Search This Blog

Thursday, December 22, 2011

ಪರಿಸರ ಸಂರಕ್ಷಕರು ಮಾಡಿದ "ಕೊಲೆ"


ಜೂನ್ ೧೬, ೧೯೯೯ನೇ ಇಸವಿ. ನಾನು ತಮಿಳುನಾಡಿನ ಜೀವವೈವಿಧ್ಯ ಸಂರಕ್ಷಣಾ ಕೇಂದ್ರದ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ. ಬೆಳಿಗ್ಗೆ ಫಾರಂನ ಆಫೀಸ್ ಮುಂದೆ ನಿಂತಿದ್ದಾಗ ಚನ್ನರಾಜು ಒಂದು ಗಿಡದ ಮುಂದೆ ಕುಕ್ಕರಗಾಲಲ್ಲಿ ಕೂತಿದ್ದರು. ಅವರ ಭಂಗಿ ನೋಡಿ ತಡಕಿಕೊಳ್ಳುವಂತಹ ಡೈಲಾಗ್ ಹೇಳುವ ಮುಂಚೆಯೇ ‘ಮಲ್ಲಿ ಬಾಯಿಲ್ಲಿ’ ಎಂದರು. ಹತ್ತಿರ ಹೋದಾಗ ‘ಅಲ್ನೋಡು ಮಾರಾಯ ಕಡಜ’ ಎಂದು ಕಣ್ಣರಳಿಸಿದರು. ಬಗ್ಗಿ ನೋಡಿದರೆ ಮುಂಗೈ ಗಾತ್ರದ ಹೆಗ್ಗಡಜದ (ವ್ಯಾಸ್ಪ್) ಗೂಡೊಂದು ನೆಲದಿಂದ ಎರಡು ಅಡಿ ಎತ್ತರದಲ್ಲಿ ಸಣ್ಣ ರೆಂಬೆಯೊಂದಕ್ಕೆ ನೇತು ಬಿದ್ದಿತ್ತು. 
 
ಎರಡು ದಿನದ ಹಿಂದೆ ಹೇರಿಂದ್ಯಾಪನಹಳ್ಳಿಯಲ್ಲಿ ಅಂತಹುದೇ ಗೂಡೊಂದನ್ನು ನೋಡಿದ್ದೆ. ವೆಂಕಟಮ್ಮನ ಮನೆಯ ರೂಮಿನಲ್ಲಿ ಒಂದೂವರೆ ವರ್ಷದಿಂದ ಇತ್ತು. ಒಂದೂವರೆ ಅಡಿ ಉದ್ದ ಒಂದು ಅಡಿ ಅಗಲವಿದ್ದ ಅದು ಜಂತೆಗೆ ನೇತು ಬಿದ್ದಿತ್ತು. ಎರಡಂತಸ್ತಿನ ಕಟ್ಟಡದಂತೆ ಕಾಣುತ್ತಿದ್ದ ಅದರ ಆಕಾರ ಮತ್ತು ಬಣ್ಣ ಸಂಯೋಜನೆಯಂತೂ ಮನಮೋಹಕ. 
 
ನಮ್ಮ ಫಾರಂನ ಗೂಡು ದಿನೇ-ದಿನೇ ದೊಡ್ಡದಾಗುತ್ತಿತ್ತು. ಮೊದಲು ಒಂದೆರಡು ಹುಳಗಳು ಮಾತ್ರ ಅಡ್ಡಾಡುವಂತೆ ಭಾಸವಾದರೂ ಕ್ರಮೇಣ ಹಿಂಡುಗಟ್ಟಳೆ ಕಣ್ಣಿಗೆ ಬಿದ್ದವು. ಗೂಡು ದೊಡ್ಡದಾಗುವ ಪ್ರಕ್ರಿಯೆಯಲ್ಲಿ ಸುತ್ತ-ಮುತ್ತಲ ಎಲೆಗಳನ್ನು ಗೂಡಿನೊಳಕ್ಕೆ ಲೀನ ಮಾಡಿಕೊಳ್ಳುತ್ತಿದ್ದವು. 
 
