Search This Blog

Saturday, December 24, 2011

Huvina Hadagali and other places

Important places of Huvina Hadagali 

೧. ಹೊಳಲು : ಈ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಪಶ್ಚಿಮ ದಿಕ್ಕಿಗೆ ೩೬ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ೧. ಶ್ರೀ ವೀರಭದ್ರ ದೇವಾಲಯ ೨. ಶ್ರೀ ಗೌರೇಶ್ವರ ದೇವಾಲಯ ೩. ಶ್ರೀ ಅನಂತ ಪದ್ಮನಾಭ ದೇವಾಲಯ ೪. ಶ್ರೀ ಕಾಳಿಕಾ ದೇವಿ ದೇವಾಲಯ ೫. ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ೬. ಶ್ರೀ ತ್ರಿಪುರಾಂತಕ ದೇವಾಲಯಗಳು ಇವೆ. ಇಲ್ಲಿನ ಶ್ರೀ ಅನಂತ ಪದ್ಮನಾಭ ಮೂರ್ತಿಯನ್ನು ವಿಜಯನಗರದ ಅರಸರು ನಿರ್ಮಿಸಿದ್ದು ಕಾರಣಾಂತರಗಳಿಂದ ಈ ದೇವಾಲಯವನ್ನು ಇಲ್ಲಿ ನಿರ್ಮಿಸಲಾಗಿದೆ ಎನ್ನುವುದು ಇಲ್ಲಿಯ ಜನರ ಹೇಳಿಕೆಯಾಗಿದೆ. ಈ ಗ್ರಾಮವು ಪ್ರಾಚೀನ ಕಾಲದ ಚಾಲುಕ್ಯರ ಆಳ್ವಿಕೆಗೆ ಒಳಪಟ್ಟಿದ್ದು ನಂತರ ಹೊಯ್ಸಳ, ವಿಜಯನಗರದ ಅರಸರು ಹರಪನಹಳ್ಳಿ ಪಾಳೇಗಾರರ ಆಳ್ವಿಕೆಯಲ್ಲಿತ್ತು. ಇದು ಮೊದಲು ಬ್ರಾಹ್ಮಣರಿಗೆ ಕೊಟ್ಟ ಒಂದು ಆಗ್ರಹಾರವಾಗಿತ್ತು. ಈಗ ಒಂದು ಪಟ್ಟಣವಾಗಿ ಬೆಳೆದಿದೆ.
೨. ಮೈಲಾರ : (ಪುಟ ಸಂಖ್ಯೆ : ೧೨೧) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಮೈಲಾರ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೩೩ ಕಿ.ಮೀ. ದೂರದಲ್ಲಿದೆ. ಈ ಗ್ರಾಮಕ್ಕೆ ಸುಮಾರು ೨ ಕಿ.ಮೀ. ದೂರದಲ್ಲಿ ತುಂಗಭದ್ರ ನದಿ ಹರಿಯುತ್ತದೆ. ಈ ಗ್ರಾಮಕ್ಕೆ ಇನ್ನೂ ಆರು ಗ್ರಾಮಗಳು ಪ್ರಾಚೀನ ಕಾಲದಲ್ಲಿ ಸೇರಿದ್ದವು. ಆದುದರಿಂದ ಈ ಗ್ರಾಮದ ದೇವರಾದ ಶ್ರೀ ಮೈಲಾರ ಲಿಂಗ ಸ್ವಾಮಿ ದೇವರಿಗೆ ಏಳುಕೋಟಿ ಮೈಲಾರ ಲಿಂಗಸ್ವಾಮಿ ಎಂದು ಹೆಸರು. ಏಕೆಂದರೆ ಈ ಏಳು ಗ್ರಾಮಗಳಿದೆ ಕೋಟೆಗಳಿದ್ದವು. ಈ ಸ್ಥಳಕ್ಕೆ ಪುರಾಣಗಳಲ್ಲಿ ‘ಮೈಲಾರಿ’ ಎಂದು ಕರೆದಿರುವುದು. ಮೈಲಾರಿ ಎಂದರೆ ತ್ರಿಮೂರ್ತಿಗಳ ಸಂಗಮವೆಂದು ಅರ್ಥ. ಮೈಲಾರ ಅಡು ನುಡಿಯಲ್ಲಿ ಅಕ್ಷರ ಬದಲಾವಣೆಯಿಂದ ಮೈಲಾರವಾಗಿರುವುದು. ಅಮಿರರನ್ನು ಸಂಹರಿಸಿದ ಮರುದಿನ ಪರಮಾತ್ಮನು ಬಿಲ್ಲನ್ನು ಅರ್ಧ ಭಾಗಕ್ಕೆ ಏರಿ ರೈತರಿಗೆ ಬೇಕಾದ ಮಳೆ, ಬೆಳೆ ಭವಿಷ್ಯವನ್ನು ನುಡಿದನು. ಈ ಕಾರ್ಯಕ್ರಮಕ್ಕೆ ಕಾರ್ಣಿಕೋತ್ಸವ ಎಂದು ಕರೆಯುವರು. ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಜಾತ್ರೆ ಜರುಗುವುದು. ಈ ದಿನದಲ್ಲಿ ಕೂಡ ಕುರುಬ ಜನಾಂಗಕ್ಕೆ ಸೇರಿದ ಬೀರಪ್ಪನ ಭಿಲ್ಲನ್ನು ಏರಿ ಕಾಣಿಕವನ್ನು ನುಡಿಯುವರು. ಈ ಜಾತ್ರೆಗೆ ಜನರ ಸಾಗರವೇ ಹರಿದುಬರುತ್ತದೆ.

