ಸ್ವಾತಂತ್ರದ ನಂತರ ಭಾರತದಲ್ಲಿ ಎಂದೂ ಕಾಣದಂತಹ ಆರ್ಥಿಕ ಅಭಿವೃದ್ಧಿಯನ್ನು ನಾವು ನೋಡುತ್ತಿದ್ದೇವೆ. ದೇಶದ ಕೃಷಿವಲಯವೂ ಕೂಡ ಎಂದೂ ನೋಡಿರದ ದುಸ್ಥಿತಿಗೆ ಬಂದು ತಲುಪಿದೆ. ದುರದೃಷ್ಟವಶಾತ್, ಕರ್ನಾಟಕವು ಈ ವಿರೋಧಾಭಾಸಕ್ಕೆ ಹಿಡಿದ ಕನ್ನಡಿಯಂತಿದೆ. ಕ್ಷಿಪ್ರ ಆರ್ಥಿಕ ಪ್ರಗತಿ, ಅವನತಿಯತ್ತ ತಿರುಗಿರುವ ಕೃಷಿ, ಇವೆರೆಡೂ ಕೃಷಿಗೆ ಬೇಕಾದ ಬಹುಮುಖ್ಯ ನಿಯಮಿತ ಸಂಪನ್ಮೂಲವಾದ ಭೂಮಿಯನ್ನು ರೈತನಿಂದ ಕಸಿಯುತ್ತಿರುವುದು ಗಾಬರಿ ಹುಟ್ಟಿಸುವ ವಿಷಯ.
ಕರ್ನಾಟಕದಲ್ಲಿ ಕೃಷಿ ಭೂಮಿಯ ಸ್ವಾಧೀನದ ವಿರುದ್ಧ ರೈತರು ಮಾಡುತ್ತಿರುವ ಹೋರಾಟವನ್ನು ನಾವು ಪ್ರತಿನಿತ್ಯವೂ ನೋಡುತ್ತಿದ್ದೇವೆ. ಮಂಗಳೂರು, ಹಾಸನ, ಮೈಸೂರು, ಬೆಂಗಳೂರು, ರಾಮನಗರ, ದಾವಣಗೆರೆ ಹೀಗೆ ಹಲವೆಡೆ ರೈತರು ತಮ್ಮ ಕೃಷಿ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಪ್ರಾಣಬಿಡುವ ಪರಿಸ್ಥಿತಿ ನಿರ್ಮಿತವಾಗಿದೆ. ಅಲ್ಲದೇ ರೈತರ ಜಮೀನಿಗೆ ನ್ಯಾಯಯುತ ಬೆಲೆ ಸಿಗದೇ ಇರುವುದು ಕೂಡ ರೈತರ ನೆಮ್ಮದಿ ಕೆಡಿಸಿದೆ. ಭೂಸ್ವಾಧೀನ ನೀತಿಯು ಒತ್ತಾಯಪೂರ್ವಕ, ಸುಸ್ಥಿರವಲ್ಲದ, ಜನತಂತ್ರಕ್ಕೆ ವಿರುದ್ಧವಾದ ಮತ್ತು ಉದ್ದಿಮೆ, ಖಾಸಗಿ ಕಂಪನಿ ಸ್ನೇಹಿ ಎಂಬ ವಾದಕ್ಕೆ ಶಕ್ತಿಯುತವಾದ ನಿದರ್ಶನಗಳು ಇಂದು ಲಭ್ಯ.