ಜೂನ್ ೨೫ ಕೇಂದ್ರದ ನಿರ್ದೇಶಕರಾದ ವನಜಾ ಮೇಡಂ ಬಂದರು. ಕಡಜದ ಗೂಡಿನ ಬಗ್ಗೆ ಅವರ ಗಮನಸೆಳೆದಾಗ ‘ಕೇರ್ ಫುಲ್ಲಾಗಿರಿ’ ಎಂದರು. ಫಾರಂ ನೋಡಿಕೊಳ್ಳುವ ನರಸಿಂಹಯ್ಯತಾತ ‘ಅದೇನೂ ಮಾಡಲ್ಲಕಣೇಳ್ರವ್ವ, ಇಂತವು ಎಷ್ಟೋ ನೋಡಿದಿನಿ’ ಎಂದು ಅಭಯ ಕೊಟ್ಟಾಗ  ಖುಷಿಯಾಗಿ ಚೀನಾ ಪ್ರವಾಸ ಹೋಗುತ್ತಿರುವುದಾಗಿ ಹೇಳಿ ಹೋದರು.
 
ಜುಲೈ ೨ ಈಗ ಗೂಡು ಎಷ್ಟು ದೊಡ್ಡದಾಗಿತ್ತೆಂದರೆ ನೆಲಕ್ಕೆ ಕೆಲವೇ ಇಂಚು ಅಂತರವಿತ್ತು. ಹುಳುಗಳು ಗುಂಯ್ ಗುಟ್ಟುತ್ತಾ ಚಕ್ಕಳೆ-ಚಕ್ಕಳೆಯಾಗಿ ಗೂಡು ಕಟ್ಟುತ್ತಿದ್ದವು. ವರ್ಣ ವಿನ್ಯಾಸವಂತೂ ನಮಗೆಲ್ಲಾ ಅಚ್ಚರಿ ಉಂಟು ಮಾಡುತ್ತಿತ್ತು. ಆಫೀಸಿಗೆ ಕೆಲವೇ ಅಡಿ ದೂರದಲ್ಲಿದ್ದ ಅದನ್ನು ನಾವು ನಿರಂತರವಾಗಿ ಗಮನಿಸುತ್ತಿದ್ದೆವು.
 
ಜುಲೈ ೧೬ ಅದುವರೆಗೂ ಹುಳುಗಳಿಂದ ಯಾರಿಗೂ ತೊಂದರೆಯಾಗಿರಲಿಲ್ಲ. ಅವುಗಳ ಪಾಡಿಗೆ ಅವು ಹಾರಿ ಹೋಗುತ್ತಿದ್ದವು, ಬಾಯಲ್ಲಿ ಮರದ ಹೊಟ್ಟು ಇತ್ಯಾದಿ ಏನನ್ನೋ ತರುತ್ತಿದ್ದವು. ಆದರೆ ಇಂದು ಕುಕ್ ಕಮಲಮ್ಮನ ಮಗಳು ಸುಂದರಿ ಫಾರಂಗೆ ಬಂದಿದ್ದಳು. ತೀಟೆ ಸುಬ್ಬಿಯಾದ ಅವಳು ಗೂಡಿನ ಹತ್ತಿರ ಹೋಗುವುದು-ಬರುವುದು, ಬಾಯಲ್ಲಿ ವಿಚಿತ್ರ ಸದ್ದು ಹೊರಡಿಸುವುದು ಮಾಡುತ್ತಿದ್ದಳು. ಅವರಮ್ಮನಾದಿಯಾಗಿ ಎಲ್ಲರೂ ಇನಿಕಿಲ್ಲದಂತೆ ಕಡಜದ ತಂಟೆಗೆ  ಹೋಗಬೇಡವೆಂದು ಹೇಳುತ್ತಲೇ ಇದ್ದರು. 
 