ಮೊದಲಘಟ್ಟ : (ಪುಟ ಸಂಖ್ಯೆ : ೧೧೬) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಮೊದಲಘಟ್ಟ ಗ್ರಾಮ ಹೂವಿನಹಡಗಲಿ ಪಟ್ಟಣದಿಂದ ಸುಮಾರು ೮ ಕಿ.ಮೀ. ದೂರದಲ್ಲಿ ತುಂಗಭದ್ರ ನದಿ ತೀರದಲ್ಲಿರುವ ಒಂದು ಚಿಕ್ಕ ಗ್ರಾಮವಾಗಿದೆ.  ಈ ತುಂಗಭದ್ರ ನದಿಗೆ ವಿಜಯನಗರದ ಅರಸರು ಮೊದಲು ಆಣೆಕಟ್ಟನ್ನು ನಿರ್ಮಾಣ ಮಾಡಲು ತೀರ್ಮಾನಿಸಿ ಈ ನದಿಗೆ ಮೊದಲು ಒಡ್ಡನ್ನು ಕಟ್ಟಿದರು. ನಂತರ ಕಾರಣಾಂತರಗಳಿಂದ ಈ ಆಣೆಕಟ್ಟೆ ಈಗಿನ ಹೊಸಪೇಟೆ ಪಟ್ಟಣಕ್ಕೆ ೫ ಕಿ.ಮೀ.ದೂರದಲ್ಲಿ ತುಂಗಭದ್ರ ಆಣೆಕಟ್ಟಾಗಿ ನಿರ್ಮಾಣವಾಯಿತು.  ಆದರೆ ವಿಜಯನಗರ ಅರಸರು ನಿರ್ಮಿಸಿದ ಒಡ್ಡಿನ ಅವಶೇಷಗಳು ಈಗಲೂ ಉಳಿದುಕೊಂಡಿದ್ದು ಮೊದಲನೇ ಆಣೇಕಟ್ಟು ಇದು ಆಗಿರುವುದರಿಂದ ಇದಕ್ಕೆ ಮೊದಲ ಘಟ್ಟ ಎಂಬ ಹೆಸರು ಬಂದಿತು. ಈ ನದಿ ತೀರದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನವಿದ್ದು ಪ್ರತಿವರ್ಷ ಡಿಸೆಂಬರ್ / ಜನವರಿ ತಿಂಗಳಲ್ಲಿ ಜಾತ್ರೆ ನಡೆಯುತ್ತದೆ. ಇದು ಒಂದು ಪ್ರಸಿದ್ಧ ತಾಣವಾಗಿ ಬೆಳೆದಿದೆ.