ಇನ್ನೊಂದೆಡೆ, ಸದ್ದಿಲ್ಲದೇ ಹೊಲಗದ್ದೆ, ಕೆರೆ ಕಾಡು ಗೋಮಾಳಗಳು ಮಾಯವಾಗಿ ಹೊಸ ತೋಟಗಳು, ಟಿಂಬರ್ ಪ್ಲಾಂಟೇಷನ್ನುಗಳು, ಲೇಔಟುಗಳು, ಉದ್ದಿಮೆಗಳು, ರೆಸಾರ್ಟುಗಳು ತಲೆಯೆತ್ತಿ ನಿಲ್ಲುತ್ತಿವೆ. ಕಾಲುವೆಗಳ ಕಲ್ಲನ್ನೇ ಕದ್ದು ಕಾಲುವೆಗಳೇ ಒತ್ತುವರಿಯಾದ ಉದಾಹರಣೆಗಳಿವೆ. ಗುಳೆ ಎದ್ದ ರೈತ ಕುಟುಂಬಗಳು ಊರಿಗೆ ಮರಳದೇ ಅವರ ಜಮೀನುಗಳು ಬೀಳು ಬಿದ್ದಿವೆ. ಹೀಗೆ ಒತ್ತಾಯ ಮತ್ತು ಸ್ವಇಚ್ಛೆಯಿಂದ ಹತೋಟಿ ಮೀರಿ ಜರುಗುತ್ತಿರುವ ಭೂ ಬಳಕೆಯ ಬದಲಾವಣೆಯ ಕೆಲವು ಪರಿಣಾಮಗಳು ಮತ್ತು ಹೆಚ್ಚು ಚರ್ಚಿಸದ ಕಾರಣಗಳನ್ನುವಿಶ್ಲೇಷಿಸಿ ಅದನ್ನು ವ್ಯವಸ್ಥಿತವಾಗಿ ನಿರ್ವಹಿಸುವುದಕ್ಕೆ ಬೇಕಾದ ಕ್ರಮಗಳನ್ನು ಈ ಲೇಖನ ಸೂಚಿಸುತ್ತದೆ.
ರಾಜ್ಯಸರ್ಕಾರವು ಭೂ ಬಳಕೆಯ ಅಂಕಿಅಂಶಗಳನ್ನು ಪ್ರತಿವರ್ಷವೂ ಪ್ರಕಟಿಸುತ್ತದೆ. ಇದರಲ್ಲಿ ಭೂಬಳಕೆಯನ್ನು ೯ ವಲಯಗಳಲ್ಲಿ ವಿಂಗಡಿಸಲಾಗಿರುತ್ತದೆ. ಇದರದ ಆಧಾರದ ಮೇಲೆ, ರಾಜ್ಯದ ಒಟ್ಟು ಭೂಪ್ರದೇಶದಲ್ಲಿ(೧೯೦ ಲಕ್ಷ ಹೆಕ್ಟೇರುಗಳು) ಶೇಕಡ ಐವತ್ತಿರಿಂದ ಐವತ್ತೆರೆಡರಷ್ಟು (೧೦೦ – ೧೦೫ ಲಕ್ಷ ಹೆಕ್ಟೇರುಗಳು) ಭೂಮಿಯು ಕೃಷಿಗಾಗಿ ಬಳಸಲ್ಪಡುತ್ತಿದೆ. ಕೃಷಿ ಭೂಮಿಯ ರಾಜ್ಯಮಟ್ಟದ ಬದಲಾವಣೆಗಳನ್ನು ಗಮನಿಸಿದಾಗ ಮಹತ್ವದ ಬದಲಾವಣೆಗಳು ಕಾಣದಿದ್ದರೂ, ಕಳೆದ ನಾಲ್ಕು ದಶಕಗಳಲ್ಲಿ ಕೃಷಿ ಪ್ರದೇಶವು ಶೇಕಡ ಎರಡರಿಂದ ಮೂರರಷ್ಟು (೩.