ಇದ್ದಕ್ಕಿದ್ದಂತೆ ಅಯ್ಯಯ್ಯೋ ಅಮ್ಮಾ ಎಂಬ ಕೂಗು ಕೇಳಿಸಿತು. ನೋಡಿದರೆ ಸುಂದರಿ ಥಕಥೈ ಕುಣಿಯುತ್ತಿದ್ದಳು. ಮೊಣಕೈ ಮತ್ತು ತಲೆಗೆ ಹುಳುಗಳು ಕಚ್ಚಿ ಊತ ಬಂದಿತ್ತು. ಕಮಲಮ್ಮ ಮಗಳ ಕುಂಡಿಗೆ ಎರಡು  ಬಿಟ್ಟು ಈರುಳ್ಳಿ ವೈದ್ಯ ಮಾಡಿದಳು. ಅಂದಿನಿಂದ ಕಡಜದ ಬಗ್ಗೆ ಎಲ್ಲರೂ ಸ್ವಲ್ಪ ಹುಷಾರಾದರು.
 
ಜುಲೈ ೨೧ ಗೂಡು ಈಗ ಅನಾಮತ್ ನೆಲದ ಮೇಲೆ ಕೂತು ಬಿಟ್ಟಿತ್ತು. ತಾತ  ‘ಪೊಂ ಪೊಂ ಹಾರನ್ ಥರಾ ಐತೆ, ಮನಷರ್‌ಗಿದ್ದಂಗೆ ಬುದ್ದಿ ಐತಲ್ಲಾ ಈ ಬಡ್ಡಿ ಮಗನವ್ಕೆ’ ಎಂದು ಹುಳುಗಳ ಚಾಕಚಕ್ಯತೆಗೆ ಲೊಚಗುಡುತ್ತಿದ್ದರು. ಗೂಡಿಗೆ ಆಸರೆಯಾಗಿದ್ದ ಗಿಡದ ಮತ್ತಷ್ಟು ಎಲೆಗಳು ಗೂಡಿನಲ್ಲಿ ಲೀನವಾಗಿದ್ದವು. 
 
ನೆಲಕ್ಕೆ ಆತು ಕೂತಿದ್ದ ಗೂಡು ಹಿಗ್ಗುತ್ತಲೇ ಇತ್ತು. ಜೇನು ಹುಳುಗಳಿಗಿಂತ ತುಸು ದೊಡ್ಡ ಗಾತ್ರದ ಹುಳುಗಳ ಹಿಂಭಾಗ ಕಪ್ಪಗಿದ್ದು ಮಧ್ಯಭಾಗ ಕಂದು ಬಣ್ಣಕ್ಕಿತ್ತು. ಒಣಗಿದ ಮರದ ಪುಡಿ, ಹೊಟ್ಟು, ಮಣ್ಣು ಮುಂತಾದವನ್ನು ತಂದು ಪದರ ಪದರವಾಗಿ ಕಟ್ಟುತ್ತಿದ್ದ ಅವು ನಿರಂತರ ಚಟುವಟಿಕೆಯಿಂದ ಕೂಡಿದ್ದವು. ಮರಳುಗಾಡಿನ ಪದರಗಳಂತೆ ಗೂಡಿನ ವಿನ್ಯಾಸವಿತ್ತು. 
 
