಿಯಾವನ್ನು ಇಂದಿಗೂ ಮೊದಲ ಹಂತದಲ್ಲಿದ್ದಾಗ ಮಾತ್ರ ನಿಯಂತ್ರಿಸಬಹುದಾಗಿದೆ.
ಆಫ್ರಿಕಾ, ಬಾರತ, ದಕ್ಷಿಣಾ ಅಮೇರಿಕಾ ಮುಂತಾದ ಉಷ್ಣವಲಯವಿರುವ ಪ್ರದೇಶಗಳಲ್ಲಿ ಮಲೇರಿಯಾಕ್ಕೆ ಹಸುಮಕ್ಕಳೂ ಬಲಿಯಾಗುತ್ತಾರೆ.
ಇಸವಿ ೧೯೫೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು [WHO], ಮಲೇರಿಯಾವು ಡಿಡಿಟಿಗಿಂತಲೂ ೧,೦೦೦ ಪಟ್ಟು ಹೆಚ್ಚು ಭೀಕರ. ಅದಕ್ಕಾಗಿ ಡಿಡಿಟಿಯು ವಿಷವಾದರೂ ಅತ್ತ್ಯುತ್ತಮ ಸೊಳ್ಳೆನಿಯಂತ್ರಕ. ಈ ಮೂಲಕ ಮಲೇರಿಯಾ ನಿಯಂತ್ರಕವಾಗಿದೆ ಎಂದು ಹೇಳಿಕೆ ನೀಡಿತು. ಅದಕ್ಕಾಗಿ ಮಲೇರಿಯಾ ನಿಯಂತ್ರಣದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಡಿಡಿಟಿಯನ್ನು ಬಳಸಬಹುದು ಎಂದಿತು. ಆದರೆ ಡಿಡಿಟಿಯನ್ನು ೮೫ ದೇಶಗಳು ಆಗಲೇ ಹೊರಹಾಕಿದ್ದವು.  ಅದನ್ನು ಕೊಂಚ ಕೂಡ ಒಳಸೇರಿಸಲು ಅವು ಒಪ್ಪಲಿಲ್ಲ. ಆದರೆ ಬಡದೇಶಗಳಲ್ಲಿ ಸುಲಭ ಬೆಲೆ, ಸುಲಭ ಮಾರ್ಗದಲ್ಲಿ ಸೊಳ್ಳೆನಾಶಕ್ಕೆ ಡಿಡಿಟಿಯೊಂದೇ ಮೂಲವಸ್ತುವಾಗಿತ್ತು.
ಇಸವಿ ೧೯೯೩ರಲ್ಲಿ WHO ಮತ್ತೆ ತನ್ನ ನೀತಿಯನ್ನು ಮರು ಪರಿಶೀಲಿಸಿತು.  ಕೇವಲ ಒಳಾಂಗಣಕ್ಕೆ ಮಾತ್ರ ಡಿಡಿಟಿ ಬಳಸಿ ಎಂದು ತಿಳಿಸಿತು.  ಇಸವಿ ೧೯೯೮ರಲ್ಲಿ ಮಲೇರಿಯಾವನ್ನು ಹಿಮ್ಮೆಟ್ಟಿಸಿ ಎಂದು ನಡೆದ ಅಭಿಯಾನದಲ್ಲೂ ಅತ್ಯಂತ ನಿಯಂತ್ರಿತ ರೀತಿಯಲ್ಲಿ ಡಿಡಿಟಿ ಬಳಸಬಹುದೆಂದೇ ಹೇಳಲಾಗಿತ್ತು.  ಆದರೆ ಅದರೊಂದಿಗೆ ಇನ್ನಿತರ ಉಪಾಯಗಳನ್ನು ಸಂಶೋಧನೆ ಮಾಡಲಾಗಿತ್ತು.