೫ – ೫ ಲಕ್ಷ ಹೆಕ್ಟೇರುಗಳು) ಕಮ್ಮಿಯಾಗಿದೆ. ಹಾಗೆಯೇ ಕೃಷಿಯೇತರ ಭೂ ಬಳಕೆ (ನಗರೀಕರಣ, ಗಣಿ, ಅಣೆಕಟ್ಟು)ಯು ಕ್ರಮೇಣವಾಗಿ ಹೆಚ್ಚು ಹೆಚ್ಚು ಪಾಲು ಪಡೆಯುತ್ತಿದ್ದು ಈಗ ಸುಮಾರು ಶೇಕಡ ೧೦ರಷ್ಟು (೧೯ ಲಕ್ಷ ಹೆಕ್ಟೇರುಗಳು) ಭೂಮಿಯನ್ನು ಈ ವಿಭಾಗದಲ್ಲಿ ಉಪಯೋಗಿಸಲಾಗಿದೆ. ಆದರೆ ಈ ಅಂಕಿಅಂಶಗಳನ್ನು ಗಂಭೀರವಾಗಿ ಅರ್ಥೈಸುವಲ್ಲಿ ಕೆಲವು ಮುಖ್ಯ ತೊಂದರೆಗಳಿವೆ. ಮೇಲೆ ತಿಳಿಸಿದ ಒತ್ತುವರಿ ಮತ್ತು ಭೂ ಬಳಕೆಯ ಕಾನೂನುಬಾಹಿರ ಪರಿವರ್ತನೆಯ ಅಂಕಿ ಅಂಶಗಳು ಇದರಲ್ಲಿ ಸೇರಿರುವುದಿಲ್ಲ. ತಜ್ಞರ ಅಭಿಪ್ರಾಯದಂತೆ ರಾಜ್ಯದ ಆಹಾರೋತ್ಪಾದನೆ ಮತ್ತು ಸ್ಥಳೀಯ ಆರ್ಥಿಕತೆಯ ಮೇಲೆ ಈ ಲೆಕ್ಕಕ್ಕೆ ಸಿಗದ ಭೂ ಭಾಗಗಳ ಪಾತ್ರ ಮುಖ್ಯವಾಗಿದೆ.
ರಾಜ್ಯದ ಜನಸಂಖ್ಯೆಯ ವೃದ್ಧಿ, ಹೆಚ್ಚುತ್ತಾ ಹೋಗುವ ಆಹಾರದ ಅವಶ್ಯಕತೆ, ನಮ್ಮ ಇಂದಿನ ಕೃಷಿಯ ಉತ್ಪಾದನಾ ಸಾಮರ್ಥ್ಯ ಮತ್ತು ಅದರ ಕುಂಠಿತ ಬೆಳವಣಿಗೆ ; ಇವನ್ನೆಲ್ಲ ಗಮನಿಸಿದಾಗ ಮುಂದಿನ ವರ್ಷಗಳಲ್ಲಿ ನಮ್ಮ ರಾಜ್ಯ ಆಹಾರೋತ್ಪಾದನೆಯಲ್ಲಿ ತನ್ನ ಸ್ಥಾನ ಕಾಯ್ದುಕೊಳ್ಳುವುದು ಕಷ್ಟವಾಗಲಿದೆ. ಇದರ ಜೊತೆಗೆ, ರಾಜ್ಯದ ಕೃಷಿಯಲ್ಲಿಯೇ ಮೂಲಭೂತವಾದ ಬದಲಾವಣೆಗಳಾಗುತ್ತಿವೆ. ಆಹಾರ ಬೆಳೆಗಳಿಗೆ ಉಪಯೋಗಿಸಲಾಗುತ್ತಿದ್ದ ಭೂಮಿಯು ಹೆಚ್ಚುಹೆಚ್ಚಾಗಿ ವಾಣಿಜ್ಯಬೆಳೆಗಳಿಗಾಗಿ ಉಪಯೋಗಿಸಲ್ಪಡುತ್ತಿವೆ. ಇದರಿಂದಲೂ ರಾಜ್ಯದ ಆಹಾರೋತ್ಪಾದನೆ ಕುಂಠಿತವಾಗಿ ಆಹಾರದ ಬೆಲೆಗಳು ಗಗನಕ್ಕೇರುತ್ತಿವೆ. ಇದನ್ನು ಸರಿದೂಗಿಸಲು ಬೇಕಾದ ಆಮದು ರಾಜ್ಯ/ದೇಶವನ್ನು ಇತರ ದೇಶಗಳ ಮೇಲೆ ಅವಲಂಬಿತವನ್ನಾಗಿಸುತ್ತದೆ. ಭೂ ಬಳಕೆ ಸಂಬಂಧಿತ ನೈಸರ್ಗಿಕ ಸಂಪನ್ಮೂಲಗಳ ದುರ್ಬಳಿಕೆಯಿಂದ ಬೆಳೆ ವೈಫಲ್ಯವೂ ಹೆಚ್ಚಿದೆ. ಹೀಗೆ ಭೂ ಬಳಕೆಯ ಬದಲಾವಣೆಯಿಂದ ನಮ್ಮ ಸಮಾಜದ ಮೇಲೆ ಹಲವು ರೀತಿಯ ಒತ್ತಡಗಳು ಬೀಳಲಿವೆ.