ಜುಲೈ ೨೨ ಬೆಂಗಳೂರಿನಿಂದ ಗೌರಿ ಎಂಬುವರು ಬಂದಿದ್ದರು. ಏನನ್ನು ನೋಡಿದರೂ ಬ್ಯೂಟಿಫುಲ್, ಫೆಂಟಾಸ್ಟಿಕ್ ಎನ್ನುವ ಗೌರಿ ಕಡಜದ ಗೂಡು ನೋಡುತ್ತಲೇ ‘ವಾವ್ ಇಟ್ ಲುಕ್ಸ್ ಲೈಕೆ ಬಲೂನ್ ಕೇಪಿ’ ಎಂದು ಕೂಗಿದರು. ಕವಿ ಮನಸಿನ ಚನ್ನರಾಜು ರಮ್ಯ ಭಾಷೆಯಲ್ಲಿ ಗೂಡಿನ ಹುಟ್ಟು ಬೆಳವಣಿಗೆಯನ್ನು ಗೌರಿಗೆ ವಿವರಿಸುತ್ತಿದ್ದರು. ಅವರಿಬ್ಬರ ಸಂಬಾಷಣೆಯ ಒಟ್ಟಾರೆ  ಸಾರಾಂಶವೆಂದರೆ  ಫಾರಂನಲ್ಲಿ ಕಡಜ ಗೂಡು ಕಟ್ಟಿರುವುದು ಒಳ್ಳೆಯ ಶಕುನ. ಫಾರಂನಲ್ಲಿರುವ ಬೆಳೆಗಳಿಗೆ ರೋಗ-ರುಜಿನಗಳು ಕಡಿಮೆಯಾಗುತ್ತವೆ ಎಂಬುದಾಗಿತ್ತು. ಅಷ್ಟಕ್ಕೇ ನಿಲ್ಲಿಸದೆ ಕಡಜ ಬಂದ ಮೇಲೆ ಯಾವ-ಯಾವ ಬೆಳೆಗೆ ಕೀಟ-ರೋಗ ಕಡಿಮೆಯಾಗಿದೆ ಎಂಬುದನ್ನು ಅನಾಲಿಸಿಸ್ ಮಾಡಬೇಕೆಂದು ಫಾರಂ ಮ್ಯಾನೇಜರ್ ಗಂಗಾಧರಸ್ವಾಮಿಗೆ ತಾಕೀತು ಮಾಡಿದರು. 
ಇಷ್ಟೆಲ್ಲಾ ಮಾತುಗಳನ್ನು ಅವರು ಗೂಡಿನ ಬಳಿ ನಿಂತೇ ಆಡುತ್ತಿದ್ದಾಗ ತಾತ ಅಲ್ಲಿಗೆ ಬಂದರು. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದ ಅವರು ಬೆಂಗಳೂರಿನ ಗೌರಿಗೆ ತಮ್ಮ ಅನುಭವಾಧಾರಿತ ಜ್ಞಾನ ಪ್ರದರ್ಶಿಸಲು ಮುಂದಾದರು. ಅಲ್ಲೇ ಆಗಿದ್ದು ಎಡವಟ್ಟು!
 