. ಕುರುವತಿ : (ಪುಟ ಸಂಖ್ಯೆ : ೧೬೯) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಕುರುವತ್ತಿ ಗ್ರಾಮ ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೩೬ ಕಿ.ಮೀ. ದೂರದಲ್ಲಿದೆ. ಈ ಗ್ರಾಮವು ತುಂಗಭದ್ರ ನದಿ ತೀರದಲ್ಲಿದೆ. ಈ ಗ್ರಾಮದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನವಿದೆ. ಈ ದೇವಸ್ಥಾನವನ್ನು ಚಾಲುಕ್ಯರ ಅಹವಮಲ್ಲದೇವನು ನಿರ್ಮಿಸಿದನು. ಈ ದೇವಾಲಯ ಕಪ್ಪುಶಿಲೆಯಿಂದ ಕೂಡಿದೆ. ಈ ದೇವಸ್ಥಾನದ ಭಿತ್ತಿ ಚಿತ್ರಗಳು ಬಲು ಸುಂದರವಾಗಿರುವುವು. ಈ ದೇವಸ್ಥಾನವನ್ನು ಚಾಲುಕ್ಯರು ನಿರ್ಮಿಸಿದರು. ಹೊಯ್ಸಳರು ಈ ದೇವಸ್ಥಾನಕ್ಕೆ ಹೊಸ ಹೊಸ ಭಾಗಗಳನ್ನು ಸೇರಿಸಿಕೊಂಡು ಚಾಲುಕ್ಯ, ಹೊಯ್ಸಳರಿಗೆ ಕೊಂಡಿಯಾಗಿದೆ. ಈ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ದಕ್ಷಿಣದ ವಾರಣಾಸಿಯೆಂದು ಪ್ರಸಿದ್ದಿ ಪಡೆದಿತ್ತು. ಇಲ್ಲಿ ಸೋಮೇಶ್ವರನ ದರ್ಶನವಾದ್ದರಿಂದ ಇದು ಒಂದು ಕುರುಹು ಆಯಿತು. ಆದ್ದರಿಂದ ಕುರುಹಿನ + ವರತಿ, ಕುರುವತ್ತಿ ಎಂಬ ಹೆಸರು ಬಂದಿತು. ಪ್ರತಿವರ್ಷ ಫೆಬ್ರವರಿ ಮತ್ತು ಮಾರ್ಚಿ ತಿಂಗಳಲ್ಲಿ ಇಲ್ಲಿ ರಥೋತ್ಸವ ಜರುಗುತ್ತದೆ. ಇದಕ್ಕೆ ಬಸವಣ್ಣ ಜಾತ್ರೆಯೆಂದು ಕರೆಯುವರು. ರೈತರು ತಮ್ಮ ಎತ್ತುಗಳಿಗೆ ಕುರುವತ್ತಿ ಮತ್ತು ಮಹದೇವರೆಂದು ಹೆಸರಿಟ್ಟುಕೊಳ್ಳುವರು.

ಕುಮಾರನಹಳ್ಳಿ ತಾಂಡ :