ಭೂ ಬಳಕೆಯನ್ನು ನಿರ್ಬಂಧಿಸಿ ಅಭಿವೃದ್ಧಿಗೆ ಪೂರಕವಾಗಬೇಕಾಗಿದ್ದ ಭೂಸ್ವಾಧೀನ ಕಾಯ್ದೆ, ಭೂಸುಧಾರಣಾ ಕಾಯ್ದೆ ಮತ್ತಿತರ ಕಾನೂನುಗಳು ಹಲವು ವರ್ಷಗಳಿಂದ ವಿವಾದಗ್ರಸ್ತವಾಗಿವೆ. ಒತ್ತಾಯಪೂರ್ವಕ ಭೂಸ್ವಾಧೀನ ಪ್ರಕ್ರಿಯೆಯು, ನೇರವಾದ ಬದಲಾವಣೆ ಮತ್ತು ತೊಂದರೆಗಳ ಜೊತೆಗೆ ಹಲವು ಪರೋಕ್ಷವಾದ ನಷ್ಟಗಳೂ ಆಗುತ್ತವೆ. ಇವುಗಳ ಬಗ್ಗೆ ಚರ್ಚೆ, ನಷ್ಟದ ಪ್ರಮಾಣ ಮುಂತಾದ ವಿಷಯಗಳಿಗೆ ಪ್ರಾಮುಖ್ಯತೆ ಸಿಗದಿರುವುದು ವಿಪರ್ಯಾಸ.
ಸ್ವಾಧೀನಗೊಂಡ ಭೂಮಿಯ ಆಹಾರೋತ್ಪಾದನೆಯು ಮತ್ತೆಲ್ಲಿಂದಲೂ ಭರಿಸಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ರಾಜ್ಯದ ಆಹಾರೋತ್ಪಾದನೆ ಶಾಶ್ವತ ಧಕ್ಕೆಯಾಗುತ್ತದೆ.
ಸ್ವಾಧೀನವಾದ ಪ್ರದೇಶದ ಸುತ್ತಮುತ್ತಲಿನ ಜಮೀನುಗಳಿಗಾಗುವ ದುಷ್ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡು ಪರಿಹಾರ ಕೊಡುವುದು ಅಪರೂಪ. ಇದರಿಂದ ಆಸುಪಾಸಿನ ಪ್ರದೇಶದ ಕೃಷಿಕರ ಮೇಲಿನ ಒತ್ತಡ ಹೆಚ್ಚುತ್ತದೆ. ಕೆಲವರು ತಾವಾಗಿಯೇ ಸಾಗುವಳಿ ಬಿಡುವುದರಿಂದಲೂ ಉತ್ಪಾದನೆಯಲ್ಲಿ ಶಾಶ್ವತ ಕಡಿತವಾಗುತ್ತದೆ.
ಸ್ವಾಧೀನಕ್ಕೊಳಪಡುವ ಜಾಗದ ಪ್ರಮಾಣ ಕಮ್ಮಿಯಾದರೂ ಆ ಜಾಗದಲ್ಲಾಗುವ ಚಟುವಟಿಕೆಗಳಿಗೆ ಬೇಕಾಗುವ ಬೆಂಬಲ ಉದ್ದಿಮೆಗಳು ಸುತ್ತಮುತ್ತಲೂ ಹರಡಿ ಮತ್ತಷ್ಟು ಕೃಷಿ ಭೂಮಿ ನಷ್ಟವಾಗುತ್ತದೆ.