ತಾವು ಕಡಜ-ಪಡಜಗಳಿಗೆಲ್ಲಾ ಹೆದರುವ ಪೈಕಿಯಲ್ಲ ಎಂಬುದನ್ನು ತಿಳಿಸಲು ಗೂಡಿನ ಅತಿ ಸಮೀಪದಲ್ಲೇ ತಲೆ ಹಾಕಿದ ತಾತ ‘ನನ್ ಸರ್ವೀಸಿನಾಗೇ ಇಂತಾದನ್ನು ನೋಡಿಲ್ಲ ಕಣ್ ತಾಯಿ’ ಎಂದು ಶುರು ಮಾಡಿ ತಮ್ಮದೇ ಆದ ಲೋಕಲ್ ಶೈಲಿಯಲ್ಲಿ ‘ನಮ್ ಮೇಸ್ತ್ರಿಗಳೂ ಅವ್ರೆ ಅಡ್ನಾಡಿ ಮುಂಡೇವು, ಈತರ ಒಂದ್ ಮನೆ ಕಟ್ಲಿ ಅವರ ಯೇಗ್ತಿಗೆ’ ಎಂದು ಹೇಳುತ್ತಾ ಇನ್ನಷ್ಟು ಬಗ್ಗಿದರು. ಹಾಗೆ ಬಗ್ಗಿದವರು ಪಣಕ್ಕನೆ ಎದ್ದು ಅಶಿಶಿ ಅಶಿಶಿ ಎಂದು ಕೂಗಿಕೊಂಡು ವಲ್ಲಿಬಟ್ಟೆ, ಅಂಗಿ, ನಿಕ್ಕರುಗಳನ್ನೆಲ್ಲಾ ಕೊಡವುತ್ತಾ ಓಡತೊಡಗಿದರು. ಸ್ವಲ್ಪ ದೂರ ಓಡಿ ನಿಂತು ಎರಡೂ ತೊಡೆಗಳನ್ನು ತಿಕ್ಕಿಕೊಳುತ್ತಾ ‘ಕಚ್ಚಾಕಬುಟ್ವು, ನನ್ ಮಗ್ನವು ಸರ್‍ಯಾದ್ ಜಾಗಕ್ ಹೊಡದ್ವು’  ಮುಂತಾಗಿ ಕೂಗಿ  ‘ಇಲ್ಲಾ ಇವುನ್ನ ಇಲ್ಲೇ ಬಿಟ್ರೆ ಉಳಬಾಳಿಲ್ಲ, ಹತ್ತು ಕಡುದ್ರೆ ಮನ್‌ಶಾ ಔಟ್’ ಎನ್ನುತ್ತಾ ‘ಘನವಾಗಿ ಉರಿತದೆ’ ಎಂದು ಮತ್ತಷ್ಟು ತಿಕ್ಕಿಕೊಂಡು ‘ಈ ನನ್ ಮಗನವುನ್ನ ಸೀಮೆ ಎಣ್ಣೆ ಹಾಕಿ ಸುಟ್ ಬಿಡಬೇಕು’ ಎಂಬ ತೀರ್ಪಿತ್ತರು.
 
ಆಗ ಶುರುವಾಯಿತು ಚನ್ನರಾಜು ನಗು. ಗೌರಿ, ನಗಬೇಕೋ ಸುಮ್ಮನಿರಬೇಕೋ ತಿಳಿಯದೆ ಮುಖ-ಮುಖ ನೋಡುತ್ತಿದ್ದಳು. ತಾತ ಇನ್ನೇನು ಗೂಡಿನ ಒಳಕ್ಕೆ ಹೋಗಲು ಸಿದ್ಧರಾದಂತೆ  ತುಂಬಾ ಹತ್ತಿರ ಕೂತಿದ್ದರು. ಅದಕ್ಕೇ ಹುಳ ಕಡಿದಿದ್ದು ಎಂದು ಪರಿಸ್ಥಿತಿಯ ವಿಶ್ಲೇಷಣೆ ಮಾಡುತ್ತಿದ್ದರು ಚನ್ನರಾಜು. ತಾತ ಗೂಡಿನ ಹತ್ತಿರಕ್ಕೆ ಮೂತಿ ಇಟ್ಟಿದ್ದಂತೂ ನಿಜ.
 