ಇಸವಿ ೨೦೦೧ರಲ್ಲಿ ಸ್ಟಾಕ್‌ಹೋಂನಲ್ಲಿ ನಡೆದ ವಿಶ್ವ ಪರಿಸರ ಸಮಾವೇಶದಲ್ಲಿ ಡಿಡಿಟಿಯೊಂದಿಗೆ ಇತರ ೧೨ ರಾಸಾಯನಿಕ ವಿಷಗಳನ್ನು ಉತ್ಪಾದನೆ ಮಾಡಲೇಬಾರದು ಎನ್ನುವ ನಿರ್ಣಯ ಮಾಡಲಾಯಿತು.
ವರ್ತಮಾನದ ಪರಿಸ್ಥಿತಿ
ಇಸವಿ ೨೦೦೬ರ ಮೇ ೨ರಂದು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಎನ್ನುವ ಅಂತಾರಾಷ್ಟ್ರೀಯ ಅಭಿವೃದ್ಧಿನಿರತ ಸಂಸ್ಥೆಯೊಂದರ ಸಲಹೆಯಂತೆ WHO ಮತ್ತೆ ಡಿಡಿಟಿಯನ್ನು ನಿಯಂತ್ರಿತ ಪ್ರಮಾಣದಲ್ಲಿ ಮನೆಯೊಳಗೆ ಬಳಸಿ ಮಲೇರಿಯಾ ತಡೆಯಿರಿ ಎಂದು ಅನುಮತಿ ನೀಡಿದೆ.
ಇದಕ್ಕೆ ಪುರಾವೆಗಳನ್ನೂ ನೀಡಿದೆ. ಇಸವಿ ೧೯೪೯ರಲ್ಲಿ ಯುನೈಟೆಡ್ ಸ್ಟೇಟ್ಸ್ ಮಲೇರಿಯಾದಿಂದ ಮುಕ್ತವಾಗಲು ಕಾರಣ ಡಿಡಿಟಿ.  ಅನಂತರ ಇಸವಿ ೧೯೬೯ರವರೆಗೆ ಯುರೋಪ್, ಭಾರತ, ದಕ್ಷಿಣ ಅಮೇರಿಕಾ, ಆಫ್ರಿಕಾ ಮುಂತಾದ ದೇಶಗಳು ಮಲೇರಿಯಾದಿಂದ ಭಾಗಶಃ ಮುಕ್ತರಾಗಲು ಕಾರಣ ಡಿಡಿಟಿ.  ಇದರೊಂಡಿಗೆ WHO ತಾನೇ ಕ್ಷೇತ್ರಕ್ಕಿಳಿದು ಪರೀಕ್ಷೆ ನಡೆಸಿತು.  ದಕ್ಷಿಣಪೂರ್ವ ದೇಶಗಳಾದ ಯೆಮನ್, ಸೂಡಾನ್ ಮುಂತಾದ ದೇಶಗಳಲ್ಲಿ ಆರ್ಗ್ಯಾನೋ ಕ್ಲೋರಿನ್, ಫೈರಿಥ್ರಾಯಿಡ್ಸ್, ಆರ್ಗ್ಯಾನೋ ಪಾಸ್ಫೇಟ್ ಹಾಗೂ ಕಾರ್ಬಮೇಟ್ಸ್ ಮುಂತಾದ ರಾಸಾಯನಿಕ ಸಂಯುಕ್ತಗಳಿರುವ ಕೀಟನಾಶಕಗಳನ್ನು ಬಳಸಲಾಯಿತು.  ಆದರೆ ಇದೆಲ್ಲದಕ್ಕಿಂತಲೂ ಡಿಡಿಟಿಯೇ ಅತ್ಯಂತ ಕಡಿಮೆ ವಿಷರಾಸಾಯನಿಕ ಎನ್ನುವ ಅಭಿಪ್ರಾಯ WHO ವಿಶ್ವ ಮಲೇರಿಯಾ ಕಾರ್ಯಕ್ರಮ ನಿರ್ದೇಶಕ ಆರಾಟಕೊಚಿಯವರದು.