ಸ್ವಾಧೀನ ಪ್ರಕ್ರಿಯೆಯ ಬಗ್ಗೆ ತಿಳಿಯುತ್ತಿದ್ದಂತೆಯೆ ರೈತ ಸಮುದಾಯಗಳನ್ನು ಅನಿಶ್ಚತತೆ ಕಾಡತೊಡಗುತ್ತದೆ. ಇದರಿಂದ ಕೃಷಿ ಪ್ರದೇಶದ ನೈಸರ್ಗಿಕ ಸಂಪನ್ಮೂಲಗಳ ವ್ಯರ್ಥ ಬಳಕೆ/ದುರ್ಬಳಕೆ ಹೆಚ್ಚುತ್ತದೆ. ತಾತ್ಕಾಲಿಕವಾಗಿ ಉತ್ಪಾದನೆ ಕುಂಠಿತವಾಗುತ್ತದೆ.
ಪುನರ್ವಸತಿ ಕಲ್ಪಿಸಿ ಕೊಡುವಾಗ ಸಾಮಾನ್ಯವಾಗಿ ಬೇರೊಂದುಕಡೆಯ ಸಾರ್ವಜನಿಕ ಆಸ್ತಿಯ ಜಾಗದಲ್ಲಿ ಪುನರ್ವಸತಿಯಾಗುತ್ತದೆ. ಇದರಿಂದ ಆ ಪ್ರದೇಶದ ಭೂ ಬಳಕೆಯ ಸಮತೋಲನದಲ್ಲಿ ಏರುಪೇರಾಗುತ್ತದೆ.
ಹೀಗೆ ಭೂಸ್ವಾಧೀನ ಪ್ರಕ್ರಿಯೆಯು ರೈತರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಯನ್ನು ತೀವ್ರವಾಗಿ ಬದಲಾಯಿಸುವುದಲ್ಲದೇ ಆಯಾ ಪ್ರದೇಶದ ಕೃಷಿ ಉತ್ಪಾದನೆ ಮತ್ತು ಆಹಾರ ಸ್ವಾವಲಂಬನೆಯ ಮೇಲೂ ದುಷ್ಪರಿಣಾಮಗಳನ್ನು ಬೀರುತ್ತದೆ.
ಇಂದಿನ ಪರಿಸ್ಥಿತಿಯಲ್ಲಿ ಕೃಷಿಯನ್ನು ಬಿಡಲು ಸರ್ಕಾರದ ಒತ್ತಾಯಪೂರ್ವಕ ಅದೇಶವಿಲ್ಲದಿದ್ದರೂ ರೈತರಿಗೆ ಆರಂಬ ನಡೆಸುವುದು ದುಸ್ತರವೇ. ಕೃಷಿ ಲಾಭದಾಯಕವಾಗಿಲ್ಲದೇ ಇರುವುದು ಇದರ ಪ್ರಮುಖ ಕಾರಣವಾದರೂ, ಕೃಷಿಯ ವಾಣಿಜ್ಯೀಕರಣ, ನೈಸರ್ಗಿಕ ಸಂಪನ್ಮೂಲಗಳ ಅಸುಸ್ಥಿರ ಬಳಕೆ, ಆರ್ಥಿಕ ಸಂಪನ್ಮೂಲಗಳ ಕೊರತೆ, ವೈಯುಕ್ತಿಕ ಸಮಸ್ಯೆಗಳು ಹೀಗೆ ಹಲವು ಕಾರಣಗಳಿಂದ ರೈತ ಕೃಷಿಯನ್ನು ಬಿಡಲಾರಂಭಿಸಿದ್ದಾನೆ. ಆದರೆ, ಕೃಷಿ ಭೂಮಿಯ ಮಾರಾಟ, ಅದರ ಖಾತೆ ಬದಲಾವಣೆ ಇತ್ಯಾದಿ ಸರ್ಕಾರಿ ವಿಧಾನಗಳು ಕೃಷಿಯಷ್ಟೇ ಗೊಂದಲಮಯ.