ಕಡಜದ ಗೂಡಿಗೆ ಒಂದು ಕಡೆ ಮಾತ್ರ ಬಾಗಿಲಿದ್ದು ಅದು ನಾವು ಆಫೀಸಿಗೆ ಓಡಾಡುವ ಕಡೆಗೇ ಇತ್ತು. ಅದೇ ಅವುಗಳಿಗೆ ಮುಳುವಾದೀತೇ ಎಂಬ ಯೋಚನೆ ನನಗೆ. ಕಡಜಗಳು ಅಲ್ಲಿ ಗೂಡು ಕಟ್ಟಲು ಶುರುಮಾಡಿದ ಆರಂಭದ ೧೫-೨೦ ದಿವಸ  ಗೂಡು ನಿಧಾನವಾಗಿ ಹಿರಿದಾಗುತ್ತಿತ್ತು. ಆದರೆ ನಂತರ ಬೇಗ-ಬೇಗನೆ ಬೆಳೆಯುತ್ತಾ ಹೋಯಿತು. ಮನೆಕಟ್ಟುವ ಬಗ್ಗೆ ಹಳ್ಳಿಜನ ‘ತಳಪಾಯ ಒಂದಾದ್ರೆ ಸಾಕು ಆಮೆಕೆ ನೋಡುನೋಡ್ತಿದ್ದಂಗೆ ಮನೆ ಎದ್ ಬಿಡತದೆ’ ಎಂದು ಮಾತಾಡಿಕೊಳ್ಳುತ್ತಾರೆ.  ಕಡಜದ ಗೂಡೂ ಸಹ ಹಾಗೇ ಬೆಳೆಯುತ್ತಿತ್ತು.
 
ಜುಲೈ ೨೯ ಸ್ಟಾಫ್ ಮೀಟಿಂಗ್ ಇತ್ತು. ಆಫೀಸಿಗೆ ಬಂದವನೇ ಗೂಡು ದಿಟ್ಟಿಸಿದೆ. ಮತ್ತೊಂದು ಪದರ ಉಬ್ಬಿತ್ತು. ಆ ಕ್ಷಣ ಜಗತ್ತಿನ ಶ್ರೇಷ್ಠ ಚಿತ್ರಕಾರ ವಿನ್ಸಂಟ್ ವ್ಯಾನಗೋನ ಕೃತಿಯಂತೆ ಅದು ನನಗೆ ಭಾಸವಾಯಿತು. ಆತನ ‘ಗೋಧಿಯ ಹೊಲದ ಚಿತ್ರ’ ಹೀಗೇ ತೆರೆತೆರೆಯಾಗಿ ಕಾಣುತ್ತದೆ. ಕೇಪಿ ವಿವಿಧ ಕೋನಗಳಿಂದ ಫೋಟೊ ಕ್ಲಿಕ್ಕಿಸುತ್ತಿದ್ದರು. 
ಕಡಜದಿಂದ ಕಡಿಸಿಕೊಂಡಿದ್ದವರು, ಭಯಪಟ್ಟಿದ್ದವರೆಲ್ಲಾ ೨೦ ದಿವಸಗಳಿಂದ ಎಲ್ಲೋ ಟೂರ್ ಹೋಗಿದ್ದ ಮಾದೇವ್ ಅಂದು ಬರುತ್ತಿದ್ದಂತೇ  ಅವನಿಗೆ ದುಂಬಾಲು ಬಿದ್ದರು. ಹೇಗಾದರೂ ಮಾಡಿ ಆ ಗೂಡನ್ನು ನಿವಾರಿಸಬೇಕೆಂಬುದು ಅವರ ಬೇಡಿಕೆಯಾಗಿತ್ತು. 
 
‘ನಾವು ಬೇರೆ ದಾರಿಯಿಂದ ಓಡಾಡೋಣ, ಅದರ ತಂಟೆಗೆ ಹೋಗದಿದ್ದರೆ ಅವು ಏನೂ ಮಾಡುವುದಿಲ್ಲ’ ಎಂದು ನಾನು ಚನ್ನರಾಜು ಹೇಳಿದೆವು. ‘ಊದರ ಹಾಕಿ ಓಡಿಸೋಣ, ಇಲ್ಲಾ ಕೊಂಬೆ ಮುರಿದು ಹಾಗೇ ಬೇರೆ ಕಡೇ ಸಾಗಿಸೋಣ’ ಎಂದು ಕೇಪಿ ಅಭಿಪ್ರಾಯ. ‘ಗೂಡು ತುಂಬಾ ಸ್ಮೂತು, ಒಂದ್ ಕಡೆಯಿಂದ ಇನ್ನಿಂದ್ ಕಡೆಗೆ ವೆಕೇಟ್ ಮಾಡಕಾಗಲ್ಲ’ ಎಂದು ಗಂಗಾಧರಸ್ವಾಮಿ ಗಂಟಲಲ್ಲೇ ಗೊರ-ಗೊರ ಅಂದರು. 
 