ಕೃಷಿಗೆ ಮಿತಿಮೀರಿ ಬಳಸಿದ ಪರಿಣಾಮ ಏನೆಲ್ಲಾ ಅನಾಹುತಗಳಿಗೆ ಕಾರಣವಾಯಿತೇ ವಿನಃ ನಿಯಂತ್ರಿತ ಪ್ರಮಾಣದ ಬಳಕೆಯಿಂದಲ್ಲ ಎನ್ನುವ ವಾದವೂ ಕೊಚಿಯವರದು.
ವರ್ಷದಲ್ಲಿ ಅನೇಕ ಸಾರಿ ಬೆಳೆ ರಕ್ಷಣೆಗೋಸ್ಕರ ಹೆಲಿಕಾಪ್ಟರ್ ವಿಮಾನ ಬಳಸಿ ವ್ಯಾಪಕವಾಗಿ ಸಿಂಪಡಿಸಿದ ಪರಿಣಾಮ ಭೀಕರವಾಗಿದೆ.  ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಲಿವರ್ ಕ್ಯಾನ್ಸರ್, ಎದೆ ಕ್ಯಾನ್ಸರ್, ನರದೌರ್ಬಲ್ಯ, ತಾಯಿಹಾಲಿನಲ್ಲಿ ಹಾಗೂ ರಕ್ತದಲ್ಲಿರುವ ಡಿಡಿಟಿ ಅಂಶ, ಅವಧಿಗೆ ಮುನ್ನವೇ ಜನನ, ಎದೆಹಾಲಿಲ್ಲದಿರುವುದು ಹೀಗೆ ಏನೆಲ್ಲಾ ಕಾರಣಗಳಿಗೆ ಡಿಡಿಟಿಯೇ ಮೂಲ ಎಂದು ಫಲಿತಾಂಶ ಬಂದಿತ್ತು. ಆದರೆ WHO ಅದನ್ನು ನಿರಾಕರಿಸಿತು.  ಕಾರಣ ಅಲ್ಲೂ ಸಹ ಇಸವಿ ೧೯೯೫ರವರೆಗೆ ಕೃಷಿಗಾಗಿ ವಿಷ ಸಿಂಪಡಣೆ ಟನ್ ಲೆಕ್ಕದಲ್ಲಿತ್ತು.  ಅದಕ್ಕಾಗಿ ಈ ಫಲಿತಾಂಶ ಬಂದಿದೆ ಎನ್ನುವ ವಿವರಣೆ WHOದು.
ಡಿಡಿಟಿಯನ್ನು ಸೊಳ್ಳೆಗಳು ಕುಳಿತುಕೊಳ್ಳುವ ಗೋಡೆಗಳ ಮೇಲೆ ಒಂದು ಚದರಕ್ಕೆ ಎರಡು ಗ್ರಾಂನಷ್ಟು ಮಾತ್ರ ಸಿಂಪಡಿಸಿದರೂ ಸಾಕು.   ಮಲೇರಿಯಾವನ್ನು ಮನೆಯಿಂದ ಹೊರಗಟ್ಟಬಹುದು.  ಅದೇ ರೀತಿ ಚರಂಡಿ, ಕೊಳಚೆ ಪ್ರದೇಶಗಳಿಗೂ ಅತ್ಯಂತ ಕಡಿಮೆ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಬಹುದು ಎನ್ನುವ ಸಮರ್ಥನೆ WHOದ ಮಲೇರಿಯಾ ನಿಯಂತ್ರಣ ವಿಭಾಗದ ಸದಸ್ಯರದು.