ಇಂತಹ ಸಂದರ್ಭದಲ್ಲಿ ಕ್ಲಿಷ್ಟ ಕಾನೂನನ್ನು ಪಾಲಿಸಿ ಸರ್ಕಾರಿ ಕಚೇರಿಗಳಿಗೆ ಅಲೆಯುವುದಕ್ಕಿಂತ ಮಧ್ಯವರ್ತಿಗೋ ಇನ್ಯಾರಿಗೋ ಅನಧಿಕೃತವಾಗಿ ಮಾರಿ ಕೈತೊಳೆದುಕೊಳ್ಳು ವುದು ಸುಲಭವಾಗಬಹುದು. ಹೀಗೆ ಮಾರಿದ ಭೂಮಿಯು ನೀರು/ಖನಿಜ/ಮರಳು ತೆಗೆಯುವ ಗಣಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಅಷ್ಟೇ ಅಲ್ಲದೇ, ರೈತನ ಜಮೀನಿಗೆ ನೀರು ಹರಿಸಲು ಸರ್ಕಾರ ಕಟ್ಟಿಸಿದ್ದ ಕಾಲುವೆ ಮತ್ತಿತರ ಹೂಡಿಕೆಗಳು ವ್ಯರ್ಥವಾಗುತ್ತದೆ. ವಿನಾಕಾರಣ ಆಸುಪಾಸಿನ ರೈತರೂ ಇದರಿಂದಾಗಿ ತೊಂದರೆಗೆ ಸಿಲುಕಬಹುದು. ಹೀಗೆ ಸ್ವಯಂ ಪ್ರೇರಿತ ಕೃಷಿ ಭೂಮಿಯ ಪರಿವರ್ತನೆಯೂ ಕೂಡ ಒತ್ತಾಯಪೂರ್ವಕ ಬದಲಾವಣೆಯಂತೆಯೇ ಆಹಾರೋತ್ಪಾದನೆಯ ಕಡಿತ, ನೈಸರ್ಗಿಕ ಸಂಪನ್ಮೂಲಗಳ ದುರ್ಬಳಿಕೆ ಮತ್ತು ರೈತ ಸಮುದಾಯದ ಮೇಲೆ ಸಾಮಾಜಿಕ ದುಷ್ಪರಿಣಾಮಗಳನ್ನೂ ಬೀರುತ್ತದೆ.
ಹೀಗಾಗಿ ಭೂ ಬಳಕೆಯ ನೀತಿಗಳ ಸ್ವರೂಪ ಮತ್ತು ಅನುಷ್ಠಾನ ಬಹಳ ನಾಜೂಕಿನ ವಿಷಯವಾಗಿದೆ. ಆದರೆ, ಇವುಗಳನ್ನು ರೂಪಿಸಲು ಬೇಕಾಗುವ (ಒತ್ತುವರಿ, ಕಾನೂನು ಬಾಹಿರ ಬಳಕೆಗಳು ಇತ್ಯಾದಿ) ಮಹತ್ವದ ಅಂಶಗಳ ಬಗ್ಗೆ ನಮಗೆ ಕೇವಲ ಅಂದಾಜುಗಳಿವೆ. ಅಲ್ಲದೇ, ದೂರದೃಷ್ಟಿಯಿಂದ ರಚಿತವಾದ ನೀತಿನಿಯಮಗಳನ್ನುರಾಜಕೀಯ ಪಕ್ಷಗಳು ತತ್‍ಕ್ಷಣದ ಬೇಡಿಕೆಗೋಸ್ಕರ ನಿರ್ಲಕ್ಷಿಸುವ ಸಾಧ್ಯತೆಗಳು ಇವೆ. ಜೊತೆಗೆ, ಭೂಮಿಯು ಖಾಸಗಿ ಸ್ವತ್ತಾಗಿದ್ದು ಅದರ ಮಾರಾಟ ಮುಕ್ತವಾಗಿರಬೇಕೆಂಬ ಬೇಡಿಕೆಯಿದೆ. ಇದರ ಜೊತೆಗೆ ಮೇಲೆ ಕಂಡಂತೆ, ಭೂ ಬಳಕೆಯ ಪರಿವರ್ತನೆಯ ಪರಿಣಾಮಗಳ ಸಾಮಾಜಿಕ ಹೊಣೆ ರೈತರನ್ನೊಳಗೊಂಡಂತೆ ಎಲ್ಲಾ ಪಾತ್ರಧಾರಿಗಳ ಮೇಲೂ ಇದೆ.