ಫಾರಂನಲ್ಲಿ ಕೆಲಸ ಮಾಡುವ ತಾತ, ಕಮಲಮ್ಮ, ಭಾಷಾ, ಗೌರಾಚಾರ್, ನಮಗೆ ಅಲ್ ಕಡಿತು, ನಮಗೆ ಇಲ್ ಕಡಿತು ಅಂತ ಕಡಜದ ಬಗ್ಗೆ ದೂರು ಹೇಳುತ್ತಿದ್ದರು. ‘ಹತ್ತುಳ ಕಚ್ಚಿರೆ ಪಾರ್ಟಿ ಫಿನಿಶ್’ ಎಂದು ಮಹದೇವ್ ಮತ್ತೂ ಅವರನ್ನು ಹೆದರಿಸಿದ. ಅಷ್ಟೇ ಅಲ್ಲದೆ ಅಲ್ಲಿ ಹಂಗಾಯ್ತು, ಇಲ್ಲಿ ಹಿಂಗಾಯ್ತು ಅಂತ ಉದಾಹರಣೆಗಳನ್ನೂ ಕೊಟ್ಟ. ಆತನ ಹೇಳಿಕೆಗೆ ಹಿಮ್ಮೇಳ ಕೊಡುತ್ತಾ ತಾತ ‘ ಹತ್ತಲ್ಲ ಮಾದೇವಪ್ಪ ಐದ್  ಕಚ್ಚಿರೆ ಸಾಕು ಅವ್ನು ತಿರಗ ಮ್ಯಾಕ್ಕೇಳಲ್ಲ’ ಎಂದರು. ಕಡಜಕ್ಕೆ ಮುಂದಿನ ಬಲಿ ಯಾರಾಗುತ್ತಾರೆ ಎಂದು ಚನ್ನರಾಜ್ ನಗಾಡಿದರು. ಸಂಜೆ ಮೀಟಿಂಗ್ ಮುಗಿಸಿ ಮತ್ತೊಂದು ಸಲ ಗೂಡು ನೋಡಿ ಮನೆಗೆ ಬಂದೆ.
 
ಜುಲೈ ೩೦ ಬೆಳಿಗ್ಗೆ ಎಂಟೂವರೆಗೆ ಬರುತ್ತೇನೆಂದಿದ್ದ ಚನ್ನರಾಜು ಏಳೂವರೆಗೇ ಬಂದರು. ತುಂಬಾ ಸಪ್ಪಗಿದ್ದರು. ‘ಮನೇಲ್ ಜಗಳಾನೇನ್ರೀ’ ಅಂದಿದ್ದಕ್ಕೆ ‘ ಮಾದೇವ್ ವ್ಯಾಸ್ಪನ್ನ ಸುಟ್ಟುಬಿಟ್ರಂತೆ ಕಣ್ರೀ’ ಎಂದರು. ಗಾಬರಿಯಾಗಿ ಯಾವಾಗ ಎಂದೆ ‘ರಾತ್ರೀನೆ ಸುಟ್ರಂತೆ, ನಾವೆಲ್ಲಾ ಮೀಟಿಂಗ್ ಮುಗಿಸಿ ಬಂದಮೇಲೆ’ ಎಂದು ತುಂಬಾ ದುಗುಡದಿಂದ ಹೇಳಿದರು. ಅರಗಿನ ಅರಮನೆ ಥರಾ ಧಗ್ ಅಂತ ಒಂದೇ ಸಲ ಹತ್ಕೊಂಡು ಉರುದೋಯ್ತಂತೆ, ಎಲ್ಲಾ ಮೊಟ್ಟೆ ಇಟ್ಟು ಮರಿ ಮಾಡಿದ್ವು ಅನ್ಸುತ್ತೆ ಮಾರಾಯ, ಅನ್ಯಾಯ ಆಗೋಯ್ತು’ ಎಂದು ಹೇಳಿ ನಿಟ್ಟುಸಿರು ಬಿಟ್ಟರು. 
 