ಆದರೆ ಡಿಡಿಟಿಯ ವಿರುದ್ಧ ಅತ್ಯಂತ ಹೆಚ್ಚು ವಿರೋಧದ ದನಿ ಮಾಡಿದ್ದು ದಕ್ಷಿಣ ಆಫ್ರಿಕಾದ ಅಂತಾರಾಷ್ಟ್ರೀಯ ಅಂಟುರೋಗ ನಿವಾರಣೆ ಅಧ್ಯಯನ ಸಂಸ್ಥೆ.  ಸಂಸ್ಥೆಯ ಮುಖ್ಯಸ್ಥರಾದ ಮೌರಿನ್ ಕೋಜಿಯವರ ಪ್ರಕಾರ ಇಂಟೆಗ್ರೇಟೆಡ್ ವೆಕ್ಟಾರ್ ಮ್ಯಾನೇಜ್‌ಮೆಂಟ್ ವಿಧಾನ [IVM] ಮಾತ್ರ ಹೆಚ್ಚು ಪರಿಣಾಮಕಾರಿ ಎನ್ನುತ್ತಾರೆ.
ಮಲೇರಿಯಾ ಕೇವಲ ಡಿಡಿಟಿಯಿಂದ ಮಾತ್ರ ಹೋಗುತ್ತದೆ ಎಂದು ಭಾವಿಸದೇ ಬೇರೆ ಬೇರೆ ರೀತಿಯಲ್ಲಿ ರೋಗನಿವಾರಣೆಗೆ ಪ್ರಯತ್ನಿಸುವಿಕೆಯೇ ಐವಿಎಮ್ ವಿಧಾನ.  ಇದೊಂದು ಶಿಕ್ಷಣ ಪದ್ಧತಿ.  ಮನೆಯ ಸುತ್ತಮುತ್ತಲಿನ ಸೊಳ್ಳೆಗಳ ನಿವಾರಣೆ ಮಾಡುವ ರೀತಿಗಳನ್ನು ಕಲಿಯುವಿಕೆಯೇ ಆಗಿದೆ.
ನೀರು ನಿಲ್ಲದಂತೆ ಮಾಡುವುದು, ಶೌಚಾಲಯ ಸ್ಥಳಗಳನ್ನು ಮುಚ್ಚುವುದು, ಜಾಲರಿ ಪರದೆ ಬಳಸುವುದು, ಸ್ಥಳೀಯ ಸೊಳ್ಳೆನಾಶಕ ಸಸ್ಯಗಳ ಹೊಗೆ ಹಾಕುವುದು, ಸೊಳ್ಳೆಭಕ್ಷಕ ಕೀಟಗಳ ಪ್ರಯೋಗ, ಸೊಳ್ಳೆಭಕ್ಷಕ ಹಕ್ಕಿ ಗುಬ್ಬಿಗಳ ಉಪಯೋಗ ಪಡೆಯುವಿಕೆ, ಮೀನುಗಳ ಬಳಕೆ, ಕೊಟ್ಟಕೊನೆಯದಾಗಿ ಕೀಟನಾಶಕಗಳ ಬಳಕೆ.
ಆಫ್ರಿಕಾದಲ್ಲಿ ಕ್ಲೋರಿನ್‌ಗಳ ಬದಲು ಪೈರಿಥ್ರಿನ್‌ಗಳನ್ನು ಬಳಸಿ ಶೆಕಡಾ ೩೦ರಷ್ಟು ರೋಗ ನಿರ್ಮೂಲನೆ ಮಾಡಲಾಗಿತ್ತು.  ಆದರೆ ಈಗ ಸೊಳ್ಳೆಗಳು ಅವಕ್ಕೂ ಪ್ರತಿರೋಧ ಬೆಳೆಸಿಕೊಂಡವು.  ಹಾಗಾಗಿ ಸಸ್ಯಜನ್ಯ ಕೀಟನಾಶಕಗಳನ್ನೇ ಅವಲಂಬಿಸಲಾಗುತ್ತಿದೆ.