ಆದ್ದರಿಂದ ಭೂ ಸ್ವಾಧೀನ ಪ್ರಕ್ರಿಯೆ, ರಾಜ್ಯದ ಭೂ ಸಂಪನ್ಮೂಲನಿರ್ವಹಣೆ ಮತ್ತು ಕೃಷಿ ಉತ್ಪಾದನೆಗೆ ಸ್ಪಷ್ಟವಾದ, ಸಮಗ್ರವಾದ ಪಾರದರ್ಶಕ ವಿಕೇಂದ್ರೀಕೃತ ನೀತಿಯ ಅವಶ್ಯಕತೆಯಿದೆ.
ಈ ನೀತಿಯ ಸ್ಥೂಲ ಅಂಶಗಳು ಇಲ್ಲಿವೆ.
- ಗ್ರಾಮ ಮಟ್ಟದಿಂದಲೂ ಭೂಬಳಕೆಯ ನಿಖರ ಮಾಹಿತಿಯ ಲಭ್ಯತೆ
- ಭೂ ಸಂಪನ್ಮೂಲಗಳ ಮೇಲುಸ್ತುವಾರಿ ಸರ್ಕಾರದ ವಿವಿಧ ಇಲಾಖೆಗಳ (ಅರಣ್ಯ, ಕಂದಾಯ, ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಗ್ರಾಮೀಣಾಭಿವೃದ್ಧಿ ಇತ್ಯಾದಿ) ಜಂಟಿ ಕಾರ್ಯಯೋಜನೆ
- ಭೂ ಬಳಕೆಯ ವಿವಿಧ ಉದ್ದೇಶಗಳ (ಗಣಿ, ಕೈಗಾರಿಕ, ಧಾರ್ಮಿಕ, ಶೈಕ್ಷಣಿಕ, ವೈಯುಕ್ತಿಕ ಇತ್ಯಾದಿ) ಆಧಾರದ ಮೇಲೆ ಹಾಗು ಭೂಮಿಯ ಫಲವತ್ತತೆಯ ಮೇಲೆ ಬದಲಾವಣೆಗೆ ಮಿತಿ ಹಾಕುವುದು, ಭೂಮಿಯ ಬೆಲೆ ನಿರ್ಧರಿಸುವುದು
- ಪ್ರತಿ ಗ್ರಾಮಪಂಚಾಯ್ತಿಯ ಉತ್ಪಾದನಾ ಸ್ಥಾಯಿ ಸಮಿತಿಗೆ ಉತ್ಪಾದನಾ ಗುರಿಗಳನ್ನು ವಿಧಿಸಿ, ತನ್ನ ವ್ಯಾಪ್ತಿ ಪ್ರದೇಶದಲ್ಲಿ ಸಾಧ್ಯವಿರುವ ಆಹಾರೋತ್ಪಾದನೆ ಮತ್ತು ಅವಶ್ಯವಿರುವ ಕಾರ್ಯಯೋಜನೆಗಳನ್ನು ಸಮಿತಿಯು ಸಿದ್ಧಪಡಿಸಿ ಗ್ರಾಮಸಭೆಯ ಒಪ್ಪಿಗೆ ಪಡೆಯುವುದು. ಇವುಗಳನ್ನು ಕ್ರೂಡೀಕರಿಸಿ ತಾಲ್ಲೂಕು, ಜಿಲ್ಲಾ ರಾಜ್ಯ ಮಟ್ಟದ ಯೋಜನೆಗಳನ್ನು ತಯಾರಿಸಿ ಅನುಷ್ಠಾನಕ್ಕೆ ತರುವುದು. ಅದರ ಅನುಷ್ಠಾನದ ಆಧಾರದ ಮೇಲೆ ಗ್ರಾಮಪಂಚಾಯ್ತಿಗೆ ಅನುದಾನ ಬಿಡುಗಡೆ ಮಾಡುವುದು.