ಬೆಟ್ಟದ ಮಲ್ಲೇಶ್ವರ ದೇವಸ್ಥಾನ
ಕುಮಾರನಹಳ್ಳಿ ತಾಂಡ ಹೂವಿನಹಡಗಳಿ ಪಟ್ಟಣದಿಂದ ಸುಮಾರು ೧೩ ಕಿ.ಮೀ. ದೂರದಲ್ಲಿದೆ. ಹೂವಿನ ಹಡಗಲಿಯಿಂದ ಹರಪನಹಳ್ಳಿಗೆ ಹೋಗುವ ದಾರಿಯಲ್ಲಿ ಬರುತ್ತದೆ. ಈ ತಾಂಡದ ಬೆಟ್ಟದ ಪ್ರದೇಶದಲ್ಲಿ ಇದ್ದು ಇಲ್ಲಿ ಹೆಚ್ಚಿನ ಜನ ಲಂಬಾಣಿ ಜನಾಂಗದವರು ವಾಸಮಾಡುತ್ತಿದ್ದಾರೆ. ಇಲ್ಲಿರುವ ಬೆಟ್ಟದ ಮೇಲೆ ಶ್ರೀ ಮಲ್ಲೇಶ್ವರ ದೇವಸ್ಥಾನವಿದ್ದು ಇದು ಬೆಟ್ಟದ ಮಲ್ಲಪ್ಪ ಎಂದು ಹೆಸರು ಪಡೆದಿದೆ. ಇದು ನೋಡಲು ಕಣ್ಣಿಗೆ ಹಬ್ಬವೇಸರಿ. ಇದು ಪ್ರಕೃತಿ ಮಡಿಲಲ್ಲಿದ್ದು ಎಲ್ಲರನ್ನೂ ಕೈಬೀಸಿ ಕರೆಯುವ ಒಂದು ಪ್ರೇಕ್ಷಣೀಯ ಸ್ಥಳವಾಗಿದೆ.
ಇಲ್ಲಿಂದ ಸುಮಾರು ೩ ಕಿ.ಮೀ ದೂರದಲ್ಲಿ ಮಸಲವಾಡ ಎಂಬ ಗ್ರಾಮವಿದ್ದು ಇಲ್ಲಿ ಶ್ರೀ ವೀರಣ್ಣ ದೇವಸ್ಥಾನವಿದೆ. ಇದು ಐತಿಹಾಸಿಕ ಸ್ಥಳವಾಗಿದ್ದು ಇಲ್ಲಿ ಕೆಲವು ಶಿಲಾ ಶಾಸನಗಳು ಇವೆ. ಇವುಗಳ ರಕ್ಷಣೆಗಾಗಿ ಭಾರತೀಯ ಪುರಾತತ್ವ ಇಲಾಖೆ ಕಾಯೋನ್ಮುಖವಾಗಿದೆ.
ಹಿರೇ ಹಡಗಲಿ : (ಪುಟ ಸಂಖ್ಯೆ : ೧೭೭) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಹಿರೇ ಹಡಗಳಿ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೧೭ ಕಿ.ಮೀ. ದೂರದಲ್ಲಿದೆ. ಈ ಗ್ರಾಮದಲ್ಲಿ ಎರಡು ಪ್ರಾಚೀನ ಕಾಲದ ದೇವಾಲಯಗಳು ಇವೆ. ಅವು ೧. ಶ್ರೀ ಭೀಮೇಶ್ವರ ದೇವಸ್ಥಾನ ಮತ್ತು ೨. ಶ್ರೀ ಕಲ್ಲೇಶ್ವರ ದೇವಸ್ಥಾನ. ಇವುಗಳಲ್ಲಿ ಒಂದು ಹೊರವಲಯದಲ್ಲಿದೆ. ಶ್ರೀ ಭೀಮೇಶ್ವರ ದೇವಾಲಯ ಗಡಿಯಲ್ಲಿರುವ ಶಿಲಾಶಾಸನವು ಚಾಲುಕ್ಯರ ಅರಸನಾದ ಶ್ರೀ ತ್ರೈಲೋಕ್ಯಮಲ್ಲದೇವನ ವಂಶಾವಳಿ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ.
ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವು ಕೂಡ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ. ನಂತರ ಹೊಯ್ಸಳರ ಕಾಲದಲ್ಲಿ ಈ ದೇವಸ್ಥಾನ ಅಭಿವೃದ್ಧಿ ಹೊಂದಿದ್ದು ಇಲ್ಲಿನ ವಾಸ್ತುಶಿಲ್ಪ ಚೆನ್ನಾಗಿದೆ. ಇಲ್ಲಿನ ಈ ರಾಷ್ಟ್ರೀಯ ಸ್ಮಾರಕಗಳ ರಕ್ಷಣೆಗಾಗಿ ಭಾರತ ಪುರಾತತ್ವ ಇಲಾಖೆಯು ಸಿಬ್ಬಂದಿಯನ್ನು ನೇಮಿಸಿದ್ದು ಮುಂದಿನ ಪೀಳಿಗೆಗೆ ಕಾದಿರಿಸಲು ಪಣ ತೊಟ್ಟಿದೆ.