‘ಬಯೋಡೈವರ್ಸಿಟಿ ಕನ್ಸರ್ವೇಷನ್ ಸೆಂಟರ್ರು, ತುಂಬಾ ಸೇಫು ಅಂದ್ಕಂಡು ಬಂದು ಗೂಡು ಕಟ್ಟಿದ್ವು, ಒಳ್ಳೆ ಶಾಸ್ತಿ ಮಾಡಿದ್ವಿ’ ಅಂತಂದೆ. ಮತ್ತೇನನ್ನೂ ಹೇಳಲು ಮನಸ್ಸಾಗಲಿಲ್ಲ.
ಹೇರಿಂದ್ಯಾಪನಹಳ್ಳಿ ವೆಂಕಟಮ್ಮನ ಮನೆ ಊರಿನ ನಡೂಮಧ್ಯ ಇದೆ. ಅಲ್ಲಿ ಕಡಜದ ಗೂಡು ಒಂದೂವರೆ ವರ್ಷದಿಂದ ಇತ್ತು. ಆ ಮನೆಯವರು ಕಡಜ ಗೂಡು ಕಟ್ಟಲು ಶುರುಮಾಡಿದ ಮೇಲೆ ಶಾಸ್ತ್ರ ಕೇಳಿದರಂತೆ, ಶಾಸ್ತ್ರದಲ್ಲಿ ಎಲ್ಲಾ ಒಳ್ಳೆಯದಾಗುತ್ತದೆ ಎಂದು ಬಂದಾಗ ಅವರು ಗೂಡಿನ ತಂಟೆಗೇ ಹೋಗದೆ ಆ ಗೂಡಿದ್ದ ರೂಮನ್ನು ಬಳಸುತ್ತಲೇ ಇರಲಿಲ್ಲ. ಹುಳುಗಳೂ ಸಹ ಯಾರಿಗೂ ಕಡಿದಿರಲಿಲ್ಲ. ನಮ್ಮ ಸಂಸ್ಥೆಯಾದರೋ ಜೀವವೈವಿಧ್ಯ ಸಂರಕ್ಷಣೆಗೆಂದೇ ಇದ್ದದ್ದು. ರೈತರಿಗೂ ನಮ್ಮ ಸಂಸ್ಥೆಗೂ ಇರುವ ವ್ಯತ್ಯಾಸದ ಬಗ್ಗೆ ತುಂಬಾ ಹೊತ್ತು ಇಬ್ಬರೂ ಮಾತಾಡಿದೆವು.
 
ಆಫೀಸಿಗೆ ಹೋದೆ. ಗೂಡಿನ ಜಾಗದಲ್ಲಿ ಅರೆ-ಬರೆ ಸುಟ್ಟ ಹುಳಗಳು ಕಪ್ಪಗೆ ಬಿದ್ದಿದ್ದವು. ಗೂಡು ಸುಟ್ಟಾಗ ಅದೆಲ್ಲಿ ಹೋಗಿತ್ತೋ ಒಂದೇ ಒಂದು ಹುಳ ಅಲ್ಲಿ ಬಂದು ಹುಡುಕಾಡುತ್ತಿತ್ತು. ಮೂಸಿ ನೋಡುವುದು, ಸ್ವಲ್ಪ ಹೊತ್ತು ಹಾರಾಡುವುದು, ಕೂರುವುದು ಮಾಡಿ ಸುಯ್ಯೆಂದು ಹಾರಿಹೋಯ್ತು.

Written by Mallikarjuna Hosapalya

No comments:

Post a Comment