- ಭೂ ಬಳಕೆಯ ಬದಲಾವಣೆಗೆ ಸಂಬಂಧಪಟ್ಟ ಎಲ್ಲಾ ನಿರ್ಧಾರಗಳನ್ನು ಆಯಾ ಪ್ರದೇಶದ ಗ್ರಾಮ ಪಂಚಾಯ್ತಿಗಳ ಗ್ರಾಮ ಸಭೆಗಳ ಅನುಮೋದನೆಯ ಮೂಲಕವೇ ತೆಗೆದುಕೊಳ್ಳುವುದು ಮತ್ತು ಇದಕ್ಕೆ ಉತ್ಪಾದನಾ ಸ್ಥಾಯಿ ಸಮಿತಿಯ ಶಿಫಾರಸ್ಸುಗಳನ್ನು ಬಳಸಿಕೊಳ್ಳುವುದು. ಈ ವಿಷಯಗಳಿಗೆ ಸಂಬಂಧಿಸಿದಂತೆ ಗ್ರಾಮಪಂಚಾಯ್ತಿಗಳ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ ಹಕ್ಕು ಬಾಧ್ಯತೆಗಳ ಸ್ಪಷ್ಟ ಚಿತ್ರೀಕರಣವನ್ನು ಕೊಡುವುದು.
- ಭೂ ಬಳಕೆಯ ಬದಲಾವಣೆಗೆ ಸಂಬಂಧಿಸಿದ ಎಲ್ಲ ಪಾತ್ರಧಾರಿಗಳು ಈ ವಿಕೇಂದ್ರೀಕೃತ ಪ್ರಕ್ರಿಯೆಯಲ್ಲಿ ಖುದ್ದಾಗಿ ಭಾಗವಹಿಸಿ ತಮ್ಮ ವಾದಗಳನ್ನು ಮಂಡಿಸುವುದು, ಇದರಿಂದ ರೈತರಿಗೆ, ತಮ್ಮ ಜಮೀನಿನ ಮೇಲೆ, ಭವಿಷ್ಯದ ಮೇಲೆ ನಿಯಂತ್ರಣವನ್ನೊದಗಿಸಿ ಮುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಸಹಕರಿಸುವುದು. ಹಾಗೆಯೇ ತಮ್ಮ ಜೀವನಶೈಲಿಗಳನ್ನು ನಿರ್ಧರಿಸುವ ಶಕ್ತಿ ಮತ್ತು ಜವಾಬ್ದಾರಿಗಳನ್ನು ಗ್ರಾಮ ಸಮುದಾಯಗಳಿಗೇ ವಹಿಸುವುದು.
ಇದೆಲ್ಲಕ್ಕಿಂತ ಪ್ರಮುಖವಾಗಿ, ಕೃಷಿಯನ್ನು ಲಾಭದಾಯಕವಾಗಿ ಮಾಡಲು ಸಾಧ್ಯವಾದರೆ, ರೈತನ ಸಮಸ್ಯೆ ತಾನಾಗಿಯೇ ಪರಿಹಾರವಾಗಿ, ಅವನಿಗೆ ಬೇಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಶಕ್ತನಾಗುವನು.
written by Sham Kashyap
No comments:
Post a Comment