ಹೂವಿನ ಹಡಗಲಿ : (ಪುಟ ಸಂಖ್ಯೆ : ೧೭೯) (ಬಳ್ಳಾರಿ ಜಿಲ್ಲಾ ಸಾಂಸ್ಕೃತಿಕ ದರ್ಶನ)
ಹೂವಿನ ಹಡಗಲಿ ಪಟ್ಟಣ ಬಳ್ಳಾರಿ ಜಿಲ್ಲೆಯಲ್ಲಿ ಒಂದು ತಾಲೂಕು ಕೇಂದ್ರವಾಗಿದ್ದು ಇದು ಶೈಕ್ಷಣಿಕವಾಗಿ ಮುಂದುವರೆದ ತಾಲೂಕಾಗಿದೆ. ಇಲ್ಲಿ ಮೂರು ಐತಿಹಾಸಿಕ ದೇವಾಲಯಗಳು ಇವೆ.
೧. ಶ್ರೀ ಕಲ್ಲೇಶ್ವರ ದೇವಾಲಯ
೨. ಶ್ರೀ ಕೇಶವ ಸ್ವಾಮಿ ದೇವಾಲಯ
೩. ಶ್ರೀ ಶಶಿಧರ ದೇವಾಲಯ.
ಈ ದೇವಾಲಯಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿವೆ. ಶಶಿಧರನ ಗುಡಿಯಲ್ಲಿ ಈಶ್ವರ, ಸೂರ್ಯನಾರಾಯಣ ಮತ್ತು ಬಾಲಕೃಷ್ಣ ಮೂರ್ತಿಗಳು ಇವೆ. ಶ್ರೀ ಕಲ್ಲೇಶ್ವರ ಮತ್ತು ಕೇಶವ ದೇಗುಲಗಳು ಸುಂದರವಾಗಿವೆ. ಇಲ್ಲಿನ ಶ್ರೀ ಯೋಗನರಸಿಂಹ ಸ್ವಾಮಿ ಮೂರ್ತಿಯು ಕಪ್ಪು ಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಇಲ್ಲಿ ಒಂದು ಬಾಲವನ ಇದ್ದು ಮಕ್ಕಳಿಗೆ ಮನೋರಂಜನೆ ನೀಡುತ್ತದೆ.
ಹೊಳಗುಂದಿ : ಹೊಳಗುಂದಿ ಗ್ರಾಮ ಹೂವಿನ ಹಡಗಲಿ ತಾಲೂಕಿಗೆ ಸೇರಿದೆ. ಈ ಗ್ರಾಮವು ಹಡಗಲಿ ಪಟ್ಟಣದಿಂದ ಹೊಸಪೇಟೆ ಪಟ್ಟಣಕ್ಕೆ ಹೋಗುವ ದಾರಿಯಲ್ಲಿ ೧೦ ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ವಾಯುವ್ಯ ದಿಕ್ಕಿನಲ್ಲಿ ಈ ಗ್ರಾಮಕ್ಕೆ ಹೊಂದಿಕೊಂಡು ಒಂದು ಪರ್ವತವಿದೆ. ಈ ಪರ್ವತದ ಬದಿಯಲ್ಲಿ ಒಂದು ನಂದಿ ವಿಗ್ರಹವಿರುವುದು. ಪರ್ವತದ ಮೇಲೆ ಶಿದ್ದೇಶ್ವರ ದೇವರ ದೇಗುಲವಿರುವುದು. ಈ ಗ್ರಾಮದಲ್ಲಿ ಪ್ರಾಚೀನ ಕಾಲದ ಕಲ್ಲೇಶ್ವರ, ವೀರಭದ್ರ, ಭಿಲ್ಲೇಶ್ವರ, ಬಾಳೇಶ್ವರ ದೇಗುಲಗಳಿವೆ. ಈ ದೇವಸ್ಥಾನಗಳು ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿವೆ. ಈ ದೇವಸ್ಥಾನವನ್ನು ಚಾವುಂಡರಸನು ನಿರ್ಮಿಸಿದ ಬಗ್ಗೆ ಶಿಲಾಶಸನದಲ್ಲಿದೆ. ಶಾಸನದಲ್ಲಿ ಈ ಗ್ರಾಮಕ್ಕೆ ಪೊಳಲ್ಗುಂದೆ ಎಂದು ಕರೆಯಲಾಗಿದೆ. ಪೊಳಲ್ ಎಂದರೆ ಪಟ್ಟ್ಟಣ ಗೊಂದೆ ಎಂದರೆ ನಂದಿ ಎಂದು ಹೇಳಬಹುದು. ಆದುದರಿಂದ ಈ ಗ್ರಾಮಕ್ಕೆ ಬಸವಪಟ್ಟಣ ಎಂದು ಕರೆಯಬಹುದು.