ವಿಶ್ವದಲ್ಲಿ ಮಲೇರಿಯಾ ಇರುವ ಭೂಪ್ರದೇಶವು ವ್ಯಾಪಕವಾಗಿರುವ ಕಾರಣ ವಿಭಿನ್ನ ಪರಿಸರವಿದೆ.  ಒಂದು ಕಡೆ ಮಾಡಿದ ಪ್ರಯೋಗ ಮತ್ತೊಂದೆಡೆ ಪರಿಣಾಮಕಾರಿಯಾಗುವ ಸಾಧ್ಯತೆ ಅತಿ ಕಡಿಮೆ.  ಅಷ್ಟೇ ಅಲ್ಲ, ಇದು ಕೇವಲ ಭೌಗೋಳಿಕ, ಪಾರಿಸರಿಕ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ.  ಸಾಮಾಜಿಕವಾಗಿಯೂ ವಿಪರೀತ ಬೆಂಬಲ ಬೇಕು.  ಜೊತೆಗೆ ರಾಜಕೀಯ ಬೆಂಬಲ ಇರಲೇಬೇಕು.  ಇವೆಲ್ಲಾ ಸೇರಿದಾಗ ಮಾತ್ರ ಎವಿಎಮ್ ಯಶಸ್ವಿಯಾಗುತ್ತದೆ.
ಹುನ್ನಾರ
ಡಿಡಿಟಿಯ ಬಳಕೆಯ ಬಗ್ಗೆ WHO ಸಹಮತ ನೀಡಿರುವುದು ಅಮೇರಿಕಾದ ಹುನ್ನಾರ ಎಂದು ಆಫ್ರಿಕಾ ಈಗಾಗಲೇ ಹೇಳಿಕೆ ನೀಡಿದೆ.  ಅವರಲ್ಲಿ ಖರ್ಚಾಗದೇ ಉಳಿದ ಡಿಡಿಟಿಯನ್ನು ತುಂಬಲು ನಮ್ಮ ಹಿಂದುಳಿದ ದೇಶಗಳು ಕಸದ ತೊಟ್ಟಿಯಾಗಬೇಕೆ ಎನ್ನುವ ಪ್ರಶ್ನೆಯೂ ಅವರದು.  ಅದಕ್ಕೆ ಪೂರಕವೆಂಬಂತೆ ವಿಶ್ವಬ್ಯಾಂಕಿನ ಮನವೊಲಿಸುತ್ತಿದೆ.  ಒಟ್ಟಾರೆ ಡಿಡಿಟಿಯ ಬೆಲೆ ದಿನೇ ದಿನೇ ಏರುತ್ತಿರುವುದು ನೋಡಿದರೆ ಇದರ ಲಾಬಿ ಪತ್ರಿಕೆಗಳಲ್ಲಿ ಬರುವ ದಿನ ದೂರವಿಲ್ಲ.
ಶುಕ್ರವಾರ ೨೮-೯-೨೦೦೬ರ ಪ್ರಜಾವಾಣಿಯಲ್ಲಿ ದೇವದುರ್ಗ ತಾಲ್ಲೂಕಿನಲ್ಲಿ ೮೦ ಜನರಿಗೆ ಮಲೇರಿಯಾ ಆಗಿದ್ದು ೧೦ ಜನ ತೀರಿಕೊಂಡಿರುವುದು ಅಧಿಕೃತ ವರದಿಯಾಗಿದೆ.  ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ಔಷಧಗಳೇ ಇಲ್ಲದೇ ಇರುವ ಕಾರಣ ಇನ್ನಷ್ಟು ಸಾವನ್ನು ನಿರೀಕ್ಷಿಸಲಾಗಿದೆ.