ಮಾಗಳ : ಮಾಗಳ ಗ್ರಾಮವು ಹೂವಿನ ಹಡಗಲಿ ಪಟ್ಟಣದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ. ಮಾಗಳ ಗ್ರಾಮದ ಹತ್ತಿರ ಶ್ರೀ ರಂಗಾಪುರ ನರಸಿಂಹಸ್ವಾಮಿ ಗುಡಿ ಚಾಲುಕ್ಯ ಅರಸ ತ್ರೈಲೋಕ್ಯ ಮಲ್ಲ ದೇವನ ಕಾಲದಲ್ಲಿ ಶ್ರೀ ನರಸಿಂಹದೇವರಿಗೆ ಮತ್ತು ಗಣಪತಿ ದೇವರಿಗೆ ಸೇವಾ ಕಾರ್ಯಕ್ಕಾಗಿ ಕೆಲ ಭೂಮಿಯನ್ನು ದತ್ತಿ ಕೊಟ್ಟರು. ಆಗ ಗ್ರಾಮದ ಹೆಸರು ಮಾಗಳ. ಇಲ್ಲಿನ ಸೂರ್ಯನಾರಾಯಣ ಸ್ವಾಮಿ ಗಡಿಯನ್ನು ತ್ರಿಕೂಟಾ ದೇವಾಲಯವೆಂದು, ಶಿವ, ವಿಷ್ಣು ಮತ್ತು ಸೂರ್ಯದೇವರಿಗಾಗಿ ಕಟ್ಟಿಸಿದರು. ಈ ದೇವಾಲಯ ಕಪ್ಪು ಕಲ್ಲಿನಿಂದ ನಿರ್ಮಾಣಗೊಂಡು ಸುಂದರವಾಗಿದೆ.
ಶ್ರೀ ವೇಣುಗೋಪಾಲ ಸ್ವಾಮಿ ಗುಡಿ ಶಾಸನ ಬ್ರಾಹ್ಮಣ ಸೇನಾಪತಿ ಮತ್ತು ಅರಸನ ಮಂತ್ರಿಯಾಗಿದ್ದ ಮಾಧವನ ಶೌರ್ಯ ಪರಾಕ್ರಮವನ್ನು ಹೊಗಳಿದೆ. ಈ ಗ್ರಾಮದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ತುಂಗಭದ್ರಾ ನದಿಯು ಹರಿದಿದೆ. ಈ ತೀರದ ಒಂದು ದಡದಲ್ಲಿ ಮಾವಿನತೋಪು ಬೆಳೆದಿದ್ದು ಇದನ್ನು ಮಾವಿನ ಮರದ ಕೊಳವೆಂದು ಕರೆಯುತ್ತಿದ್ದರು. ಶಾಸನದಲ್ಲಿ ಇದನ್ನು ‘ಮಾಂಗ’ ಎಂದು ಕರೆಯುತ್ತಿದ್ದು ನಂತರ ‘ಮಾಗಳ’ವಾಗಿ ಪರಿವರ್ತನೆಯಾಗಿದೆ.
ಹುಳೇಗುಡ್ಡ ಏತನೀರಾವರಿ ಯೋಜನೆ : ಇದನ್ನು ಸಿಂಗಟಾಲೂರು ಏತ ನೀರಾವರಿ ಯೋಜನೆ ಎಂದು ಕರೆಯುತ್ತಾರೆ. ಸಿಂಗಟಾಲೂರು ಹಾವೇರಿ ಜಿಲ್ಲೆಗೆ ಸೇರಿರುವುದರಿಂದ ಪುಳೇಗುಡ್ಡ ಏತನೀರಾವರಿ ಯೋಜನೆ ಎಂದು ಕರೆಯುತ್ತಾರೆ. ಮತ್ತು ಇಲ್ಲಿ ಗಾಳಿ ಯಂತ್ರಗಳು (ವಿಂಡ್ ಮಿಲ್) ಇವೆ. ಇವು ಮಕ್ಕಳಿಗೆ ಗಾಳಿಯನ್ನು ಒಂದು ಶಕ್ತಿಯಾಗಿ ಬಳಕೆ ಮಾಡುವ ಬಗ್ಗೆ ತಿಳಿಸುತ್ತದೆ.

1 comment:

  1. ಉತ್ತಮ ಮಾಹಿತಿಗಳನ್ನು ಸಂಗ್ರಹಿಸಿರುವಿರಿ. ಧನ್ಯವಾದಗಳು.

    ReplyDelete