ಇದೇ ಮಲೇರಿಯಾದ ವಿಪರ್ಯಾಸ. ಮಲೇರಿಯಾ ಪತ್ತೆಯಾಗಿ ನೂರಾರು ವರ್ಷಗಳೂ ಕಳೆದರೂ ಮಲೇರಿಯಾ ವಿರುದ್ಧ ಲಸಿಕೆ ಸಿದ್ಧವಾಗಿಲ್ಲ.  ಫ್ಲಾಸ್ಮೋಡಿಯಂ ಇಂದಿಗೂ ನಿಗೂಢ ಕ್ರಿಮಿ.  ಇದರ ಜೀವನಶೈಲಿ, ವಂಶವಾಹಿಗುಣ, ಆಕ್ರಮಣದ ರೀತಿ ಒಂದೂ ಪತ್ತೆಯಾಗಿಲ್ಲ.  ಅದಿರಲಿ ನಮಗೆ ಸೊಳ್ಳೆಗಳ ಬಗ್ಗೆಯೇ ಗೊತ್ತಿಲ್ಲ.  ಸೊಳ್ಳೆಗಳ ಸಂತಾನಭಿವೃದ್ಧಿ, ಕೀಟಸಂಖ್ಯಾ ನೀತಿ, ಆಹಾರಮೂಲಗಳು ಬೆಳವಣಿಗೆಯ ಹಂತಗಳು, ಪ್ಲಾಸ್ಮೋಡಿಯಂ ಸೊಳ್ಳೆಗಳೊಳಗೆ ಸೇರುವ ಸಮಯ, ವಿಧಾನ, ಸೇರಿದ ಮೇಲಿನ ಸ್ಥಿತಿ, ಸೊಳ್ಳೆಗಳಿಗಿರುವ ಮಾನವನ ಆಕರ್ಷಣೆ ಏನೆಲ್ಲಾ ವಿಷಯಗಳ ಬಗ್ಗೆ ನಮಗೆ ತಿಳಿದಿರುವುದು ಬಹಳ ಕಡಿಮೆ.  ಇದೇ ಮಲೇರಿಯಾಕ್ಕೆ, ಡಿಡಿಟಿಗೆ ಇನ್ನಷ್ಟು ಬೆಳೆಯಲು ಸಹಕಾರಿಯಾಗಿದೆ. ಹಾರ್ವರ್ಡ್‌ನ ಜೀವಶಾಸ್ತ್ರಜ್ಞ ಎಲ್ಲಿಸ್ ಮೆಕೆಂಜಿಯವರು ಅನಾಫಿಲಿಸ್ ಗಾಂಬೀಯೇ ಬಗ್ಗೆ ಸಂಶೋಧನೆ ಮಾಡುತ್ತಾ ಅದರ ವಿವರಗಳನ್ನೆಲ್ಲಾ ದಾಖಲಿಸಿದರೆ ಒಂದು ವಿಶ್ವಕೋಶವಾಗುತ್ತದೆ ಎಂದಿದ್ದರು.
ಬಿಲ್‌ಗೇಟ್ಸ್ ಹಾಗೂ ಮೆಲಿಂಡಾ ಗೇಟ್ಸ್ ಪ್ರತಿಷ್ಠಾನವು ಮೂರು ವರ್ಷಗಳ ಹಿಂದೆ ಮಲೇರಿಯಾ ಲಸಿಕೆಯ ಸಂಶೋಧನೆಗೆ ೫೦ ಮಿಲಿಯ ಡಾಲರ್‍ಸ್‌ಗಳನ್ನು ತೊಡಗಿಸಿದೆ. ಆದರೂ ಮಲೇರಿಯಾ ನಿವಾರಣೆಗೆ ಬೇರೇನೂ ಪ್ರಯತ್ನಗಳನ್ನು ಮಾಡದೇ WHO ಡಿಡಿಟಿಗೆ ಸಹಮತ ನೀಡುತ್ತಿರುವುದು ಖಂಡನೀಯ ಹಾಗೂ ಅನುಮಾನಾಸ್ಪದವಾಗಿದೆ. ಇನ್ನೂ ನಾವೆಷ್ಟು ವಿಷಮಯವಾಗಬೇಕು?  ತೀರ್ಮಾನ ಜನರದ್ದು.
Written by Poornaprajana Belur and Published by Kanaja

No comments:

Post a Comment